ಕ್ರೀಡೆ

ಸೋತವರಿಗೆ ಕೊನೆ ಸ್ಥಾನ

Published On :

ಪುಣೆ: ಸೋಲಿನ ಮೇಲೆ ಸೋಲಿನ ಹೊಡೆತ ತಿಂದಿರುವ ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಭಾನುವಾರ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಸೋತ ತಂಡ 6ನೇ ಆವೃತ್ತಿಯಲ್ಲಿ ಕೊನೆ ಸ್ಥಾನವನ್ನು ಪಡೆಯಲಿದೆ.
ಕೊನೆ ಸ್ಥಾನವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಪಂದ್ಯದಲ್ಲಿ ಇತ್ತಂಡಗಳು ಸೆಣೆಸಾಟ ನಡೆಸುತ್ತಿವೆ. ಎರಡೂ ತಂಡಗಳು ತಲಾ 15 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆಲವು ಕಂಡರೆ, 12 ಪಂದ್ಯಗಳಲ್ಲಿ ಸೋಲನುಭವಿಸಿದೆ. ಹಾಗಾಗಿ ಪಂದ್ಯಾವಳಿಯಲ್ಲಿ ಕೊನೆಯ ಪಂದ್ಯವನ್ನಾಡುತ್ತಿರುವ ಎರಡೂ ತಂಡಗಳು ಗೆಲವಿನ ಮೂಲಕ ತಮ್ಮ ಅಭಿಯಾನವನ್ನು ಮುಕ್ತಾಯಗೊಳಿಸಲು ಎದುರು ನೋಡುತ್ತಿವೆ.
ಎರಡೂ ತಂಡಗಳು ಉತ್ತಮ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದರು, ತಂಡದಲ್ಲಿ ಸಾಂಘೀಕ ಪ್ರದರ್ಶನದ ಕೊರತೆಯಿಂದ ಪಂದ್ಯಾವಳಿಯಲ್ಲಿ ಹೆಚ್ಚು ಕಹಿ ಅನುಭವವನ್ನು ಪಡೆಯಿತು.
ಕಳೆದ ಬಾರಿ ಡೆಲ್ಲಿ ತಂಡ ಲೀಗ್ ಹಂತದ ಅಂತ್ಯದಲ್ಲಿ ಮೊದಲ ಸ್ಥಾನ ಪಡೆದರೆ, ಪುಣೆ ತಂಡ ಕೊನೆಯ ಸ್ಥಾನದಲ್ಲಿತ್ತು.
ಇನ್ನು ಐಪಿಎಲ್ 4ನೇ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಕೊನೆ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದು, ಪುಣೆ 9 ಹಾಗೂ ಡೆಲ್ಲಿ 10ನೇ ಸ್ಥಾನ ಪಡೆದಿತ್ತು. ಈ ಮೂಲಕ ಪುಣೆ ತಂಡ ಕಳೆದ ಮೂರು ವರ್ಷಗಳಲ್ಲಿ ಕೊನೆಯ ಎರಡು ಸ್ಥಾನಗಳಲ್ಲೇ ಮುಂದುವರಿಯುವಂತಾಗಿದೆ.
ಡೆಲ್ಲಿ ತಂಡದಲ್ಲಿ ನಾಯಕ ಮಹೇಲಾ ಜಯವರ್ಧನೆ, ವೀರೇಂದ್ರ ಸೆಹ್ವಾಗ್, ಡೇವಿಡ್ ವಾರ್ನರ್‌ರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದರೂ ರನ್‌ಗಳಿಸಲು ಪರದಾಡಿದ್ದು, ತಂಡದ ವೈಫಲ್ಯಕ್ಕೆ ಪ್ರಮುಖ ಕಾರಣವಾಯಿತು.
ಇನ್ನು ಕಳೆದ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಮಾರ್ನೆ ಮಾರ್ಕೆಲ್ ಈ ಬಾರಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಇರ್ಫಾನ್ ಪಠಾಣ್, ಉಮೇಶ್ ಯಾಧವ್ ಸಹ ವಿಫಲರಾಗಿದ್ದಾರೆ.
ಇನ್ನು ಪುಣೆ ತಂಡದಲ್ಲಿ ಏರಾನ್ ಫಿಂಚ್, ರಾಸ್ ಟೇಲರ್, ಲೂಕ್ ರೈಟ್, ಸ್ಟೀವನ್ ಸ್ಮಿತ್, ಉತ್ತಪ್ಪ ರಂತಹ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರು, ಸಾಧಾರಣ ಮೊತ್ತವನ್ನು ಬೆನ್ನಟ್ಟಲು ವಿಫಲವಾಗಿದೆ.
ಅಲ್ಲದೆ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಹೊರತುಪಡಿಸಿ ಉಳಿದಂತೆ ಯಾವುದೇ ಬೌಲರ್‌ಗಳು ಪರಿಣಾಮಕಾರಿ ಬೌಲಿಂಗ್ ನಡೆಸಲು ಯಶಸ್ವಿಯಾಗಲಿಲ್ಲ. ಇದು ಪುಣೆ ತಂಡಕ್ಕೆ ಮಾರಕವಾಗಿ ಪರಿಣಮಿಸಿತು.
ಇನ್ನು ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಜಯಗಳಿಸಿರುವ ಪುಣೆ ತಂಡ ಆತ್ಮ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಫಿಂಚ್ ಜತೆಗೆ ಮನಿಷ್ ಪಾಂಡೆ ರನ್‌ಗಳಿಸಿದ್ದು, ತಂಡಕ್ಕೆ ಸಮಾದಾನ ತಂದಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ವೇಯ್ನ್ ಪಾರ್ನೆಲ್ ಭುವನೇಶ್ವರ್‌ಗೆ ಉತ್ತಮ ಸಾಥ್ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.