ಪ್ಲೇ ಆಫ್ ಹೊಸ್ತಿಲಲ್ಲಿ ರೈಸರ್ಸ್
ಹೈದರಾಬಾದ್: ಪ್ಲೇ-ಆಫ್ ಹಂತಕ್ಕೆ ಕಾಲಿಡಲು ತವಕಿಸುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ, ತನ್ನ ತವರಿನಲ್ಲಿ ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ಸ್ ತಂಡವನ್ನು ಎದುರಿಸುತ್ತಿದೆ.
ಅಂಕಪಟ್ಟಿಯ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ತಂಡಗಳಲ್ಲೇ ಮುಂಚೂಣಿಯಲ್ಲಿರುವ ಸನ್ರೈಸರ್ಸ್ ತಂಡ, ಈಗಾಗಲೇ ಪ್ಲೇ-ಆಫ್ ಕನಸನ್ನು ಕೈಬಿಟ್ಟಿರುವ ಕೋಲ್ಕತಾ ಎದುರು ಸುಲಭವಾಗಿ ಗೆಲವು ಪಡೆಯಬಲ್ಲದೇ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದ ಮೇಲೆ, ಸನ್ರೈಸರ್ಸ್ ತಂಡ ತನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ವೃದ್ಧಿಸಿಕೊಂಡಿದೆ. ಅದೂ ಅಲ್ಲದೇ, ತವರಿನಲ್ಲೇ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿರುವುದರಿಂದ ಪಂದ್ಯ ಗೆಲ್ಲುವ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿರಲೂಬಹುದು. ಏಕೆಂದರೆ, ಮೇ 8ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದ ಸನ್ರೈಸರ್ಸ್, ಆನಂತರ ತವರಿನಲ್ಲಿ ಆಡಿರುವ ಯಾವುದೇ ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಹಾಗಾಗಿ, ಕೆಕೆಆರ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲೂ ಜಯಗಳಿಸುವ ವಿಶ್ವಾಸ ಆ ತಂಡದ್ದು. ಸನ್ರೈಸರ್ಸ್ ತಂಡದ ಈ ಯಶಸ್ಸಿನ ಅಭಿಯಾನದಲ್ಲಿ ಅದರ ಬೌಲಿಂಗ್ ವಿಭಾಗದ ಕೊಡುಗೆಯೇ ಹೆಚ್ಚು. ವಿಶ್ವದ ಶ್ರೇಷ್ಠ ಬೌಲರ್ಗಳಲ್ಲೊಬ್ಬರಾಗಿರುವ ಡೇಲ್ ಸ್ಟೇಯ್ನ್, ಅಮಿತ್ ಮಿಶ್ರಾ ಹಾಗೂ ಕರಣ್ ಶರ್ಮಾ, ತಿಸಾರಾ ಪೆರೇರಾ ಹಾಗೂ ಡರೇನ್ ಸಾಮಿ ಅವರಂಥ ಬೌಲರ್ಗಳು ಸನ್ರೈಸರ್ಸ್ನ ಬೌಲಿಂಗ್ ವಿಭಾಗವನ್ನು ಸದೃಢಗೊಳಿಸಿದ್ದಾರೆ. ಇವರೆಲ್ಲರೂ ಕೂಡಿರುವ ಬೌಲಿಂಗ್ ವಿಭಾಗ ಎಷ್ಟು ಬಲಿಷ್ಠವಾಗಿದೆ ಎಂಬುದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೇ ಸಾಬೀತಾಗಿದೆ. ಕೇವಲ 137 ರನ್ ಗಳಿಸಿದ್ದ ಸನ್ರೈಸರ್ಸ್ ತಂಡದ ಮೊತ್ತವನ್ನು ಚೇಸ್ ಮಾಡಲು ಕ್ರೀಸ್ಗೆ ಇಳಿದಿದ್ದ ರಾಜಸ್ಥಾನ ತಂಡವನ್ನು ಕೇವಲ 113 ರನ್ಗಳಿಗೆ ಆಲೌಟ್ ಮಾಡಿತ್ತು, ಈ ಬೌಲಿಂಗ್ ಬಳಗ. ಸ್ಟೇಯ್ನ್, ಮಿಶ್ರಾ ಹಾಗೂ ಪೆರೇರಾ ತಲಾ 2 ವಿಕೆಟ್ ಗಳಿಸಿ, ಜಯದ ರೂವಾರಿಗಳಾಗಿದ್ದರು.
ಆದರೆ, ಸನ್ರೈಸರ್ಸ್ನ ಬ್ಯಾಟಿಂಗ್ ವಿಭಾಗ ಮಾತ್ರ ತುಸು ದುರ್ಬಲ. ಭರವಸೆಯ ಆಟಗಾರರಾದ ಶಿಖರ್ ಧವನ್, ಕೆಮೆರೂನ್ ವೈಟ್ ಹಾಗೂ ನಾಯಕ ಕುಮಾರ ಸಂಗಕ್ಕಾರ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಲಭ್ಯವಾಗಿಲ್ಲದಿರುವುದು ರೈಸರ್ಸ್ ಬ್ಯಾಟಿಂಗ್ ವಿಭಾಗದ ಕಳೆಗುಂದಿಸಿದೆ. ಹನುಮ ವಿಹಾರಿ, ತಿಸಾರಾ ಪರೇರಾ, ಪಾರ್ಥೀವ್ ಪಟೇಲ್ ಪರವಾಗಿಲ್ಲ. ಸಮಾಂತ್ರಾಗೆ ಇತ್ತೀಚೆಗೆ ಮಾತ್ರ ಅವಕಾಶ ಸಿಕ್ಕಿದ್ದು, ಭಾನುವಾರ ಅವರ ಆಟ ಹೇಗಿರುತ್ತೋ ಕಾದು ನೋಡಬೇಕು.
ಹಾಲಿ ಚಾಂಪಿಯನ್ಗಳ ಪರಿಸ್ಥಿತಿ: ಇನ್ನು, ನೈಟ್ ರೈಡರ್ಸ್ ತಂಡ, ಕಳೆದ ವರ್ಷ ತಾನು ಪಡೆದಿದ್ದ ಐಪಿಎಲ್ ಪ್ರಶಸ್ತಿ ಹಾಗೂ ಚಾಂಪಿಯನ್ ಪಟ್ಟವನ್ನು ಈ ಬಾರಿ ಇತರರಿಗೆ ಬಿಟ್ಟುಕೊಡುವುದು ಖಚಿತವಾಗಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಆ ತಂಡ ಸ್ಥಿರವಾದ ಪ್ರದರ್ಶನ ನೀಡಿಲ್ಲ. ಇದೇ ಕೆಕೆಆರ್ನ ಪ್ರಮುಖ ಸಮಸ್ಯೆ. ಗೌತಮ್ ಗಂಭೀರ್, ಆಲ್ರೌಂಡರ್ ಯೂಸುಫ್ ಪಠಾಣ್ ಹಾಗೂ ಜಾಕ್ ಕಾಲಿಸ್, ರಿಯಾನ್ ಟೆನ್ ಡಾಸ್ಕೆಟ್ ಹಾಗೂ ಬಾಲಾಜಿ ಅವರಂಥ ಉತ್ತಮ ಪ್ರತಿಭೆಗಳಿದ್ದರೂ, ತಂಡ ಈ ಬಾರಿ ಹಲವಾರು ಪಂದ್ಯಗಳಲ್ಲಿ ಎಡವಿದ್ದು ಅದರ ಹಿನ್ನೆಡೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

