ಕ್ರೀಡೆ

ಯಾರು ನೇರ ಫೈನಲ್‌ಗೆ?

Published On :

ನವದೆಹಲಿ: ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಂಗಳವಾರ ನಡೆಯಲಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಮೊದಲು ಫೈನಲ್ ಪ್ರವೇಶಿಸುವ ಅದೃಷ್ಟ ಯಾರಿಗೆ ಎಂಬುದು ಈಗ ಕುತೂಹಲ ಮೂಡಿಸಿದೆ. ಪಂದ್ಯಾವಳಿಯ ಲೀಗ್ ಹಂತದಲ್ಲಿ ಆಡಿರುವ 16 ಪಂದ್ಯಗಳಲ್ಲಿ 11ರಲ್ಲಿ ಜಯ ಸಾಧಿಸಿರುವ ಉಭಯ ತಂಡಗಳೂ ಸಮಾನವಾದ ಸಾಧನೆ ಮಾಡಿವೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ತವರಿನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿದೆ. ಆದರೆ, ಚೆನ್ನೈ ತಂಡ ಮಿಶ್ರಫಲ ಅನುಭವಿಸಿದೆ. ತವರಿನಲ್ಲಿ ನಡೆದ ಮತ್ತು ತವರಿನಿಂದ ಹೊರಗೆ ಎರಡೂ ಪಂದ್ಯಗಳಲ್ಲೂ ಚೆನ್ನೈ ವಿರುದ್ಧ ಜಯ ಸಾಧಿಸಿರುವುದು ಅದರ ವಿಶ್ವಾಸವನ್ನು ಹೆಚ್ಚಿಸಬಹುದು.
ಉಭಯ ತಂಡಗಳೂ ಒಬ್ಬ ಆಟಗಾರನಿಗೆ ಪ್ರತಿಯಾಗಿ ಮತ್ತೊಬ್ಬ ಆಟಗಾರನನ್ನು ಹೊಂದಿರುವುದು ವಿಶೇಷವಾಗಿದೆ. ಮುಂಬೈನ ಸಚಿನ್ ತೆಂಡೂಲ್ಕರ್ ಮತ್ತು ಚೆನ್ನೈನ ರವಿಚಂದ್ರನ್ ಅಶ್ವಿನ್, ಮಹೇಂದ್ರ ಸಿಂಗ್ ಧೋನಿ ಮತ್ತು ಹರ್ಭಜನ್, ಕೀರನ್ ಪೊಲಾರ್ಡ್ ಮತ್ತು ಮೋಹಿತ್ ಶರ್ಮಾ ಹಾಗೂ ಮೈಕ್ ಮತ್ತು ಪ್ರಗ್ಯಾನ್ ಓಜಾ ಹೀಗೆ ಉಭಯ ಪ್ರತಿಯೊಬ್ಬ ಆಟಗಾರನಿಗೆ ತಮ್ಮ ಆಟಗಾರರನನ್ನೇ ಆಯುಧವನ್ನಾಗಿ ರಚಿಸಿಕೊಂಡಿವೆ.
ನಾಯಕ ರೋಹಿತ್ ಶರ್ಮಾ ಐಪಿಎಲ್‌ಗೆ ಹೇಳಿ ಮಾಡಿಸಿದ ಆಟಗಾರನಂತ ಪ್ರದರ್ಶನ ನೀಡುತ್ತಿದ್ದಾರೆ. 526 ರನ್ ಗಳಿಸಿರುವ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ದೈತ್ಯ ಆಟಗಾರ ಪೊಲಾರ್ಡ್ ಸಹ ಬ್ಯಾಟಿಂಗ್‌ನಲ್ಲಿ ಮುಂಬೈಗೆ ನೆರವಾಗಬಲ್ಲರು.
ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಜಾನ್ಸನ್ (22 ವಿಕೆಟ್) ಹರ್ಭಜನ್ ಸಿಂಗ್ (19 ವಿಕೆಟ್) ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹರ್ಭಜನ್ ಸಿಂಗ್ ಎದುರಾಳಿ ತಂಡದ ಅಶ್ವಿನ್‌ಗಿಂತ ಉತ್ತಮ ಪ್ರದರ್ಶನ ತೋರಿದ್ದು, ಈ ಪಂದ್ಯದಲ್ಲೂ ಅದನ್ನು ಸಾಬೀತುಪಡಿಸಬೇಕಿದೆ.ಮುಂಬೈ ಇಂಡಿಯನ್ಸ್ ತಂಡ ಬೃಹತ್ ಮೊತ್ತವನ್ನು ಪೇರಿಸುವುದರಲ್ಲಿ ಹೆಸರಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಪಡೆ ಯಾವುದೇ ರೀತಿಯ ಮೊತ್ತವನ್ನು ಚೇಸ್ ಮಾಡುವಲ್ಲಿ ಹೆಸರು ಮಾಡಿದೆ. ಹೀಗಾಗಿ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೆಲವೇ ವರ್ಷಗಳ ಹಿಂದೆ ಅಂತಿಮ ಐದು ಓವರ್‌ಗಳಲ್ಲಿ 60 ರನ್ ಗಳಿಸಬೇಕಾದರೆ ಸಾಧ್ಯವಾಗದ ಮಾತಾಗಿತ್ತು. ಆದರೆ, ಇದನ್ನು ಸುಲಭವಾಗಿಸಿದ್ದು ಚೆನ್ನೈ ತಂಡದ ನಾಯಕ ಧೋನಿ. ನಾಯಕ ಧೋನಿ ಕ್ರೀಸ್‌ನಲ್ಲಿದ್ದರೆ ಎಷ್ಟೇ ದೊಡ್ಡ ಮೊತ್ತದ ಗುರಿಯನ್ನು ನಿಭಾಯಿಸಬಲ್ಲರು. ಅದಕ್ಕೆ ಧೋನಿ ಒಂದು ಜೋಕ್ ಅನ್ನು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪಡೆ ಪಂದ್ಯವನ್ನು ಆರಂಭಿಸುವುದೇ ಅಂತಿಮ 10 ಓವರ್‌ಗಳಲ್ಲಿ ಎಂದಿದ್ದಾರೆ ಧೋನಿ.
ಇನ್ನು ಅದ್ಭುತ ಫಾರ್ಮ್‌ನಲ್ಲಿರುವ ಮೈಕ್ ಹಸ್ಸಿ 646 ರನ್ ಗಳಿಸಿದ್ದು ಚೆನ್ನೈ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಧೋನಿ 398 ರನ್ ಗಳಿಸಿದ್ದು ಪಂದ್ಯವನ್ನು ಗೆಲ್ಲಿಸಿಕೊಡುವ ಧೋನಿ ಸಾಮರ್ಥ್ಯ ಮಾತ್ರ ಅತ್ಯದ್ಭುತವಾದದ್ದಾಗಿದೆ.
ಇನ್ನು ಚೆನ್ನೈ ಬೌಲಿಂಗ್ ವಿಭಾಗದಲ್ಲಿ ಡ್ವೇನ್ ಬ್ರಾವೊ ಎದುರಾಳಿ ತಂಡಗಳಿಗೆ ಭೀತಿಯನ್ನು ಹುಟ್ಟಿಸಿದ್ದಾರೆ. ಇದುವರೆಗೂ 25 ವಿಕೆಟ್ ಪಡೆದಿರುವ ಬ್ರಾವೊ ಪರ್ಪಲ್ ಕ್ಯಾಪ್ ಪಡೆಯುವ ಕಾತರದಲ್ಲಿದ್ದಾರೆ.
ಹರ್ಯಾಣದ ವೇಗದ ಬೌಲರ್ ಮೊಹಿತ್ ಶರ್ಮಾ ಈ ಬಾರಿ ಐಪಿಎಲ್‌ನಲ್ಲಿ ಮಿಂಚಿದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಇದುವರೆಗೂ 17 ವಿಕೆಟ್ ಪಡೆದಿರುವ ಮೋಹಿತ್ ಅಂತಿಮ ಪಂದ್ಯಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕ್ರಿಸ್ ಮಾರೀಸ್, ಅಲ್ಬೀ ಮಾರ್ಕೆಲ್ ಹಾಗೂ ಜಸನ್ ಹೊಲ್ಡ್‌ರ್ ಸಹ ಬೌಲಿಂಗ್‌ನಲ್ಲಿ ಚೆನ್ನೈಗೆ ಆಶ್ರಯವಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.