ಫೈನಲ್ಗೆ ವೇದಿಕೆ ಸಜ್ಜು

ಕೋಲ್ಕತಾ: ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಗಳ ವಿವಾದದ ನಡುವೆಯೇ ಐಪಿಎಲ್ 6ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ಅಂತಿಮ ಹಣಾಹಣಿಯಲ್ಲಿ 2 ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.
ಈ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸುವ ಮೂಲಕ 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಪಣತ್ತೊಟ್ಟಿದ್ದು, ಇತ್ತ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿಚೆನ್ನೈ ಸೂಪರ್ ಕಿಂಗ್ಸ್ ತಂಡ ಒತ್ತಡದಲ್ಲಿ ಸಿಲುಕಿದ್ದು, ಈ ಪಂದ್ಯದಲ್ಲಿ ಮುಂಬೈ ತಂಡವನ್ನು ಯಾವ ರೀತಿ ಎದುರಿಸಲಿದೆ ಎಂದು ಕಾದು ನೋಡಬೇಕು.
ಸಿಎಸ್ಕೆ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ಜಾಲದಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ರಾಜಿನಾಮೆ ನೀಡಬೇಕು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ವಜಾಗೊಳಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಮಹೇಂದ್ರ ಸಿಂಗ್ ಧೋನಿ ನೇತೃತ್ವ ತಂಡ ಒತ್ತಡಕ್ಕೆ ಸಿಲುಕಿದೆ.
ಚೆನ್ನೈ ತಂಡ ಒತ್ತಡಕ್ಕೆ ಸಿಲುಕಿರುವುದು ಮುಂಬೈ ತಂಡ ಮೇಲುಗೈ ಸಾಧಿಸಲು ಉತ್ತಮ ಅವಕಾಶ ದೊರೆತಿದ್ದು, ರೋಹಿತ್ ಶರ್ಮಾ ಪಡೆ ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನು ತಂಡಗಳ ಬಲಾಬಲವನ್ನು ನೋಡುವುದಾದರೆ, ಚೆನ್ನೈ ತಂಡ ಎಂದಿನಂತೆ ಸಮತೋಲಿತ ತಂಡವಾಗಿದ್ದು, ಸಾಘಿಕ ಪ್ರದರ್ಶನವನ್ನು ಮುಂದುವರಿಸುವ ಭರವಸೆಯನ್ನು ಹೊಂದಿದೆ. ಇನ್ನು ಮುಂಬೈ ತಂಡವು ಸಹ ಎಲ್ಲಾ ವಿಭಾಗಗಳಲ್ಲಿ ನಿಯಂತ್ರಣ ಕಂಡುಕೊಂಡಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದೆ.ಇನ್ನು ಇತ್ತಂಡಗಳ ಮಧ್ಯಮ ಕ್ರಮಾಂಕವನ್ನು ನೋಡುವುದಾದರೆ, ಚೆನ್ನೈ ತಂಡದಲ್ಲಿ ಬ್ರಾವೊ, ಬದ್ರಿನಾಥ್, ಧೋನಿ, ಜಡೇಜಾರಂತಹ ಉತ್ತಮ ಬ್ಯಾಟ್ಸ್ಮನ್ಗಳಿದ್ದು, ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಪೊಲಾರ್ಡ್, ರಾಯುಡು ರಂತದ ಉತ್ತಮ ಬ್ಯಾಟ್ಸ್ಮನ್ಗಳಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ಈ ಎರಡೂ ತಂಡಗಳು ಉತ್ತಮ ಅಸ್ತ್ರಗಳನ್ನು ಹೊಂದಿದ್ದಾರೆ. ಮುಂಬೈಪರ ಮಿಚ್ಚೆಲ್ ಜಾನ್ಸನ್, ಲಸಿತ್ ಮಾಲಿಂಗಾ, ಧವಳ್ ಕುಲಕರ್ಣಿ ವೇಗದ ದಾಳಿಯನ್ನು ನಡೆಸಿದರೆ, ಸ್ಪಿನ್ ವಿಭಾಗದಲ್ಲಿ ಅನುಭವಿ ಹರ್ಭಜನ್ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸಿಎಸ್ಕೆ ತಂಡದ ಬೌಲಿಂಗ್ನಲ್ಲಿ ಮೊಹಿತ್ ಶರ್ಮಾ ಹಾಗೂ ಕ್ರಿಸ್ ಮೊರಿಸ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದು, ಬ್ಯಾಟ್ಸ್ಮನ್ಗಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ.
ಇನ್ನು ಬ್ರಾವೊ ಹಾಗೂ ಅಲ್ಬಿ ಮಾರ್ಕೆಲ್ ತಮ್ಮ ಆಲ್ರೌಂಡ್ ಪ್ರದರ್ಶನವನ್ನು ಉತ್ತಮವಾಗಿ ಮುಂದುವರಿಸುತ್ತಿದ್ದು, ಅಶ್ವಿನ್ ಹಾಗೂ ಜಡೇಜಾ ಸ್ಪಿನ್ ವಿಭಾಗದಲ್ಲಿ ಯಶಸ್ವಿಯಾಗಿದ್ದಾರೆ.
ಮಾಧ್ಯಮಗಳಿಂದ ತಪ್ಪಿಸಿಕೊಂಡ ಧೋನಿ
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯಸ್ಥ ಗುರುನಾಥ್ ಮೇಯಪ್ಪನ್ ಹೆಸರು ತಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮಾಧ್ಯಮಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಭಾನುವಾರ ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ಹಾಗಾಗಿ ಶನಿವಾರ ನಡೆದ ಮಾಧ್ಯಮಗಳ ಜತೆಗಿನ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಧೋನಿ ಹಾಜರಾಗಲಿಲ್ಲ. ಅಲ್ಲದೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಸಹ ಈ ಸುದ್ದಿ ಗೋಷ್ಠಿಯಿಂದ ದೂರ ಉಳಿದಿದ್ದು, ಎರಡೂ ತಂಡಗಳ ಕೋಚ್ಗಳಾದ ಸಿಎಸ್ಕೆ ತಂಡದ ಸ್ಟೀಫನ್ ಫ್ಲೆಮ್ಮಿಂಗ್ ಹಾಗೂ ಮುಂಬೈ ತಂಡದ ಜಾನ್ ರೈಟ್ ಸುದ್ದಿಗೋಷ್ಠಿಗೆ ಹಾಜರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


