ಸಿಂಗಾಪುರ ಓಪನ್: ಲೀಗೆ ಶಾಕ್ ಕೊಟ್ಟ ಸ್ಯಾಂಟೊಸೊ
ಸಿಂಗಾಪುರ: ವಿಶ್ವದ ನಂಬರ್ ಒನ್ ಆಟಗಾರ ಚೀನಾದ ಲೀ ಚಾಂಗ್ ವೀ ಅವರಿಗೆ ಅಚ್ಚರಿಯ ಹೋರಾಟ ನೀಡಿ ಪರಾಭವಗೊಳಿಸಿದ ಇಂಡೋನೇಷ್ಯಾದ ಸಿಮೊನ್ ಸ್ಯಾಂಟೊಸೊ, ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಆಗಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಸ್ಯಾಂಟೊಸೊ 21-15, 21-10 ಸೆಟ್ಗಳ ಅಂತರದಲ್ಲಿ ಗೆಲವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಿಂಗಾಪುರ ಓಪನ್ನಲ್ಲಿ ಲೀ ಚಾಂಗ್ ಅವರನ್ನು ಮಣಿಸಿದ್ದಾರೆ.
48 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸ್ಯಾಂಟೊಸೊ ಸಂಪೂರ್ಣ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. ಆರಂಭಿದಿಂದಲೂ ಅಬ್ಬರದ ಆಟ ಪ್ರದರ್ಶಿಸಿದ ಇಂಡೋನೇಷ್ಯಾ ಆಟಗಾರ 21-15 ಅಂತರದಲ್ಲಿ ಮೇಲುಗೈ ಸಾಧಿಸಿದರು. ನಂತರ ಎರಡನೇ ಸೆಟ್ನಲ್ಲಿ ಅದೇ ಉತ್ತಮ ಪ್ರದರ್ಶನ ನೀಡಿದ ಸಿಮೊನ್ 21-10 ಅಂತರದ ಮುನ್ನಡೆ ಪಡೆಯುವ ಮೂಲಕ ಗೆಲವಿನ ನಗೆ ಬೀರಿದರು.
ಅಗ್ರಶ್ರೇಯಾಂಕಿತ ಆಟಗಾರನಿಗೆ ಪಂದ್ಯದ ಯಾವುದೇ ಹಂತದಲ್ಲೂ ಚೇತರಿಕೆಗೆ ಅವಕಾಶ ನೀಡದೆ ಪ್ರಭುತ್ವದ ಆಟ ಪ್ರದರ್ಶಿಸಿದ ಸ್ಯಾಂಟೊಸೊ ಎಲ್ಲರ ಗಮನ ಸೆಳೆದರು.
ಕಳೆದ ವರ್ಷ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿ, ವಿಶ್ವ ರ್ಯಾಂಕಿಂಗ್ನಲ್ಲಿ 100ರ ಪಟ್ಟಿಯಿಂದ ಹೊರಗುಳಿದಿದ್ದರು. ನಂತರ ಮರಳಿರುವ ಸ್ಯಾಂಟೊಸೊ ಈಗ 52ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅತ್ಯುತ್ತಮ ಆಟಗಾರರಾದ ಲೀ ಚಾಂಗ್ ಅವರನ್ನು ಮಣಿಸಿದ್ದು, ಸಂತಸ ನೀಡಿದೆ. ಅರ್ಹತಾ ಸುತ್ತಿನಿಂದಲು ಪಂದ್ಯಾವಳಿಯಲ್ಲಿ ಕಠಿಣ ಪರಿಶ್ರಮ ಹಾಕಿದ್ದು, ಈಗ ಪ್ರಶಸ್ತಿ ಗೆದ್ದುಕೊಂಡಿದ್ದೇನೆ. ಹಾಗಾಗಿ ನನ್ನ ಪ್ರದರ್ಶನ ತೃಪ್ತಿ ತಂದಿದೆ ಎಂದು ಸ್ಯಾಟೊಸೊ ಅಭಿಪ್ರಾಯಪಟ್ಟಿದ್ದಾರೆ.
ಯಿಹಾನ್ ಚಾಂಪಿಯನ್: ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಚೀನಾದ ಯಿಹಾನ್ ವಾಂಗ್ ಅವರು ತನ್ನದೇ ದೇಶದ ಲೀ ಜೆರುಯಿ ವಿರುದ್ಧ ಗೆಲವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಯಿಹಾನ್ ವಾಂಗ್ 21-11, 21-19 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

