ಕಿಂಗ್ಸ್ ಸದ್ದಡಗಿಸಲು ರಾಯಲ್ಸ್ ಪಣ
ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯಗಳನ್ನು ಗೆದ್ದುಕೊಂಡು ಶುಭಾರಂಭ ಮಾಡಿದ್ದು, ಈ ಸಾಕಾರಾತ್ಮಕ ಫಲಿತಾಂಶವನ್ನು ಮುಂದುವರಿಸಿಕೊಂಡು ಗುರಿ ಇಟ್ಟುಕೊಂಡಿವೆ.
ಶಾರ್ಜಾದಲ್ಲಿ ಭಾನುವಾರ ಕಿಂಗ್ಸ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ಪರಸ್ಪರ ಮುಖಾಮುಖಿಯಾಗಲಿಗ್ದು, ಮತ್ತೊಂದು ಜಯದ ನಗೆ ಬೀರಲು ಕಾತರದಲ್ಲಿವೆ.
ಕಿಂಗ್ಸ್ ಪಂಜಾಬ್ ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲವು ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಚೆನ್ನೈ ನೀಡಿದ್ದ 206 ರನ್ಗಳ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ್ದ ಪಂಜಾಬ್ 6 ವಿಕೆಟ್ಗಳಿಂದ ಗೆಲವು ಸಂಪಾದಿಸಿತ್ತು.
ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಪಡೆ ತನ್ನ ಮೊದಲ ಸುತ್ತಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ಗಳಿಂದ ಜಯ ಸಾಧಿಸಿ ಉತ್ತಮ ಆರಂಭ ಪಡೆದಿದೆ.
ಕಾಗದದ ಮೇಲೆ ತಂಡದ ಬಲಾಬಲ ಅಳೆದು ನೋಡಿದಲ್ಲಿ ಕಿಂಗ್ಸ್ ಪಂಜಾಬ್ ನಾಳಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಜ ಎನಿಸಿದೆ. ಆಸ್ಟ್ರೇಲಿಯಾ ಮೂಲದ ಜಾರ್ಜ್ ಬೇಯ್ಲಿ ನಾಯಕತ್ವದ ಪಂಜಾಬ್ ಹೆಚ್ಚು ಸಮತೋಲನದಿಂದ ಕೂಡಿದೆ. ಚೆನ್ನೈ ಒಡ್ಡಿದ್ದ ಬೃಹತ್ ಮೊತ್ತದ ಗುರಿ ಬೆಂಬತ್ತುವಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಆಟದಿಂದ ಸುರಿದ ರನ್ ಹೊಳೆಯಲ್ಲಿ ಧೋನಿ ಪಡೆ ಕೊಚ್ಚಿ ಹೋಗುವಂತಾಗಿತ್ತು. ಬೇಯ್ಲಿ ಸಹ ಅಪಾಯಕಾರಿ ಬ್ಯಾಟ್ಸ್ಮನ್ ಆಗಿದ್ದು, ರಾಷ್ಟ್ರೀಯ ತಂಡದಿಂದ ತಿರಸ್ಕೃತರಾಗಿರುವ ವೀರೇಂದ್ರ ಸಿಂಗ್ ವೈಫಲ್ಯ ಮುಂದುವರಿದುದು ಪಂಜಾಬ್ಗೆ ದೊಡ್ಡ ಚಿಂತೆಯಾಗಿದೆ. ಚೇತೇಶ್ವರ ಪೂಜಾರ, ಶಾನ್ ಮಾರ್ಶ್, ತಿಸಾರ ಪೆರೇರಾ, ವೃದ್ಧಿಮಾನ್ ಸಹಾ ಅವರಂತಹ ಉತ್ತಮ ಬ್ಯಾಟ್ಸ್ಮನ್ಗಳು ಪಂಜಾಬ್ ತಂಡದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಜಾನ್ಸನ್ ಹಾಗೂ ಲಕ್ಷ್ಮೀಪತಿ ಬಾಲಾಜಿ, ರಿಶಿ ಧವನ್ ಮತ್ತು ಪರ್ವಿಂದರ್ ಅವಾನ ಪ್ರಮುಖರಾಗಿದ್ದಾರೆ.
ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಕೂಡ ಟಿ-20 ಮಾದರಿಗೆ ಸೂಕ್ತವಾದ ಆಟಗಾರರ ಗುಂಪನ್ನು ಒಳಗೊಂಡಿದೆ. ಮೊದಲ ಪಂದ್ಯದಲ್ಲಿ ಧವಳ್ ಕುಲಕರ್ಣಿ, ಕೇನ್ ರಿಚರ್ಡ್ಸನ್, ರಜತ್ ಭಾಟಿಯಾ ಮತ್ತು ಪ್ರವೀಣ್ ತಾಂಬೆ ಉತ್ತಮ ದಾಳಿ ಸಂಘಟಿಸಿ ಸನ್ರೈಸರ್ಸ್ ಪಡೆಯನ್ನು 6 ವಿಕೆಟ್ ನಷ್ಟಕ್ಕೆ 133 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಮೊದಲ ಪಂದ್ಯದ ಗೆಲವಿನ ಹೀರೊಗಳಾದ ಅಜಿಂಕ್ಯಾ ರಹಾನೆ (59ರನ್) ಮತ್ತು ಸ್ಟುವರ್ಟ್ ಬಿನ್ನಿ ಹೊರತಾಗಿ ನಾಯಕ ಶೇನ್ ವ್ಯಾಟ್ಸನ್, ಜೇಮ್ಸ್ ಫಾಕ್ನರ್, ಬ್ರಾಡ್ ಹಾಡ್ಜ್, ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್ ಕೂಡ ಭರವಸೆವುಳ್ಳ ದಾಂಡಿಗರು ತಂಡದಲ್ಲಿರುವುದು ಅದರ ಬಲ ಹೆಚ್ಚಿಸಿದೆ.
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಮತ್ತು ಕೋಚ್ ಪಾಡಿ ಅಪ್ಟಾನ್ ಗರಡಿಯಲ್ಲಿ ಪಳಗಿರುವ ರಾಜಸ್ಥಾನ ರಾಯಲ್ಸ್ ಆಟಗಾರರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧವೂ ಉತ್ತಮ ಪ್ರದರ್ಶನ ಮುಂದುವರಿಸಿ ಗೆಲುವು ದಕ್ಕಿಸಿಕೊಳ್ಳಬಹುದೆಂಬ ಈಗಲೇ ಖಚಿತವಾಗಿ ಹೇಳುವುದು ಕಷ್ಟವೇ ಆಗಿದೆ. ಏಕೆದರೆ, ಮೊದಲ ಪಂದ್ಯದಲ್ಲಿ ಪಂಜಾಬ್ ಗೆದ್ದ ರೀತಿ ನೋಡಿದರೆ, ರಾಜಸ್ಥಾನಕ್ಕೂ ಭಯ ಇದ್ದೇ ಇದೆ. ಹಾಗಾಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಈ ಪಂದ್ಯ ಕುತೂಹಲದ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆ (ಸ್ಥಳ-ಶಾರ್ಜಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

