ಭಾರತ ಎ ಚಾಂಪಿಯನ್

ಡಾರ್ವಿನ್: ಮಧ್ಯಮ ಹಾಗೂ ಕೆಳಕ್ರಮಾಂಕದ ದಾಂಡಿಗರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ 'ಎ' ತಂಡದ ಆಟಗಾರರು ಏಕದಿನ ಚತುಷ್ಕೋನ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಮರಾರ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡ 4 ವಿಕೆಟ್ಗಳಿಂದ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ಜಯಭೇರಿ ಬಾರಿಸಿ ಪ್ರಶಸ್ತಿ ಸಂಪಾದಿಸಿತು.
ಗೆಲ್ಲಲು 275 ರನ್ಗಳ ಗುರಿ ಪಡೆದಿದ್ದ ಭಾರತೀಯರು ಇನ್ನೂ 8 ಎಸೆತಗಳು ಉಳಿದಿರುವಂತೆಯೇ 6 ವಿಕೆಟ್ ಕಳೆದುಕೊಂಡು ದಡ ಸೇರುವಲ್ಲಿ ಯಶಸ್ವಿಯಾಯಿತು.
ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ (78ರನ್, 73 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಮನೋಜ್ ತಿವಾರಿ (50ರನ್, 75 ಎಸೆತ, 3 ಬೌಂಡರಿ) ಹಾಗೂ ಕೆಳಕ್ರಮಾಂಕದಲ್ಲಿ ರಿಶಿ ಧವನ್ (ಅಜೇಯ 56, 55 ಎಸೆತ, 4 ಬೌಂಡರಿ) ಮತ್ತು ಅಕ್ಷರ್ ಪಟೇಲ್ (ಅಜೇಯ 45, 38 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲವು ತಂದುಕೊಟ್ಟರು.
ಒಂದು ಹಂತದಲ್ಲಿ ಭಾರತ 51 ರನ್ಗಳಾಗುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರನ್ನು ಕಳೆದುಕೊಂಡು
ಒತ್ತಡಕ್ಕೆ ಸಿಲುಕಿತ್ತು. ಆರಂಭಿಕ ಆಟಗಾರರಾದ ನಾಯಕ ರಾಬಿನ್ ಉತ್ತಪ್ಪ (12) ಮತ್ತು ಮನನ್ ವೋಹ್ರಾ (8) ಹಾಗೂ ಮೂರನೇ ಕ್ರಮಾಂಕದ ಅಂಬಟಿ ರಾಯುಡು (7) ಬೇಗನೆ ಪೆವಿಲಿಯನ್ ಸೇರಿದರು. ನಂತರದಲ್ಲಿ ತಿವಾರಿ ಮತ್ತು ಜಾಧವ್ ನಾಲ್ಕನೇ ವಿಕೆಟ್ಗೆ 82 ರನ್ ಪೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ತಿವಾರಿ, ಜಾಧವ್ ಮತ್ತು ಸಂಜು ಸ್ಯಾಮ್ಸನ್ (5) ಒಂಬರ ಹಿಂದೊಬ್ಬರು ಪೆವಿಲಿಯನ್ ಸೇರಿದಾಗ ಭಾರತ 182 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಪುನಃ ಸಂಕಷ್ಟಕ್ಕೆ ಒಳಗಾಗಿತ್ತು.
ಆದರೆ, ಧವನ್ ಮತ್ತು ಅಕ್ಷರ್ ಮುರಿಯದ 7ನೇ ವಿಕೆಟ್ಗೆ 93 ರನ್ ಕಲೆಹಾಕಿ ಭಾರತದ ಗೆಲವು ಖಚಿತಪಡಿಸಿದರು.
ಕೆಮರೂನ್ ವೈಟ್ ಶತಕ ವ್ಯರ್ಥ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 'ಎ' ತಂಡ 5 ವಿಕೆಟ್ಗೆ 274 ರನ್ಗಳ ಪೈಪೋಟಿ ಮೊತ್ತ ಸಂಪಾದಿಸಿತು. ಆರಂಭಿಕ ಕೆಮರೂನ್ ವೈಟ್ ಆಕರ್ಷಕ ಶತಕ ಬಾರಿಸಿ (137ರನ್, 150 ಎಸೆತ, 10 ಬೌಂಡರಿ, 5 ಸಿಕ್ಸರ್) ತಂಡಕ್ಕೆ ನೆರವಾದರು. ಮತ್ತೊಬ್ಬ ಆರಂಭಿಕ ಫಿಲಿಪ್ ಹ್ಯೂಸ್ (50) ಅರ್ಧಶತಕದ ಕಾಣಿಕೆ ನೀಡಿದರು. ಆದರೆ, ಅಂತಿಮವಾಗಿ ವೈಟ್ ಶತಕ ವ್ಯರ್ಥವಾಯಿತು.
ಭಾರತದ ಬೌಲಿಂಗ್ನಲ್ಲಿ ಶಿಸ್ತಿನ ದಾಳಿ ನಡೆಸಿದ ಧವಳ್ ಕುಲಕರ್ಣಿ 51ರನ್ ನೀಡಿ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ 'ಎ' 50 ಓವರುಗಳಲ್ಲಿ 5 ವಿಕೆಟ್ಗೆ 274
(ಕೆಮರೂನ್ ವೈಟ್ 137, ಫಿಲಿಪ್ ಹ್ಯೂಸ್ 51, ಬೆನ್ ಕಟಿಂಗ್ ಅಜೇಯ 35, ಅಲೆಕ್ಸ್ ಡೂಲಾನ್ 24, ಧವಳ್ ಕುಲಕರ್ಣಿ 51ಕ್ಕೆ3, ಅಕ್ಷರ್ ಪಟೇಲ್ 47ಕ್ಕೆ1, ಮೋಹಿತ್ ಶರ್ಮಾ 55ಕ್ಕೆ1). ಭಾರತ 'ಎ' 48.4 ಓವರುಗಳಲ್ಲಿ 6 ವಿಕೆಟ್ಗೆ 275 (ಕೇದಾರ್ ಜಾಧವ್ 78, ರಿಶಿ ಧವನ್ ಅಜೇಯ 56, ಮನೋಜ್ ತಿವಾರಿ 50, ಅಕ್ಷರ್ ಪಟೇಲ್ ಅಜೇಯ 45, ಬೆನ್ ಕಟಿಂಗ್ 46ಕ್ಕೆ3, ಕೇನ್ ರಿಚರ್ಡ್ಸನ್ 58ಕ್ಕೆ1).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


