ಕ್ರೀಡೆ

ಉತ್ತರಪ್ರದೇಶ ಪಡೆಗೆ ಬರೋಡಾ ಸವಾಲು

Published On :

ಮುಂಬೈ: ಉತ್ತರಪ್ರದೇಶ ಮತ್ತು ಬರೋಡಾ ತಂಡಗಳು ಭಾನುವಾರ ಇಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿರುವ ಉಭಯ ತಂಡಗಳು ಸಮಬಲದಿಂದಲೇ ಕೂಡಿವೆ.
ಉತ್ತರಪ್ರದೇಶ ಮತ್ತು ಬರೋಡಾ ತಂಡಗಳು ಕ್ರಮವಾಗಿ 'ಎ' ಮತ್ತು 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಹರ್ಯಾಣ ತಂಡವನ್ನು ಮಣಿಸಿ ಫೈನಲ್‌ಗೆ ತಲುಪಿರುವ ಉತ್ತರಪ್ರದೇಶ ಆಟಗಾರರು ಟ್ರೋಫಿ ಎತ್ತಿ ಹಿಡಿಯುವ ಉತ್ತಮ ಅವಕಾಶ ಹೊಂದಿದ್ದಾರೆ.
ಮತ್ತೊಂದೆಡೆ ಮುಂಬೈನಲ್ಲಿ ನಡೆದ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬರೋಡಾ ತಂಡ ಕೇರಳ ಎದುರು ಸೋಲನುಭವಿಸಿದರೂ ಸಹ ಉತ್ತಮ ರನ್ ಸರಾಸರಿ ಗಳಿಕೆ ಆಧಾರದ ಮೇಲೆ ನಿರ್ಣಾಯಕ ಹಂತ ತಲುಪಿದೆ.
ಈ ಟೂರ್ನಿಯಲ್ಲಿ ಬರೋಡಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು 7 ಪಂದ್ಯಗಳಲ್ಲಿ ನಿರಂತರ ಗೆಲವು ದಾಖಲಿಸಿದ್ದಾರೆ. ಪಶ್ಚಿಮ ವಲಯದಲ್ಲಿ ಆಡಿದ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡು ಚಾಂಪಿಯನ್ ಆಗಿದ್ದ ಬರೋಡಾ, ಸೂಪರ್ ಲೀಗ್ ಹಂತದಲ್ಲಿ ಸತತ ಮೂರು ಪಂದ್ಯಗಳಲ್ಲಿ ಜಯಶಾಲಿಯಾಗಿತ್ತು. ಆದರೆ, ಅಂತಿಮ ಲೀಗ್ ಪಂದ್ಯದಲ್ಲಿ ಮಾತ್ರ ಕೇರಳ ಎದುರು ಸೋಲಿನ ಕಹಿ ಉಂಡಿತ್ತು.
ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಲುಕ್ಮನ್ ಮೆರಿವಾಲಾ ಬರೋಡಾದ ಬೌಲಿಂಗ್‌ನಲ್ಲಿ ಪ್ರಮುಖರೆನಿಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯವೊಂದರಲ್ಲೇ 5 ವಿಕೆಟ್‌ಗಳ ಗೊಂಚಲು ಪಡೆದಿದ್ದ 22ರ ಮೆರಿವಾಲಾ, ಒಟ್ಟು 18 ವಿಕೆಟ್ ಉರುಳಿಸಿದ್ದಾರೆ. ಇವರ ಮೇಲೆ ನಾಯಕ ಆದಿತ್ಯ ವಾಗ್ಮೋಡೆಗೆ ಅಪಾರ ನಂಬಿಕೆಯಿದೆ.
ಉಳಿದಂತೆ ಬರೋಡಾ ತಂಡದಲ್ಲಿ ಕೇದಾರ್ ದೇವಧರ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಪಿನಾಲ್ ಶಾ ಮತ್ತು ಮುನಾಫ್ ಪಟೇಲ್ ಭರವಸೆಯ ಆಟಗಾರರಾಗಿದ್ದಾರೆ.
ಮತ್ತೊಂದೆಡೆ ಅಕ್ಷದೀಪ್ ನಾಥ್ ನಾಯಕತ್ವದ ಉತ್ತರಪ್ರದೇಶ ಕೂಡ ಸಮತೋಲನದಿಂದ ಕೂಡಿರುವ ತಂಡವಾಗಿದೆ. ಹಾಗಾಗಿ, ಯಾರು ಚಾಂಪಿಯನ್‌ಪಟ್ಟ ಅಲಂಕರಿಸುವುರೆಂದು ಹೇಳುವುದು ಕಷ್ಟವಾಗಿದೆ.
ಪ್ರಮುಖವಾಗಿ ಮುಕುಲ್ ದಾಗರ್ ಉತ್ತರಪ್ರದೇಶ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಇತರೆ ಆಟಗಾರರಾದ ಪ್ರಶಾಂತ್ ಗುಪ್ತಾ, ಏಕಲವ್ಯ ದ್ವಿವೇದಿ, ರಿಂಕು ಸಿಂಗ್, ಅಲಿ ಮುರ್ತಜಾ, ಪ್ರವೀಣ್‌ಕುಮಾರ್ ಮೇಲೆಯೊ ನಂಬಿಕೆ ಇಡಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.