ರವಿ ಶಾಸ್ತ್ರಿ ಆಯ್ಕೆ, ಹೊಸ ಭವಿಷ್ಯಕ್ಕೆ ದಾರಿ

ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರ ಹಲವರಿಗೆ ಅಚ್ಚರಿಯಾದರೆ ಮತ್ತೆ ಕೆಲವರಿಗೆ ಆಘಾತವಾಗಿದೆ. ಈ ಬದಲಾವಣೆಯಿಂದಾಗಿ, ಭಾರತ ತಂಡದ ಪ್ರಸ್ತುತ ಸಂಕಷ್ಟದ ಪರಿಸ್ಥಿತಿಗೆ ಈ ಬದಲಾವಣೆ ನಿಜವಾಗಿಯೂ ಪರಿಹಾರವೇ? ರವಿಶಾಸ್ತ್ರಿ ಅವರ ಪಾತ್ರವೇನು? ಇನ್ನು ಕೋಚ್ ಡಂಕನ್ ಫ್ಲೆಚರ್ ಹಾಗೂ ನಾಯಕ ಧೋನಿ ಅವರ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವಿಸಿದೆ.
ರವಿಶಾಸ್ತ್ರಿ ಅವರ ಆಯ್ಕೆ ಕೆಲವರಿಗೆ ಕೇವಲ ಕಣ್ಣೊರೆಸುವ ತಂತ್ರವಾಗಿ ಕಾಣಬಹುದು. ಆದರೆ ಎರಡು ಪ್ರಮುಖ ಅಂಶಗಳನ್ನು ಗಮನಿಸಿದರೆ, ಬಿಸಿಸಿಐ ಈ ನಿರ್ಧಾರ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ವ್ಯವಸ್ಥೆಯನ್ನು ಬದಲಿಸಲು ನಾದಿಯಾಗಲಿದೆ. ಮೊದಲನೆಯದಾಗಿ ಪ್ರಸ್ತುತ ಭಾರತ ತಂಡ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತಂಡಕ್ಕೆ ಪ್ರಸಕ್ತ ಕ್ರಿಕೆಟ್ ಮನೋಭಾವ ಹೊಂದಿರುವ ಸಲಹೆಗಾರನ ಅಗತ್ಯವಿದೆ. ಹಾಗಾಗಿ ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಸಹ ಅರ್ಹ ವ್ಯಕ್ತಿಗಳಾಗಿದ್ದರು. ಆದರೆ ಸಧ್ಯಕ್ಕೆ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದ ಕಾರಣ, ರವಿಶಾಸ್ತ್ರಿ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದಾರೆ.
ಎರಡನೆಯದಾಗಿ ರವಿಶಾಸ್ತ್ರಿ ಬಿಸಿಸಿಐ ಆಡಳಿತ ಮಂಡಳಿಯನ್ನು ಚೆನ್ನಾಗಿ ಅರಿತಿದ್ದು, ಈ ಅಲ್ಪ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಮರ್ಥರಾಗಿದ್ದಾರೆ. ನಾಯಕ ಧೋನಿ ಹಾಗೂ ಡಂಕನ್ ಫ್ಲೆಚರ್ ಸೇರಿದಂತೆ ಪ್ರಸಕ್ತ ಭಾರತ ತಂಡದ ಆಟಗಾರರನ್ನು ರವಿಶಾಸ್ತ್ರಿ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ತಂಡವನ್ನು ನಿಭಾಯಿಸಲು ರವಿಶಾಸ್ತ್ರಿ, ಅತ್ಯುತ್ತಮ ಆಯ್ಕೆಯಾಗಿದ್ದಾರೆ.
ರವಿಶಾಸ್ತ್ರಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿಲ್ಲ. ಬದಲಿಗೆ ನಿರ್ದೇಶಕರಾಗಿ ಸ್ಥಾನ ಅಲಂಕರಿಸಿದ್ದಾರೆ. ಈ ಸ್ಥಾನಕ್ಕೆ ಸಂಪೂರ್ಣ ಪ್ರಮಾಣ ಬದ್ಧತೆ ಅಗತ್ಯ. ಅಲ್ಪಾವಧಿಯ ಸಮಯದಲ್ಲಿ ತಂಡದಲ್ಲಿ ಜವಾಬ್ದಾರಿ ನಿಭಾಯಿಸುವುದು ಶ್ರೇಷ್ಠ ಕ್ರಿಕೆಟಿಗರಿಗೂ ಕಷ್ಟ. ಉದಾಹರಣೆಗೆ ಟೆಸ್ಟ್ ಸರಣಿಯ ಆರಂಭದಲ್ಲಿ ರಾಹುಲ್ ದ್ರಾವಿಡ್ ಭಾರತ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಜವಾಬ್ದಾರಿಯ ನಿಭಾಯಿಸಿದರೂ, ಸರಣಿಯಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಪ್ರಸಕ್ತ ಕ್ರಿಕೆಟ್ ಬಗ್ಗೆ ಕಳೆದ ದಶಕಗಳಿಂದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿ ಈ ಸ್ಥಾನಕ್ಕೆ ಸೂಕ್ತ. ಹಾಗಾಗಿ ರವಿಶಾಸ್ತ್ರಿ ಈ ಸ್ಥಾನವನ್ನು ನಿಭಾಯಿಸಬಲ್ಲರು. ಸಕಾರಾತ್ಮಕ ಭಾವನೆ, ಯಾವುದೇ ಹಂತದಲ್ಲೂ ಸೋಲೊಪ್ಪಿಕೊಳ್ಳದ ಮನೋಭಾವದಿಂದ ತಂಡದಲ್ಲಿನ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತ ಕ್ರಿಕೆಟ್ನ ಆಯಾಮ ಬದಲಾವಣೆಯ ಸಂದರ್ಭದಲ್ಲಿ ರವಿಶಾಸ್ತ್ರಿ ಅವರ ಆಯ್ಕೆ ಒಂದು ಮಹತ್ತರವಾದ ನಿರ್ಧಾರ ಎಂದರೆ ತಪ್ಪಿಲ್ಲ. ಇದು ಕೇವಲ ವರ್ಣರಂಜಿತ ಸ್ಥಾನವಲ್ಲ. ಮುಂದಿನ ಹದಿನೈದು ದಿನಗಳ ಕಾಲ ಶಾಸ್ತ್ರಿ ಅವರಿಗೆ ನೀಡಿರುವ ಅಧಿಕಾರ ಅತ್ಯಂತ ಮಹತ್ವದ್ದಾಗಿದೆ. ತಂಡಗಳ ಆಯ್ಕೆ ಸೇರಿದಂತೆ ತಂಡದ ಪ್ರಮುಖ ನಿರ್ಧಾರಗಳಲ್ಲಿ ಬದಲಾವಣೆ ತರುವ ಅಧಿಕಾರವನ್ನು ಇವರಿಗೆ ನೀಡಲಾಗಿರುವುದು, ಅತ್ಯಂತ ಪ್ರಮುಖವಾದುದು.
ನನ್ನ ಪ್ರಕಾರ ರವಿಶಾಸ್ತ್ರಿ ಪ್ರತಿಯೊಬ್ಬ ಆಟಗಾರ, ಸಹಾಯಕ ಸಿಬ್ಬಂದಿ ಬಳಿಯು ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ನಂತರ ಪ್ರತಿಯೊಂದು ಅಂಶವನ್ನು ವಿಶ್ಲೇಷಿಸಿ, ಏಕೆ ಭಾರತ ತಂಡದ ಪ್ರದರ್ಶನ ಮಂದಗತಿಯಾಗಿದೆ ಎಂದು ಬಿಸಿಸಿಐಗೆ ವರದಿ ನೀಡಲಿದ್ದಾರೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧ 1-3 ಅಂತರದಲ್ಲಿ ಟೆಸ್ಚ್ ಸರಣಿಯನ್ನು ಸೋತಿರುವುದು ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಭಾರತ ತಂಡ ಲಾರ್ಡ್ಸ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ನಂತರ ಸರಣಿಯನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ತಂಡ ಸರಣಿ ಗೆಲ್ಲುವುದಿರಲಿ, ಎದುರಾಳಿಗೆ ಸಮರ್ಥ ಹೋರಾಟವನ್ನು ನೀಡದೇ ಸೋಲನುಭವಿಸಿರುವುದು ಬಿಸಿಸಿಐನಲ್ಲಿರುವ ಸದಸ್ಯರಿಗೆ ತೀವ್ರ ಬೇಸರ ಮೂಡಿಸಿದೆ.
ಇಂಗ್ಲೆಂಡ್ ಪ್ರವಾಸದ ಮಧ್ಯಭಾಗದಲ್ಲಿ ಬಿಸಿಸಿಐ ಈ ಮಹತ್ತರ ನಿರ್ಧಾರ ತೆಗೆದುಕೊಂಡಿರುವುದು, ಕೇವಲ ಸದ್ಯದ ಪರಿಸ್ಥಿತಿಯನ್ನು ಸರಿಪಡಿಸಲಷ್ಟೇ ಅಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ಸ್ಪಷ್ಟ ಸಂದೇಶ ದೊರೆತಿದೆ. ಈ ಹಿಂದೆ ಭಾರತೀಯ ಆಟಗಾರರೇ ವಿದೇಶಿ ಕೋಚ್ಗಳಿಗೆ ಮಣೆಹಾಕಿದ್ದರು. ಆದರೆ ಡಂಕನ್ ಫ್ಲೆಚರ್ ಬಳಿಕ ಈ ವಿಷಯವನ್ನು ಪರಿಶೀಲಿಸುವಂತಾಗಿದೆ. ಫ್ಲೆಚರ್ ಸಮಯದಲ್ಲಿ ಭಾರತೀಯ ಆಟಗಾರರ ಫಿಟ್ನೆಸ್ ಕಳಪೆಯಾಗಿದ್ದು, ಕ್ಷೇತ್ರ ರಕ್ಷಣೆಯೂ ಹಳಿ ತಪ್ಪಿದಂತಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಭಾರತೀಯ ಕೋಚ್ ನೇಮಕಕ್ಕೆ ಬಿಸಿಸಿಐನ ನಿರ್ಧಾರ ಸುಳಿವು ನೀಡಿದಂತಾಗಿದೆ.
ಬಿಸಿಸಿಐ ಜತೆಗೆ ಫ್ಲೆಚರ್ ಒಪ್ಪಂದ ಮುಂದಿನ ವಿಶ್ವಕಪ್ವರೆಗೂ ಇದ್ದು, ಅಲ್ಲಿಯವರೆಗೂ ಬಿಸಿಸಿಐ ಕೋಚ್ ಆಗಿ ಮುಂದುವರಿಸುವುದೇ, ಎಂಬ ಅನುಮಾನವಿದೆ. ಏಕದಿನ ಸರಣಿ ಫ್ಲೆಚರ್ ಭವಿಷ್ಯ ನಿರ್ಧರಿಸಲಿದೆ. ಇನ್ನು ಧೋನಿ ನಾಯಕತ್ವ ಸೀಮಿತ ಓವರ್ ಕ್ರಿಕೆಟ್ನಲ್ಲಿ ಅತ್ಯದ್ಬುತವಾದರೆ, ಟೆಸ್ಟ್ನಲ್ಲಿ ಅದರಲ್ಲೂ ವಿದೇಶಿ ಪ್ರವಾಸದಲ್ಲಿ ಸತತ ಸೋಲು ಅವರ ತಂತ್ರಗಾರಿಕೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ತಂಡ ಹೊಸ ಬದಲಾವಣೆಯ ಹಾದಿಯಲ್ಲಿದ್ದು, ಇನ್ನಷ್ಟು ದಿನಗಳ ಕಾಲ ಅವಕಾಶ ನೀಡುವ ಸಾಧ್ಯತೆ ಇದೆ. ಇನ್ನು ಆಯ್ಕೆದಾರರಿಗೆ ಧೋನಿ ಜವಾಬ್ಧಾರಿಯನ್ನು ಬೇರೆಯವರಿಗೆ ವಹಿಸಲು ಸರಿಯಾದ ಆಯ್ಕೆ ಇಲ್ಲದಿರುವುದರಿಂದ, ಧೋನಿ ನಾಯಕತ್ವದಲ್ಲಿ ಮುಂದುವರೆಯಲು ನೆರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


