ಪ್ರಭಾಕರ್ಗೆ ಮುಳುವು, ಸಚಿನ್ ಗೆಲವು...

ಸಚಿನ್ ಎಂಬ ಪ್ರತಿಭಾವಂತ ಪೋರ 1989ರಲ್ಲೇ ಟೀಂ ಇಂಡಿಯಾ ಕ್ಯಾಪ್ ಧರಿಸಿದ್ದರೂ ಆತನ ಕ್ರಿಕೆಟ್ ಬದುಕಿಗೆ ಮಹತ್ವದ ತಿರುವು ದೊರೆತದ್ದು 1994ರಲ್ಲಿ.
ಆಗ ಭಾರತ ತಂಡ ಸಮರ್ಥ ಆರಂಭಕಾರನ ಹುಡುಕಾಟದಲ್ಲಿತ್ತು. ವಿಶ್ವದ ಆರಂಭಿಕ ಬ್ಯಾಟ್ಸ್ಮನ್ ಕಂ ಬೌಲರ್ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಮನೋಜ್ ಪ್ರಭಾಕರ್ ಗಾಯಾಳುವಾದಾಗ ನಾಯಕ ಮೊಹ್ಮದ್ ಅಜರುದ್ದೀನ್ ಆರಂಭಿಕ ಬ್ಯಾಟ್ಸ್ಮನ್ ಸ್ಥಾನಕ್ಕೆ ಯಾರನ್ನು ತರುವುದೆಂಬ ವಿಚಾರ ತಲೆನೋವಾಗಿ ಪರಿಣಮಿಸಿತು. ಹ್ಯಾಮಿಲ್ಟನ್ನಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ನವಜ್ಯೋತ್ ಸಿಂಗ್ ಸಿದ್ದು ಜೊತೆ ಅರ್ಧಂಬರ್ಧ ಬ್ಯಾಟಿಂಗ್ಗೆ ತಿಳಿದಿದ್ದ ವಿಕೆಟ್ ಕೀಪರ್ ನಯನ್ ಮೋಂಗಿಯಾ ಆರಂಭಿಕರಾಗಿ ಇಳಿದದ್ದು ತಕ್ಕ ಮಟ್ಟಿಗೆ ಫಲ ನೀಡಿತ್ತು. ಆದರೆ ಅಂಜುತ್ತಾ ಅಳುಕುತ್ತಾ ಬ್ಯಾಟ್ ಬೀಸುವ ಮೋಂಗಿಯಾರನ್ನೇ ಒನ್ ಡೇಯಲ್ಲೂ ಆರಂಭಿಕರನ್ನಾಗಿ ಕಳುಹಿಸುವ ಸಾಹಸಕ್ಕೆ ಅಜರ್ ಕೈ ಹಾಕಲಿಲ್ಲ. ಹೀಗಾಗಿ ನೇಪಿಯರ್ನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಆಗಿನ ಒನ್ ಡೇ ಸ್ಪೆಷಲಿಸ್ಟ್ ಆಗಿದ್ದ ಅಜಯ್ ಜಡೇಜಾ ಜೊತೆಗೆ ಸಿಕ್ಸರ್ ಸಿದ್ದು ಅವರೇ ಇನ್ನಿಂಗ್ಸ್ ಆರಂಭಿಸಿದರು. ಆ ಪಂದ್ಯವನ್ನು ಭಾರತ 28 ರನ್ಗಳಿಂದ ಸೋತಿತು.
ಮಾರ್ಚ್ 27, 1994 ಅಕ್ಲೆಂಡ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕಿವೀಸ್ 49.2 ಓವರ್ಗಳಲ್ಲಿ 142 ರನ್ಗಳಿಗೆ ಆಲೌಟ್ ಆಯಿತು. ಅಜರ್ ಯೋಚನಾಲಹರಿ ಹೇಗೆ ಸಾಗುತ್ತಿತ್ತೋ... ಅಜಯ್ ಜಡೇಜಾರೊಂದಿಗೆ ಭಾರತದ ಇನಿಂಗ್ಸ್ ಆರಂಭಿಸಲು ಅಜರ್ ಕಳಿಸಿದ್ದು ಆವರೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಲಿಟಲ್ ಮಾಸ್ಟರ್ ಸಚಿನ್ರನ್ನು.
ಅಂದು ಕ್ಷೇತ್ರರಕ್ಷಣೆಯ ನಿಯಮದ ಲಾಭವನ್ನು ಭರಪೂರ ಬಳಸಿಕೊಂಡ ಸಚಿನ್ ಕಿವೀಸ್ ಬೌಲರ್ಗಳ ಎಸೆತಗಳನ್ನು ಮನಬಂದಂತೆ ದಂಡಿಸಿದರು. 49 ಎಸೆತಗಳಿಂದ 83 ರನ್ ಚಚ್ಚಿದ ತೆಂಡೂಲ್ಕರ್ ಇನಿಂಗ್ಸ್ನಲ್ಲಿ 15 ಬಾರಿ ಚೆಂಡು ಬೌಂಡರಿ ಗೆರೆ ದಾಟಿತ್ತು. ಎರಡು ಸಿಕ್ಸರ್ ಇತ್ತು. ಪರಿಣಾಮ ಟೀಂ ಇಂಡಿಯಾ ಪಂದ್ಯವನ್ನು 23.2 ಓವರ್ಗಳಲ್ಲೇ ಗೆದ್ದಿತು. ವೆಲಿಂಗ್ಟನ್ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಸಚಿನ್ 75 ಎಸೆತಗಳಿಂದ 63 ರನ್ ಹೊಡೆದರು. ಆ ಪಂದ್ಯವನ್ನು ಭಾರತ 12 ರನ್ಗಳಿಂದ ಗೆದ್ದುಕೊಂಡಿತು.
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ 26 ಎಸೆತಗಳಿಂದ 40 ರನ್ ಗಳಿಸಿದ ಸಚಿನ್ 8 ಬೌಂಡರಿ ಬಾರಿಸಿದರು. ಆ ಸರಣಿಯ ಬಳಿಕ ತೆಂಡೂಲ್ಕರ್ ಏಕದಿನದಲ್ಲಿ ಕಾಯಂ ಆರಂಭಿಕ ಬ್ಯಾಟ್ಸ್ಮನ್ ಆಗಿ ಮಿಂಚಿದರು. ಮನೋಜ್ ಪ್ರಭಾಕರ್ ಕತೆ ಮಾತ್ರ ಬೇಡ ಬಿಡಿ....
- ಗಣಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


