ಕ್ರೀಡೆ

ಸುಸ್ಥಿತಿಯಲ್ಲಿ ಅಲಸ್ಟೇರ್ ಪಡೆ

Published On :

ಲೀಡ್ಸ್: ಫಿನ್ ಹಾಗೂ ಸ್ವಾನ್ ಅವರ ಮಾರಕ ಬೌಲಿಂಗ್ಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ನ ತಮ್ಮ ಮೊದಲ ಇನಿಂಗ್ಸ್ನಲ್ಲಿ 174 ರನ್ಗಳಿಗೆ ಆಲೌಟ್ ಆಯಿತು.
ಮೊದಲು ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡ, 354 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಪಡೆ, 174 ರನ್ಗಳಿಗೆ ಆಲೌಟ್ ಆಗುವ ಮೂಲಕ, 180 ರನ್ಗಳ ಹಿನ್ನೆಡೆಯನ್ನು ಅನುಭವಿಸಿತು.
ಆನಂತರ, ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಪತ್ರಿಕೆ ಮುದ್ರಣಕ್ಕೆ ಹೋಗುವ ಸಂದರ್ಭದಲ್ಲಿ, 27 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 87 ರನ್ ಪೇರಿಸಿತ್ತು.
ಇಂಗ್ಲೆಂಡ್ ತಂಡ ನೀಡಿದ್ದ ಸ್ಪರ್ಧಾತ್ಮಕ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್, ಆರಂಭಿಕರಾದ ಫುಲ್ಟನ್ ಹಾಗೂ ರದರ್ಫೋರ್ಡ್ ಉತ್ತಮ ಆರಂಭ ನೀಡಿದರೂ, ಈ ಜೋಡಿ ಹೆಚ್ಚು ಕಾಲ ಕ್ರೀಸ್ನಲ್ಲಿ ಉಳಿಯಲಿಲ್ಲ. ಮೊದಲ ವಿಕೆಟ್ಗೆ ಕೇವಲ 55 ರನ್ ಸೇರಿಸುವಷ್ಟರಲ್ಲಿ ಫುಲ್ಟನ್ ಅವರು ಫಿನ್ ಬೌಲಿಂಗ್ನಲ್ಲಿ ಅವರಿಗೇ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಪುನಃ ದಾಳಿ ಮಾಡಿದ ಫಿನ್, ರದರ್ಫೋರ್ಡ್ ಅವರನ್ನೂ ಪೆವಿಲಿಯನ್ಗೆ ಅಟ್ಟಿದರು.
ಇದಾದ ನಂತರ, ಆಕ್ರಮಣಕ್ಕಿಳಿದ ಸ್ವಾನ್ ಮೂರನೇ ಕ್ರಮಾಂಕದ ವಿಲಿಯಮ್ಸನ್ ಅವರನ್ನು ಬೇಗನೇ ಕ್ರೀಸ್ನಿಂದ ಆಚೆ ಅಟ್ಟಿದರು. ಈ ಮೂರೂ ವಿಕೆಟ್ ಉರುಳಿದ ಮೇಲೆ ಕಿವೀಸ್ ತಂಡ, ಒಂದರ ಹಿಂದೊಂದರಂತೆ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿತು.  ಮಧ್ಯಮ ಕ್ರಮಾಂಕದ ರಾಸ್ ಟೇಲರ್ ಅವರ ವಿಕೆಟ್ ಪಡೆದ ಸ್ವಾನ್, ಆನಂತರ ಬ್ರೌನಿ, ಗುಪ್ಟಿಲ್ ಹಾಗೂ ಬ್ರಾಸ್ವೆಲ್ ಅವರ ವಿಕೆಟ್ ಪಡೆದರು. ಈ ಇಬ್ಬರ ದಾಳಿಗೆ  ಕೈ ಜೋಡಿಸಿದ ಸ್ಟುವರ್ಟ್ ಬ್ರಾಡ್, ಬ್ರೆಂಡಾನ್ ಮೆಕಲಂ ಹಾಗೂ ಸೌಥೀ ಅವರನ್ನು ಕ್ರೀಸ್ನಿಂದ ಆಚೆ ಅಟ್ಟಿದರು. ಅಂತಿಮ ಬ್ಯಾಟ್ಸ್ಮನ್ಗಳಾದ ವ್ಯಾಗ್ನರ್ ಹಾಗೂ ಬೌಲ್ಟ್ ಅವರು 10ನೇ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡಿದರೂ ಆ್ಯಂಡರ್ಸನ್ ಅವರು ವ್ಯಾಗ್ನರ್ ವಿಕೆಟ್ ಪಡೆಯುವ ಮೂಲಕ ಕಿವೀಸ್ ಇನಿಂಗ್ಸ್ಗೆ ತೆರೆಬಿತ್ತು.
ಕುಕ್ ಅರ್ಧ ಶತಕ: ಒಟ್ಟು 180 ರನ್ಗಳ ಮುನ್ನಡೆಯನ್ನು ಪಡೆದ ಇಂಗ್ಲೆಂಡ್, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಉತ್ತಮ ಆರಂಭ ನೀಡಿದ ಆರಂಭಿಕರಾದ ಅಲಾಸ್ಟೇರ್ ಕುಕ್ ಹಾಗೂ ಕಾಂಪ್ಟನ್ ಇಬ್ಬರೂ ಮೊದಲ ವಿಕೆಟ್ಗೆ 72 ರನ್ ಸೇರಿಸಿದರು.  ಆದರೆ, ಕಾಂಪ್ಟನ್ ಬೇಗನೇ ಔಟಾದರು. ಅವರ ನಂತರ ಬಂದಿದ್ದು ಟ್ರಾಟ್. ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ ಕಿವೀಸ್ 1 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿತ್ತು. ಕುಕ್ ತಮ್ಮ ಅರ್ಧ ಶತಕ ಪೂರೈಸಿದ್ದರು. ಅಜೇಯ 64 ರನ್ ಗಳಿಸಿದ್ದ ಅವರೊಂದಿಗೆ, ಟ್ರಾಟ್ 8 ರನ್ ಗಳಿಸಿ ಆಡುತ್ತಿದ್ದರು.
ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ: ಶನಿವಾರ ದಿನಾಂತ್ಯಕ್ಕೆ 337 ರನ್ ಗಳಿಸಿದ್ದ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ಅನ್ನು ಪ್ರಯರ್ ಹಾಗೂ ಸ್ವಾನ್ ಇಬ್ಬರೂ ಭಾನುವಾರ ಮುಂದುವರೆಸಿದ್ದರು.
ಇನಿಂಗ್ಸ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಪ್ರಯರ್ ವಿಕೆಟ್ ಒಪ್ಪಿಸಿದರು. ಆನಂತರ, ಕ್ರೀಸ್ಗೆ ಕಾಲಿಟ್ಟಿದ್ದು ಫಿನ್ನ್. ಆದರೆ, ಫಿನ್ ಹೆಚ್ಚು ಆಡಲಿಲ್ಲ.  ವೈಯಕ್ತಿಕವಾಗಿ 6 ರನ್ ಗಳಿಸಿದ ಫಿನ್ನ್ ಬೇಗನೇ ನಿರ್ಗಮಿಸಿದರು. ಕೊನೆಯ ವಿಕೆಟ್ಗೆ ಜತೆಯಾಗಿದ್ದು ಸ್ವಾನ್ ಹಾಗೂ ಆ್ಯಂಡರ್ಸನ್. ಆದರೆ, ಇನಿಂಗ್ಸ್ಗೆ ಈ ಜೋಡಿ, ಒಂದೂ ರನ್ ಸೇರಿಸಲಿಲ್ಲ. 10ನೇ ವಿಕೆಟ್ ರೂಪದಲ್ಲಿ ಆ್ಯಂಡರ್ಸನ್ (0) ಔಟಾಗುವ ಮೂಲಕ, ಇಂಗ್ಲೆಡ್ನ ಮೊದಲ ಇನಿಂಗ್ಸ್ ಅಂತ್ಯಗೊಂಡಿತು. 26 ರನ್ ಗಳಿಸಿದ ಬ್ರಾಡ್ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 354

ರೂಟ್ 104, ಬೇರ್ಸ್ಟೋ 64
ಬೌಲಿಂಗ್: ಬೌಲ್ಟ್ 57/5,
ಸೌಥೀ 76/2
ನ್ಯೂಜಿಲೆಂಡ್ ಪ್ರಥಮ
ಇನಿಂಗ್ಸ್ 174
ಫುಲ್ಟಾನ್ 28, ರದರ್ಫೋರ್ಡ್ 27, ವ್ಯಾಗ್ನರ್ 27
ಬೌಲಿಂಗ್: ಸ್ವಾನ್ 42/4,
ಫಿನ್ 36/3
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 87/1 (27 ಓವರ್)
(ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ)
ಕುಕ್ ಅಜೇಯ 64, ಟ್ರಾಟ್ ಅಜೇಯ 8
ಬೌಲಿಂಗ್: ವಿಲಿಯಮ್ಸನ್ 19/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.