ಕ್ರೀಡೆ

ಶ್ರೀನಿ ನೀರಸ ಪತ್ರಿಕಾಗೋಷ್ಠಿ

ಶ್ರೀನಿ ನೀರಸ ಪತ್ರಿಕಾಗೋಷ್ಠಿ
Published On :

ಹೇಳಿಕೆ 1: ಸ್ಪಾಟ್ ಫಿಕ್ಸಿಂಗ್‌ನಲ್ಲಿ ಆರೋಪ ಹೊತ್ತಿರುವ ಗುರುನಾಥ್ ಮೇಯಪ್ಪನ್ ಅವರನ್ನು ಬಿಸಿಸಿಐ ಅಮಾನತುಗೊಳಿಸಿದೆ.
ಹೇಳಿಕೆ 2: ಗುರುನಾಥ್ ಹಗರಣದ ಕುರಿತಂತೆ ವಿಶೇಷ ಆಯೋಗವನ್ನು ರಚಿಸಿ ತನಿಖೆ ಕೈಗೊಳ್ಳಲಾಗುವುದು.
ಹೇಳಿಕೆ 3: ತನಿಖಾ ವರದಿ ಕೈ ಸೇರಿದ ಮೇಲೆ ಮುಂದಿನ ಕ್ರಮ.  
ಹೇಳಿಕೆ 4: ನಾನೇನೂ ತಪ್ಪು ಮಾಡಿಲ್ಲ. ಹಾಗಾಗಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.
ಹೇಳಿಕೆ 5: ಫಿಕ್ಸಿಂಗ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ಬಗ್ಗೆ ತನಿಖೆ ನಡೆಸುತ್ತಿರುವ ಬಿಸಿಸಿಐ - ಭ್ರಷ್ಟಾಚಾರ ನಿಗ್ರಹ ದಳ ನಿಗದಿತ ಅವಧಿಯೊಳಗೇ ವರದಿ ನೀಡಲಿದೆ.

ಕೋಲ್ಕತಾ: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದಲ್ಲಿ ಭಾನುವಾರ ಮಧ್ಯಾಹ್ನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಕರೆದಿದ್ದ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳಿವು.
ದೊಡ್ಡದೊಂದು ನಿರೀಕ್ಷೆ ಇಟ್ಟುಕೊಂಡೇ ಹೋಗಿದ್ದ ಬಹುತೇಕ ಪತ್ರಕರ್ತರನ್ನು  ಶ್ರೀನಿವಾಸನ್ ನಿರಾಸೆಗೊಳಿಸಿದ ಪರಿಯಿದು. ಕಳೆದ ಎರಡು ಮೂರು ದಿನಗಳಿಂದ ಹೇಳಿದ್ದನ್ನೇ ಪುನರಾವರ್ತಿಸಿದ ಶ್ರೀನಿವಾಸನ್ ಹೊಸ ಅಥವಾ ಸ್ಫೋಟಕ ಸುದ್ದಿಯೆನಿಸುವಂಥಾ ಯಾವುದೇ ವಿಷಯವನ್ನೂ ಹೇಳಲಿಲ್ಲ.
ಅವರ ಅಳಿಯ ಗುರುನಾಥ್ ಮೇಯಪ್ಪನ್‌ಅವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿ, ಬಂಧನಕ್ಕೊಳಗಾದ ನಂತರ ಹಾಗೂ ಶ್ರೀನಿವಾಸನ್ ಅವರ ಮೇಲೆ ರಾಜಿನಾಮೆ ನೀಡಬೇಕೆಂಬ ಒತ್ತಡ ಹೆಚ್ಚಿದ್ದ ನಂತರ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಇದಾಗಿದ್ದರಿಂದ ಸಹಜವಾಗಿ ಒಂದು ದೊಡ್ಡ ಸುದ್ದಿಗಾಗಿ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಶ್ರೀನಿವಾಸನ್ ಮಾತ್ರ ನಿರಾಸೆ ಮೂಡಿಸಿದರು. ಗುರುನಾಥ್ ಅವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಒಳಗೊಂಡಿರುವ ಬಗ್ಗೆ ಪ್ರತ್ಯೇಕ ಆಯೋಗವೊಂದನ್ನು ರಚಿಸಿ ತನಿಖೆ ನಡೆಸಲಾಗುವುದು ಎಂಬುದನ್ನು ಬಿಟ್ಟರೆ, ಮತ್ಯಾವುದೂ ಹೊಸ ಸುದ್ದಿ ಎಂದೆನಿಸಲಿಲ್ಲ.
ಏಕೆಂದರೆ, ಗುರುನಾಥ್ ಅವರನ್ನು ಬಿಸಿಸಿಐ ಅಮಾನತುಗೊಳಿಸಿರುವ ವಿಷಯ ಬೆಳಗ್ಗೆಯೇ ಕೆಲ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿತ್ತು. ಹಾಗಾಗಿ, ಶ್ರೀನಿವಾಸನ್ ಅವರ ಪತ್ರಿಕಾಗೋಷ್ಠಿ ಹೊತ್ತಿಗೆ ಆ ವಿಷಯ ಜಗಜ್ಜಾಹೀರಾಗಿತ್ತು.
ಇನ್ನು, ತಮ್ಮ ಮೇಲಿರುವ ರಾಜಿನಾಮೆ ಒತ್ತಡಕ್ಕೆ ಶನಿವಾರವೇ ಸ್ಪಷ್ಟೀಕರಣ ನೀಡಿದ್ದ ಶ್ರೀನಿವಾಸನ್, ತಾವು ಅಧ್ಯಕ್ಷಗಿರಿಯಿಂದ ಕೆಳಗಿಳಿಯುವುದಿಲ್ಲವೆಂದು ಹೇಳಿದ್ದರು. ಹಾಗಾಗಿ, ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ಅವರು ಇದನ್ನು ಪುನರುಚ್ಛರಿಸಿದ್ದರಲ್ಲಿ ಹೊಸ ವಿಷಯವಾಗೇನೂ ಇರಲಿಲ್ಲ.
ಈಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ವಿರುದ್ಧ ತನಿಖೆಗಾಗಿ ನೇಮಿಸಿರುವ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ನಿಗದಿತ ಸಮಯದಲ್ಲೇ ತನ್ನ ತನಿಖಾ ವರದಿ ಕೊಡಲಿದೆ. ಇದು ಹೇಳಲೇಬೇಕಾಗಿದ್ದ ವಿಷಯವೂ ಅಲ್ಲ.
ಆದರೆ, ಬಹುತೇಕ ಎಲ್ಲರಿಗೂ ಗೊತ್ತಿದ್ದ ವಿಷಯಗಳನ್ನೇ ಪುನಃ ಹೇಳುವ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ, ಅಧ್ಯಕ್ಷರು 'ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬುದನ್ನು ತೋರ್ಪಡಿಸಿಕೊಂಡರು.
ತನಿಖೆಗಾಗಿ ಪ್ರತ್ಯೇಕ ಸಮಿತಿ: ತಮ್ಮ ಅಳಿಯ ಗುರುನಾಥ್ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪ ಬಂದಿರುವುದರ ಬಗ್ಗೆ ಪತ್ರಿಕಾಗೋಷ್ಠಿಯ ಆರಂಭದಲ್ಲೇ ಮಾತನಾಡಿದ ಅವರು, 'ಒಬ್ಬ ತಂದೆಯಾಗಿ ಹಾಗೂ ಮಾವನಾಗಿ ನಾನು ಮುಜುಗರ ಅನುಭವಿಸುತ್ತಿದ್ದೇನೆ. ನನ್ನಲ್ಲಿನ ಆಂತರಿಕ ತುಮುಲಗಳನ್ನೆಲ್ಲಾ ಬದಿಗಿಟ್ಟು ನಿಮ್ಮ (ಪತ್ರಕರ್ತರ) ಮುಂದೆ ಕುಳಿತಿದ್ದೇನೆ. ಬಿಸಿಸಿಐ ಅಧ್ಯಕ್ಷನಾಗಿ ನಾನೇನು ಮಾಡಬೇಕೋ ಆ ಕರ್ತವ್ಯವನ್ನು ಮಾಡುತ್ತೇನೆ' ಎನ್ನುತ್ತಲೇ ಪತ್ರಿಕಾಗೋಷ್ಠಿ ಆರಂಭಿಸಿದರು.
ಗುರುನಾಥ್ ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಆಯೋಗವೊಂದನ್ನು ರಚಿಸುವುದಾಗಿ ಅವರು ತಿಳಿಸಿದರು. ಈಗಾಗಲೇ, ಕಾರ್ಯನಿರ್ವಹಿಸುತ್ತಿರುವ ಐಪಿಎಲ್ ಕಾರ್ಯಕಾರಿಣಿ ಮಂಡಳಿಯಲ್ಲಿನ ಸದಸ್ಯರಾದ ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ, ಸಂಜಯ್ ಜಗದಾಳೆ, ಅಜಿತ್ ಶಿರ್ಕೆ ಹಾಗೂ ರವಿ ಶಾಸ್ತ್ರಿ - ಇವರಲ್ಲಿ ಇಬ್ಬರು ಸದಸ್ಯರು ಹಾಗೂ ಒಬ್ಬ ಸ್ವತಂತ್ರ್ಯ ಆಯುಕ್ತ ಹೊಸ ಸಮಿತಿಯಲ್ಲಿರಲಿದ್ದು, ಈ ಸಮಿತಿಯಿಂದ ಗುರುನಾಥ್ ಮೇಲಿನ ಆರೋಪಗಳನ್ನು ತನಿಖೆ ನಡೆಸುವುದಾಗಿ ಶ್ರೀನಿವಾಸನ್ ತಿಳಿಸಿದರು. ಈ ತನಿಖೆ ನೀಡುವ ವರದಿಯ ಆಧಾರದ ಮೇಲೆ ತಾವು ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಸ್ಪಷ್ಟನೆ: ಹೊಸದಾಗಿ ರಚನೆಗೊಳ್ಳಲಿರುವ ಆಯೋಗದ ವಿಷಯದಲ್ಲಿ ತಾವು ಮೂಗು ತೂರಿಸುವುದಿಲ್ಲವೆಂದು ಶ್ರೀನಿವಾಸನ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 'ಹೊಸದಾಗಿ ರಚಿಸ್ಪಡುವ ತನಿಖಾ ಆಯೋಗದ ರಚನೆ ಹಾಗೂ ಅದರ ಕಾರ್ಯ ನಿರ್ವಹಣೆಯ ಬಗ್ಗೆ ನಾನು ಯಾವುದೇ ರೀತಿಯಲ್ಲೂ ಒಳಗೊಳ್ಳುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ಐಪಿಎಲ್ ನಿಷೇಧ ಸಾಧ್ಯವಿಲ್ಲ: ಬಿಸಿಸಿಐಗೆ ಹೇರಳವಾಗಿ ಲಾಭ ತಂದುಕೊಡುವ ಐಪಿಎಲ್ ಪಂದ್ಯಾವಳಿಯನ್ನು ನಿಷೇಧಿಸುವ ಯಾವುದೇ ಚಿಂತನೆ ಬಿಸಿಸಿಐ ಮುಂದಿಲ್ಲ ಎಂದು ಶ್ರೀನಿವಾಸನ್ ಅವರು ಇದೇ ಸಂದರ್ಭದಲ್ಲಿ ಹೇಳಿದರು. 'ಐಪಿಎಲ್‌ನಿಂದ ದೇಶದಲ್ಲಿ ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಿದೆ. ಪ್ರಸಕ್ತ ವರ್ಷದಲ್ಲೇ 21 ಲಕ್ಷಕ್ಕೂ ಹೆಚ್ಚು ಜನ ಐಪಿಎಲ್ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಐಪಿಎಲ್‌ನಲ್ಲಿ ಬರುವ ಹಣದಿಂದ ಸುಮಾರು 200 ಮಾಜಿ ಕ್ರಿಕೆಟರ್‌ಗಳಿಗೆ ಏಕ-ಸಮಯ ಆರ್ಥಿಕ ಅನುಕೂಲ ಕಲ್ಪಿಸಲು ಸಾಧ್ಯವಾಯಿತು. ಇದಕ್ಕಾಗಿ, ನಾವು ಸುಮಾರು ರು. 100 ಕೋಟಿ ಗಳನ್ನು ವ್ಯಯಿಸಿದ್ದೇವೆ. ಇಷ್ಟೆಲ್ಲಾ ಅನುಕೂಲತೆಗಳು ಸಾಧ್ಯವಾಗಿದ್ದು ಐಪಿಎಲ್‌ನಿಂದ. ಹಾಗಾಗಿ, ಇದನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ಆದರೆ, ಐಪಿಎಲ್‌ನಿಂದ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.