ಕ್ರೀಡೆ

ವಿರಾಟ್-ಅನುಷ್ಕಾ ಹಸೆಮಣೆ ಏರಲಿದ್ದಾರೆ

ವಿರಾಟ್-ಅನುಷ್ಕಾ ಹಸೆಮಣೆ ಏರಲಿದ್ದಾರೆ
Published On :

ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು, ವಿರಾಟ್-ಅನುಷ್ಕಾ ಬೆನ್ನಿಗೆ ನಿಂತ ಬಿಸಿಸಿಐ
ಮುಂಬೈ:
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದ ಹೊರತಾಗಿಯೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕ್ರಿಕೆಟಿಗರ ಬೆನ್ನಿಗೆ ನಿಂತಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ಹೀನಾಯ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಸಂಬಂಧದ ಕುರಿತು ಮಾಧ್ಯಮಗಳಲ್ಲಿ ಟೀಕಾಪ್ರಹಾರಗಳೇ ಹರಿದು ಬರುತ್ತಿರುವ ಹಿನ್ನಲೆಯಲ್ಲಿ, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ. 'ಶೀಘ್ರದಲ್ಲಿಯೇ ವಿರಾಟ್ ಮತ್ತು ಅನುಷ್ಕಾ ಶರ್ಮಾ ಅವರು ಮದುವೆಯಾಗುತ್ತಿದ್ದು, ಅವರಿಬ್ಬರು ಒಟ್ಟಿಗೆ ತಿರುಗುವುದರಲ್ಲಿ ತಪ್ಪೇನಿದೆ. ಅವರನ್ನು ಅವರ ಪಾಡಿಗೆ ಇರಲು ಬಿಡಿ' ಎಂದು ಬಿಸಿಸಿಐ ಹೇಳಿದೆ.

ಇಂಗ್ಲೆಂಡ್ ಸರಣಿಗೂ ಮುನ್ನ ಆಟಗಾರರರೊಂದಿಗೆ ಅವರ ಪತ್ನಿ ಅಥವಾ ಗೆಳತಿಯರು ಪ್ರಯಾಣಿಸಬಹುದು ಎಂಬ ಬಿಸಿಸಿಐ ನಿರ್ಧಾರಕ್ಕೆ ತಂಡದ ಮ್ಯಾನೇಜ್‌ಮೆಂಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಮುಖವಾಗಿ ವಿರಾಟ್ ಕೊಹ್ಲಿ ಅವರೊಂದಿಗೆ ಪ್ರಯಾಣಿಸಲು ಅನುಷ್ಕಾ ಅವರಿಗೆ ಅನುಮತಿ ನೀಡಿದ್ದನ್ನು ಟೀಮ್ ಮ್ಯಾನೇಜ್‌ಮೆಂಟ್ ಪ್ರಶ್ನಿಸಿತ್ತು. ಆದರೆ ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿರುವ ಬಿಸಿಸಿಐ ಆಡಳಿತ ಮಂಡಳಿ, ಆಟಗಾರರೊಂದಿಗೆ ಅವರ ಜತೆಗಾರ್ತಿಯರು ತೆರಳುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಹಲವು ಆಟಗಾರರು ಮತ್ತು ನಾಯಕರು ವಿದೇಶಿ ಪ್ರವಾಸಕ್ಕೆ ತಮ್ಮ ಗೆಳತಿಯರನ್ನು ಕರೆದೊಯ್ದಿದ್ದರು. ವಿರಾಟ್ ಮತ್ತು ಅನುಷ್ಕಾ ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದು, ಅವರಿಬ್ಬರು ಒಟ್ಟಿಗೆ ತಿರುಗಾಡುವುದರಲ್ಲಿ ತಪ್ಪಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದೆ.

ಆ ಮೂಲಕ ತೆರೆಮರೆಯಲ್ಲಿದ್ದ ವಿರಾಟ್ ಮತ್ತು ಅನುಷ್ಕಾ ನಡುವಿನ ಸಂಬಂಧವನ್ನು ಬಿಸಿಸಿಐ ಅಧಿಕಾರಿಗಳು ಜಗಜ್ಜಾಹಿರು ಮಾಡಿದ್ದಾರೆ. ಆದರೆ ಕುತೂಹಲಕಾರಿ ಅಂಶವೆಂದರೆ ತಮ್ಮ ಮದುವೆ ಕುರಿತು ನೂತನ ವಧುವರರಾಗಲಿ ಅಥವಾ ಅವರ ಮನೆಯವರಾಗಲಿ ಈ ವರೆಗೂ ಎಲ್ಲಿಯೂ ಮಾತನಾಡಿಲ್ಲ. ಅಷ್ಟರಲ್ಲಾಗಲೇ ಬಿಸಿಸಿಐ ಇವರಿಬ್ಬರ ನಡುವಿನ ಸಂಬಂಧವನ್ನು  ಬಹಿರಂಗ ಪಡಿಸಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಹೀನಾಯ ಸೋಲು, ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಪ್ರಮುಖವಾಗಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಮುಖ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರ ಕೆಂಣ್ಣಿಗೆ ಗುರಿಯಾಗಿದೆ. ಟೆಸ್ಟ್‌ನಲ್ಲಿ ಧೋನಿ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಟೀಕಾಕಾರರು, ವಿರಾಟ್ ಕೊಹ್ಲಿ ಕುರಿತಾಗಿ ಅವರ ನೂತನ ಸಂಬಂಧದ ಬಗ್ಗೆ ಕಿಡಿಕಾರಿದ್ದಾರೆ.

ಟೆಸ್ಟ್ ಸರಣಿಗೂ ಮೊದಲು ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಟ ಫಾರ್ಮ್‌ನಲ್ಲಿದ್ದ ವಿರಾಟ್ ಕೊಹ್ಲಿ, ಟೆಸ್ಟ್ ಸರಣಿಯಲ್ಲಿ ಒಟ್ಟು 10 ಇನ್ನಿಂಗ್ಸ್‌ಗಳಲ್ಲಿ ಕೇವಲ 134ರನ್‌ಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಇದು ಅವರ ವೃತ್ತಿ ಜೀವನ ಅತ್ಯಂತ ಕಳಪೆ ಪ್ರದರ್ಶನವಾಗಿ ದಾಖಲಾಗಿದೆ. ಸರಣಿ ಆರಂಭದ ಲಾರ್ಡ್ಸ್ ಟೆಸ್ಟ್‌ನಲ್ಲಿ ಐತಿಹಾಸಿಕ ಜಯ ದಾಖಲಿಸಿದ ಭಾರತ ತಂಡ ನಂತರ ಅತ್ಯಂತ ಕಳಪೆ ಪ್ರದರ್ಶನ ನೀಡಿ ಹೀನಾಯವಾಗಿ ಸರಣಿ ಸೋತಿತ್ತು. ಧೋನಿ ನಾಯಕರಾಗಿ ವಿಫಲರಾದರೆ, ಕೊಹ್ಲಿ ಓರ್ವ ಪ್ರಮುಖ ಬ್ಯಾಟ್ಸಮನ್ ಆಗಿ ವಿಫಲರಾಗಿದ್ದರು. ಹೀಗಾಗಿಯೇ ಈ ಇಬ್ಬರು ಆಟಗಾರರ ವಿರುದ್ಧ ಮಾಜಿ ಆಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.