ಕಿಕ್ ಬ್ಯಾಕ್
ಮೊದಲ ಮೂರು ವಿಶ್ವಕಪ್ಗಳ ಯಶಸ್ಸಿನ ಪಯಣ ಸಾಗಿದ ನಂತರ 1942 ಹಾಗೂ 1946ರಲ್ಲಿ ನಡೆಯಬೇಕಿದ್ದ ವಿಶ್ವಕಪ್ ಪಂದ್ಯಾವಳಿಗಳು ಎರಡನೇ ಮಹಾಯುದ್ಧದ ಕಾರಣ ರದ್ದಾದವು. ಇಡೀ ಜಗತ್ತು ಆತಂಕದ ಮಡುವಿನಲ್ಲಿತ್ತು. ಆದರೂ ಫುಟ್ಬಾಲ್ ಜನಪ್ರಿಯತೆ ಒಂದೆಡೆ ಹಚ್ಚಹಸಿರಾಗಿ ಉಳಿದೇ ಇತ್ತು. ಇದಕ್ಕೆ ಕಾರಣ 12 ವರ್ಷಗಳ ನಂತರ ಅಂದರೆ 1950ರಲ್ಲಿ ಮತ್ತೆ ಆರಂಭವಾದ ವಿಶ್ವಕಪ್ ಪಂದ್ಯಾವಳಿಗೆ ಮೊದಲ ಮೂರೂ ವಿಶ್ವಕಪ್ಗಳಿಗಿಂತ ಹೆಚ್ಚು ಜನಪ್ರಿಯತೆ ದೊರೆತಿದ್ದು.
1950
ಮತ್ತೆ ಅಬ್ಬರಿಸಿದ ಉರುಗ್ವೆ
ಉದ್ಘಾಟನಾ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿ ನಂತರದ ಎರಡು ವಿಶ್ವಕಪ್ನಲ್ಲಿ ಭಾಗವಹಿಸದ ಉರುಗ್ವೆ ತಂಡ ನಾಲ್ಕನೇ ವಿಶ್ವಕಪ್ನಲ್ಲಿ ಮತ್ತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. 1938ರ ವಿಶ್ವಕಪ್ನಂತರ 1942 ಹಾಗೂ 1946ರಲ್ಲಿ ನಡೆಯಬೇಕಿದ್ದ ಫಿಫಾ ವಿಶ್ವಕಪ್, ಎರಡನೇ ಮಹಾಯುದ್ಧದ ಹಿನ್ನಲೆಯಲ್ಲಿ ನಡೆಯಲಿಲ್ಲ. ನಂತರ ಆರಂಭದಲ್ಲಿ 1949ರಲ್ಲಿ ನಡೆಸಲು ನಿರ್ಧರಿಸಿದ್ದ ಈ ಟೂರ್ನಿಯನ್ನು ಕಾರಣಾಂತರದಿಂದ 1950ರಲ್ಲಿನ ವಿಶ್ವಕಪ್ ಅನ್ನು ಬ್ರೆಜಿಲ್ನಲ್ಲಿ ನಡೆಸಲಾಯಿತು. ಈ ಟೂರ್ನಿಯಲ್ಲಿ 13 ತಂಡಗಳು ಭಾಗವಹಿಸಿದ್ದು, 22 ಪಂದ್ಯಗಳನ್ನು ನಡೆಸಲಾಯಿತು.
ಈ ಪಂದ್ಯಾವಳಿಯಲ್ಲಿ ಜರ್ಮನಿ ಹಾಗೂ ಜಪಾನ್ ತಂಡಗಳು ಎರಡನೇ ಮಹಾಯುದ್ಧದಲ್ಲಿ ಸೋತ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದ ಹೊರಗಿಡಲಾಯಿತು. ಇನ್ನು ಭಾರತ ತಂಡ ವಿಶ್ವಕಪ್ಗೆ ಆಯ್ಕೆಯಾಗಿತ್ತಾದರೂ, ಬರಿಗಾಲಿನಲ್ಲಿ ಆಡಲು ಅನುಮತಿ ಇಲ್ಲದ ಕಾರಣ ಭಾರತವನ್ನು ಅನರ್ಹಗೊಳಿಸಲಾಯಿತು. ಇದು ಭಾರತಕ್ಕೆ ಸಿಕ್ಕ ಮೊದಲ ಅವಕಾಶ ಕೈ ತಪ್ಪಿದಂತಾಯಿತು. ಅಲ್ಲದೆ ಫ್ರಾನ್ಸ್ ಹಾಗೂ ಹಂಗೇರಿ ಸಹ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ.
ಪಂದ್ಯಾವಳಿಯಲ್ಲಿ 88 ಗೋಲುಗಳು ದಾಖಲಾಗಿದ್ದು, ಬ್ರೆಜಿಲ್ 22 ಗೋಲು ದಾಖಲಿಸಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತು. ಆದರೂ ಫೈನಲ್ನಲ್ಲಿ ಉರುಗ್ವೆ ಎದುರು ಮುಗ್ಗರಿಸಿದ ಬ್ರೆಜಿಲ್ ರನ್ನರ್ ಅಪ್ ಆಯಿತು.
1954
ಜಯಿಸಿದ ಪಶ್ಚಿಮ ಜರ್ಮನಿ
1954ರ ವಿಶ್ವಕಪ್ ಪಂದ್ಯಾವಳಿಯನ್ನು 1946ರ ವಿಶ್ವಕಪ್ ಆತಿಥ್ಯ ವಹಿಸಬೇಕಿದ್ದ ಸ್ವಿಜರ್ಲೆಂಡ್ಗೆ ನೀಡಲಾಯಿತು. ಈ ಟೂರ್ನಿಯಲ್ಲಿ ಪಶ್ಚಿಮ ಜರ್ಮನಿ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಟೂರ್ನಿಯಲ್ಲಿ ಗೋಲುಗಳ ಹೊಳೆ ಹರಿಯಿತು. ಈ ಬಾರಿ 16 ತಂಡಗಳು ಭಾಗವಹಿಸಿದ್ದು, ಒಟ್ಟು 26 ಪಂದ್ಯಗಳು ನಡೆದವು. ಪಂದ್ಯಾವಳಿಯಲ್ಲಿ 140 ಗೋಲು ದಾಖಲಾಗಿದ್ದು, ಅಲ್ಲದೆ ಅತಿ ಹೆಚ್ಚು ಗೋಲು ದಾಖಲಾದ ವಿಶ್ವಕಪ್ ಎಂಬ ಖ್ಯಾತಿ ಪಡೆಯಿತು. ಈ ಟೂರ್ನಿಗೆ ಅರ್ಹತಾ ಸುತ್ತಿನಲ್ಲಿ ಒಟ್ಟು 45 ತಂಡಗಳು ಭಾಗವಹಿಸಿತ್ತಾದರೂ ಅಂತಿಮವಾಗಿ 16 ತಂಡಗಳು ಮಾತ್ರ ಅರ್ಹತೆ ಪಡೆದವು.
ಅಲ್ಲದೆ ಈ ವಿಶ್ವಕಪ್ ಪಂದ್ಯಾವಳಿಯನ್ನು ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ ಮಾಡಲಾಯಿತು. ಈ ಟೂರ್ನಿಯ ಎಲ್ಲಾ ಪಂದ್ಯಗಳು 90 ನಿಮಿಷದ ನಂತರವೂ ಹೆಚ್ಚುವರಿ ಸಮಯಕ್ಕೆ ಮುಂದುವರಿಯಿತು. 120 ನಿಮಿಷದ ನಂತರವಷ್ಟೇ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಪಂದ್ಯಾವಳಿಯಲ್ಲಿ ಹಂಗೇರಿ ತಂಡ 27 ಗೋಲು ದಾಖಲಿಸಿ ಅತಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತಾದರೂ, ಪಶ್ಚಿಮ ಜರ್ಮನಿ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತು ಡ್ರಾಗೆ ತೃಪ್ತಿಪಟ್ಟುಕೊಂಡಿತು. ಈ ಪಂದ್ಯಕ್ಕೂ ಮೊದಲು ನಡೆದ 29 ಪಂದ್ಯಗಳಲ್ಲಿ ಹಂಗೇರಿ ತಂಡ ಸೋಲನ್ನು ಕಾಣದೆ ವಿಜಯ ಯಾತ್ರೆ ನಡೆಸಿತ್ತು. ಈ ಸೋಲಿನಿಂದ ಗೆಲವಿನ ಸರಪಳಿ ಮುರಿದು ಬಿತ್ತು.
1958
ಬ್ರೆಜಿಲ್ಗೆ ಪ್ರಶಸ್ತಿ ಭಾಗ್ಯ
ಆರನೇ ಫಿಫಾ ವಿಶ್ವಕಪ್ ಪಂದ್ಯವಳಿಯನ್ನು ಆಯೋಜಿಸುವ ಭಾಗ್ಯ ಸ್ವಿಡನ್ಗೆ ಒಲಿಯಿತಾದರೂ, ಪ್ರಶಸ್ತಿ ಭಾಗ್ಯ ಬ್ರೆಜಿಲ್ ಪಾಲಾಯಿತು. ಆತಿಥೇಯರನ್ನು ಫೈನಲ್ಸ್ನಲ್ಲಿ ಮಣಿಸಿದ ಬ್ರೆಜಿಲ್ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ಈ ಪಂದ್ಯಾವಳಿಯ ಅರ್ಹತಾ ಸುತ್ತಿನಲ್ಲಿ 45 ತಂಡಗಳು ಭಾಗವಹಿಸಿದ್ದರೂ, 16 ತಂಡಗಳು ಮಾತ್ರ ಪ್ರಮುಖ ಸುತ್ತಿಗೆ ಪ್ರವೇಶ ಪಡೆದವು. ಈ ಟೂರ್ನಿಯ ಪಂದ್ಯಗಳನ್ನು ಒಟ್ಟು 12 ನಗರಗಳಲ್ಲಿ ಆಯೋಜಿಸಲಾಗಿದ್ದು, ಒಟ್ಟು 35 ಪಂದ್ಯಗಳು ನಡೆದವು.
ತಂಡಗಳನ್ನು ನಾಲ್ಕು ಗುಂಪುಗಲನ್ನಾಗಿ ವಿಂಗಡಿಸಿ, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದವು. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಪರ ಕಮಕ್ಕಿಳಿದ ದಂತಕತೆ ಪೀಲೆಗೆ ಕೇವಲ 17 ವರ್ಷವಾಗಿದ್ದು, ವಿಶ್ವಕಪ್ ಫೈನಲ್ ಪಂದ್ಯವನ್ನಾಡಿದ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಇನ್ನು ಫ್ರಾನ್ಸ್ ಪರ ಟೂರ್ನಿಯಲ್ಲಿ 13 ಗೋಲು ದಾಖಲಿಸಿದ ಜಸ್ಟ್ ಫಾಂಟೇನ್, ಪಂದ್ಯಾವಳಿಯೊಂದರಲ್ಲಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ದಾಖಲೆ ಬರೆದರು. ಅಲ್ಲದೆ ಫ್ರಾನ್ಸ್ ಟೂರ್ನಿಯಲ್ಲಿ 23 ಗೋಲು ದಾಖಲಿಸಿ ಹೆಚ್ಚು ಗೋಲು ದಾಖಲಿಸಿದ ತಂಡವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

