ಚಿನ್ನದ ಚರಿತ್ರೆ ಬರೆದ ಕಶ್ಯಪ್

ಗ್ಲಾಸ್ಗೋ: ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಪದಕ ಗೆದ್ದ ಭಾರತದ ಪರುಪಳ್ಳಿ ಕಶ್ಯಪ್ ಅವರು ಐತಿಹಾಸಿಕ ಸಾಧನೆ ಮಾಡಿದರು. ತಂಬು ಆವೇಶಭರಿತರಾಗಿ ಪ್ರದರ್ಶನ ನೀಡಿದ 27 ವರ್ಷದ ಕಶ್ಯಪ್ ಅವರು, 32 ವರ್ಷಗಳ ನಂತರ ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಸಿಂಗಲ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಕೀರ್ತಿಗೆ ಪಾತ್ರರಾದರು. ಡೆಲ್ಲಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಕಶ್ಯಪ್ ಅವರು, ಸಂವೇದನಾಶೀಲ ಪ್ರದರ್ಶನ ನೀಡಿದರು. ಈ ಮೂಲಕ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ಡೆರೆಕ್ ವಾಂಗ್ ಅವರನ್ನು 21-14, 11-21, 21-19 ಗೇಮ್ಗಳಿಂದ ಪರಾಭವಗೊಳಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಜಯ ಕಂಡುಕೊಂಡ ಕಶ್ಯಪ್ ಅವರು ಗೆದ್ದಾಗ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದು, ಮರೆಯಲಾರದ ಕ್ಷಣವಾಗಿತ್ತು. ಇದರೊಂದಿಗೆ ಈ ಹಿಂದೆ ಚಿನ್ನದ ಪದಕ ಗೆದ್ದ ಪ್ರಕಾಶ್ ಪಡುಕೋಣೆ ಹಾಗೂ ದಿವಂಗತ ಸೈಯದ್ ಮೋದಿ ಅವರ ಪಟ್ಟಿಗೆ ಈಗ ಕಶ್ಯಪ್ ಸೇರಿಕೊಂಡಿದ್ದಾರೆ. 1978ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪಡುಕೋಣೆ ಪದಕ ಗೆದ್ದುಕೊಂಡಿದ್ದರು. ಅದಾಗಿ ನಾಲ್ಕು ವರ್ಷಗಳ ನಂತರ ಸೈಯದ್ ಮೋದಿ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ವಿಶ್ವದ ನಂಬರ್ 22ನೇ ಆಟಗಾರನಾಗಿರುವ ಕಶ್ಯಪ್ ಅವರಿಗೆ ಇದು ವೃತ್ತಿ ಜೀವನದ ದೊಡ್ಡ ಪ್ರಶಸ್ತಿಯಾಗಿದೆ. ಈ ಹಿಂದೆ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಶ್ಯಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದರು. ಅಲ್ಲದೆ, 2012ರಲ್ಲಿ ಸೈಯದ್ ಮೋದಿ ಗ್ರಾನ್ ಪ್ರಿಕ್ಸ್ ಗೋಲ್ಡ್ ಗೆದ್ದುಕೊಂಡಿದ್ದರು.
ಸೋತ ಜ್ವಾಲಾ-ಅಶ್ವಿನಿ: ಕಶ್ಯಪ್ ಚಿನ್ನದ ಪದಕ ಗೆದ್ದ ನಂತರ ಬ್ಯಾಡ್ಮಿಂಟನ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು.
ಆದರೆ, ಮಲೇಷ್ಯಾದ ವಿವಿಯನ್ ಕಾಹ ಮೂನ್ ಹೂ ಮತ್ತು ಖೆ ವೀ ವೂನ್ ಜೋಡಿ ವಿರುದ್ಧ 17-21, 21-23 ಗೇಮ್ಗಳಿಂದ ಸೋಲನುಭವಿಸುವ ಮೂಲಕ ಜ್ವಾಲಾ-ಅಶ್ವಿನಿ ಬೆಳ್ಳಿಗೆ ತೃಪ್ತಿಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


