ಕ್ರೀಡೆ

ಹುಬ್ಳೀಲಿ ಕೆಪಿಎಲ್ ಫೈನಲ್

ಹುಬ್ಳೀಲಿ ಕೆಪಿಎಲ್ ಫೈನಲ್
Published On :

ಹುಬ್ಬಳ್ಳಿ: ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್)ನ ಟಿ-20 ಸೆಮಿಫೈನಲ್ ಹಾಗೂ ಫೈನಲ್ ಕ್ರಿಕೆಟ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯಲಿವೆ.
ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಸೆ. 9ರಿಂದ 12ರ ವರೆಗೆ ಕೆಪಿಎಲ್ ಪಂದ್ಯಗಳು ನಡೆಯಲಿದ್ದು, ಸೆ. 11ರಂದು ಸೆಮಿಫೈನಲ್ ಹಾಗೂ ಸೆ. 12ರಂದು ಫೈನಲ್ ಪಂದ್ಯ ನಡೆಯಲಿವೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಗೌರವ ಅಧ್ಯಕ್ಷ ಪಿ.ಆರ್. ಅಶೋಕ ಆನಂದ್, ಸೆ. 9ರಂದು ಸಂಜೆ 4ಕ್ಕೆ ಮಂಗಳೂರು ಯುನೈಟೆಡ್ ಮತ್ತು ಮೈಸೂರು ವಾರಿಯರ್ಸ್ ಮಧ್ಯೆ, ರಾತ್ರಿ 8ಕ್ಕೆ ಹುಬ್ಬಳ್ಳಿ ಟೈಗರ್ಸ್ ಮತ್ತು ಬಿಜಾಪುರ ಬುಲ್ಸ್ ಹಾಗೂ ಸೆ. 10ರಂದು ಸಂಜೆ 4ಕ್ಕೆ ಬಳ್ಳಾರಿ ಟಸ್ಕರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್, ರಾತ್ರಿ 8ಕ್ಕೆ ಹುಬ್ಬಳ್ಳಿ ಟೈಗರ್ಸ್ ಮತ್ತು ಚಿತ್ರನಟ ಸುದೀಪ ಅವರ ರಾಕ್‌ಸ್ಟಾರ್ಸ್ ತಂಡಗಳ ಮಧ್ಯೆ ಪಂದ್ಯ ನಡೆಯಲಿವೆ ಎಂದು ತಿಳಿಸಿದರು.
ಸೆ. 11ರಂದು ಸಂಜೆ 4 ಗಂಟೆಗೆ ಸೆಮಿಫೈನಲ್ ಪಂದ್ಯಾವಳಿ ಟಾಪ್ ಒನ್ ತಂಡದ ವಿರುದ್ಧ ಟಾಪ್ 4ನೇ ತಂಡ ಸೆಣಸಲಿದ್ದು, ರಾತ್ರಿ 8ಕ್ಕೆ ಟಾಪ್ 2ನೇ ತಂಡದ ವಿರುದ್ಧ ಟಾಪ್ 3ನೇ ತಂಡ ಹೋರಾಟ ನಡೆಸಲಿದೆ. ಸೆ. 12ರಂದು ರಾತ್ರಿ 8ಕ್ಕೆ ಫೈನಲ್ ಪಂದ್ಯ ನಡೆಯಲಿದೆ.   
ಆ. 7ರಂದು ಬಿಡ್ಡಿಂಗ್: ಆ. 7ರಂದು ಕೆಪಿಎಲ್ ಬಿಡ್ಡಿಂಗ್ ನಡೆಯಲಿದೆ. ಎ ಶ್ರೇಣಿ ಆಟಗಾರರಿಗೆ ಕನಿಷ್ಠ ರು. 50 ಸಾವಿರದಿಂದ ಗರಿಷ್ಠ ರು. 12 ಲಕ್ಷ ನಿಗದಿಪಡಿಸಿದ್ದರೆ, ಬಿ ಶ್ರೇಣಿಯ ಆಟಗಾರರಿಗೆ ಕನಿಷ್ಠ ರು. 10 ಸಾವಿರದಿಂದ ಗರಿಷ್ಠ ರು. 8 ಲಕ್ಷದವರೆಗಿನ ಮೊತ್ತವನ್ನು ಹರಾಜಿಗೆ ನಿಗದಿಪಡಿಸಲಾಗಿದೆ. ಪ್ರತಿ ತಂಡಕ್ಕೆ 15ರಿಂದ 18 ಆಟಗಾರರನ್ನ್ನು ಫ್ರಾಂಚೈಸಿಗಳು ಕೊಂಡುಕೊಳ್ಳಬಹುದು. ಎ ಶ್ರೇಣಿಯಿಂದ ಒಂದು ತಂಡ ಐವರು ಆಟಗಾರರನ್ನು ಮಾತ್ರ ಖರೀದಿಸಬಹುದು ಹಾಗೂ ಇಬ್ಬರು ಸ್ಥಳೀಯ ಆಟಗಾರರನ್ನೂ ತಂಡಗಳು ಕಣಕ್ಕಿಳಿಸಬಹುದು ಎಂದು ಅಶೋಕ ಆನಂದ್ ವಿವರಿಸಿದರು.
ಕೆಪಿಎಲ್ ಟಿ-20 ಹಗಲು ರಾತ್ರಿ ಪಂದ್ಯಗಳಿಗಾಗಿ ಫ್ಲಡ್‌ಲೈಟ್ ಸೇರಿದಂತೆ ಇನ್ನಿತರ ಸೌಲಭ್ಯ ಅಳವಡಿಕೆ ಕಾರ್ಯ ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಭರದಿಂದ ನಡೆದಿದೆ. ಫ್ಲಡ್‌ಲೈಟ್ ಅಳವಡಿಕೆ ಈ ಪಂದ್ಯಕ್ಕೆ ಮಾತ್ರ ಸೀಮಿತವಾಗಿರದೇ ಮೈದಾನದಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸಲಿವೆ.
ಭಾರತ ಎ-ವೆಸ್ಟ್ ಇಂಡೀಸ್ ಎ ತಂಡಗಳ ಮಧ್ಯೆ ಅಂತಾರಾಷ್ಟ್ರೀಯ ಪಂದ್ಯದ ನಂತರ ಹುಬ್ಬಳ್ಳಿ ಮೈದಾನ ಎಲ್ಲ ರೀತಿಯ ಪಂದ್ಯಗಳನ್ನಾಡಿಸಲು ಸಮರ್ಪಕವೆಂಬುದು ಸಾಬೀತಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಮೈದಾನದ ಸುತ್ತ ಈಜುಕೊಳ ಹಾಗೂ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಲೋಗೋವನ್ನು ತಂಡದ ಮಾಲೀಕರಾದ ಸುಶೀಲ ಜಿಂದಾಲ್ ಅನಾವರಣಗೊಳಿಸಿದರು.
ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ, ಮಾಜಿ ಕ್ರಿಕೆಟಿಗ್ ರಘುರಾಮ ಭಟ್, ಕೆಎಸ್‌ಸಿಎ ಸಹಾಯಕ ಕಾರ್ಯದರ್ಶಿ ಸಂತೋಷ ಮಿಲೆನ್, ಕೆಎಸ್‌ಸಿಎ ಧಾರವಾಡ ಘಟಕದ ಅಧ್ಯಕ್ಷ ಬಾಬಾ ಭೂಸದ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.