ಸಿಂಹಳೀಯರ ನಾಡಲ್ಲಿ ಪಳಗುವ ಬುಲ್ಸ್
ಬಿಜಾಪುರ ಆಟಗಾರರಿಗೆ ರಣತುಂಗ, ಜಯಸೂರ್ಯ ಅಕಾಡೆಮಿಯಲ್ಲಿ ಮಾರ್ಗದರ್ಶನ
-ಸೋಮಶೇಖರ್ ಪಿ. ಭದ್ರಾವತಿ
ಬೆಂಗಳೂರು: ಕೆಪಿಎಲ್ ಟಿ-20 ಕ್ರಿಕೆಟ್ಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಫ್ರಾಂಚೈಸಿಗಳು ಈ ಬಾರಿಯ ಪ್ರಶಸ್ತಿ ಪಡೆಯಲು ಸಕಲ ಸಿದ್ಧತೆ ನಡೆಸುತ್ತಿವೆ. ಅದೇ ರೀತಿ ಬಿಜಾಪುರ ಬುಲ್ಸ್ ಸಹ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಒತ್ತು ನೀಡಿ, ಆಟಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾಗುತ್ತಿದೆ. ಈ ಕುರಿತು ಬಿಜಾಪುರ ಬುಲ್ಸ್ ತಂಡದ ಮಾಲೀಕರಾದ ಕಿರಣ ವಿಠಲ್ ಕಟ್ಟಿಮನಿ ಹಾಗೂ ಜಗನ್ನಾಥ್ ಕನ್ನಡಪ್ರಭದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಿಜಾಪುರ ಬುಲ್ಸ್ ತಂಡ, ಆಟಗಾರರ ಬಿಡ್ ಹಾಗೂ ಪೂರ್ಣವಾಗಿ ತಂಡ ರೂಪುಗೊಂಡ ನಂತರ ಆಟಗಾರರನ್ನು, ಕೊಲಂಬೊದಲ್ಲಿರುವ ಶ್ರೀಲಂಕಾ ಮಾಜಿ ಆಟಗಾರರಾದ ಅರ್ಜುನ್ ರಣತುಂಗ ಹಾಗೂ ಸನತ್ ಜಯಸೂರ್ಯ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ.
ತಂಡ ಸ್ಟಾರ್ ಆಟಗಾರರನ್ನು ಎದುರು ನೋಡುತ್ತಿಲ್ಲ. ಬದಲಿಗೆ ಉತ್ತಮ ಪ್ರತಿಭೆಗಳನ್ನು ಸ್ಟಾರ್ಗಳನ್ನಾಗಿ ಮಾಡುವ ಪ್ರಯತ್ನ ನಮ್ಮದಾಗಿದೆ. ನಮ್ಮ ಉದ್ದೇಶ ಕೇವಲ ಒಂದು ಆವೃತ್ತಿಯಲ್ಲಿ ಭಾಗವಹಿಸುವುದಿಲ್ಲ. ಭವಿಷ್ಯದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಲು ಶ್ರಮಿಸುತ್ತಿದ್ದೇವೆ ಎಂದು ಮಾಲೀಕರಾದ ಕಿರಣ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೇದಿಕೆಯ ನಿರೀಕ್ಷೆಯಲ್ಲಿರುವ ಪ್ರತಿಭೆಗಳನ್ನು ಹುಡುಕಿ ಅವರಿಗೆ, ಪ್ರೋತ್ಸಾಹ ನೀಡುವ ಮೂಲಕ ಅವರ ಬೆಳವಣಿಗೆಗೆ ಸಹಕರಿಸಲು ನಾವು ಸಿದ್ಧರಾಗಿದ್ದೇವೆ. ತಂಡದ ಆಟಗಾರರಿಗೆ ಉತ್ತಮ ವಾತವರಣ ಕಲ್ಪಿಸಿ, ಪ್ರಶಸ್ತಿ ಗೆಲ್ಲಬೇಕೆಂಬುದು ನಮ್ಮ ಉದ್ದೇಶ ಎಂದು ತಂಡದ ಸಹ ಮಾಲೀಕರಾದ ಜಗನ್ನಾಥ್ ಅವರು ತಿಳಿಸಿದರು.
ಸ್ಥಳೀಯ ಆಟಗಾರರಿಗೆ ಪ್ರಾಮುಖ್ಯತೆ: ಇನ್ನು ಆಟಗಾರರ ಬಿಡ್ಡಿಂಗ್ ಆ.7ರಂದು ನಡೆಯಲಿದ್ದು, ಅದೇ ದಿನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆ ನಡೆಯಲಿದೆ ಹಾಗಾಗಿ ಬಿಡ್ಡಿಂಗ್ ಕುರಿತು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ನಮ್ಮ ವಲಯದಲ್ಲಿ ಸಾಕಷ್ಟು ಅತ್ಯುತ್ತಮ ಆಟಗಾರರಿದ್ದು, ಅವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಿ.ಆರ್.ವಿ- ಕಿರ್ಮಾನಿಗೆ ಮನವಿ: ಇನ್ನು ತಂಡದ ಜತೆ ಕೈಜೋಡಿಸಿ, ನಮ್ಮ ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡಲು ಭಾರತದ ಮಾಜಿ ಆಟಗಾರ ಜಿ.ಆರ್ ವಿಶ್ವನಾಥ್ ಹಾಗೂ ಸಯ್ಯದ್ ಕಿರ್ಮಾನಿ ಅವರಿಗೆ ಮನವಿ ಮಾಡಿದ್ದು, ಅವರಿಂದ ಇನ್ನಷ್ಟೇ ಅಂತಿಮ ನಿರ್ಧಾರ ಬರಬೇಕಿದೆ ಎಂದು ಮಾಹಿತಿ ನೀಡಿದರು. ಇನ್ನು ಇರ್ಫಾನ್ ಸೇಟ್ ಅವರನ್ನು ತಂಡದ ಕೋಚ್ ಆಗಿ ಮುಂದುವರಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದರು.
ಸ್ಥಳೀಯ ಕಲಾವಿದರಿಂದಲೇ ಚಿಯರ್ಸ್: ಈ ಬಾರಿ ನಾವು ಪ್ರತ್ಯೇಕವಾಗಿ ಚಿಯರ್ ಲೀಡರ್ಸ್ ಅನ್ನು ಕರೆಸಲು ಇಚ್ಚಿಸುವುದಿಲ್ಲ. ಸ್ಥಳೀಯ ಕಲಾವಿದರ ತಂಡವನ್ನು ಹುಡುಕುತಿದ್ದು, ಅವರನ್ನೇ ಚಿಯರ್ ತಂಡವಾಗಿ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಾವು ಆಟಗಾರರಿಗೆ ಚಿಯರ್ ನೀಡುವ ಬದಲು, ಅಲ್ಲಿಗೆ ಬರುವ ಪ್ರೇಕ್ಷಕರಿಗೆ ಚಿಯರ್ ಮಾಡುವ ಉದ್ದೇಶ ಹೊಂದಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

