ಕ್ರೀಡೆ

ಭಾರತ ಎ ತಂಡಗಳಿಗೆ ತಿವಾರಿ, ಉತ್ತಪ್ಪ ಸಾರಥ್ಯ

Published On :

ಮುಂಬೈ: ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳಾದ ಮನೋಜ್ ತಿವಾರಿ ಹಾಗೂ ರಾಬಿನ್ ಉತ್ತಪ್ಪ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಮವಾಗಿ ಭಾರತ 'ಎ' ತಂಡದ ನಾಲ್ಕು ದಿನಗಳ ಎರಡು ಪಂದ್ಯಗಳು ಹಾಗೂ ಏಕದಿನ ಪಂದ್ಯಗಳ ಚತುಷ್ಕೋನ ಸರಣಿಯಲ್ಲಿ ನಾಯಕತ್ವದ ಹೊಣೆ ಹೊರಲಿದ್ದಾರೆ.
ಸಂದೀಪ್ ಪಾಟೀಲ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಬುಧವಾರ ಇಲ್ಲಿ ಸಭೆ ಸೇರಿ ಈ ಎರಡೂ ಸರಣಿಗಳಿಗಾಗಿ ಭಾರತ ತಂಡವನ್ನು ಆಯ್ಕೆ ಮಾಡಿದೆ.
ಕರ್ನಾಟಕದ ರಾಬಿನ್ ಉತ್ತಪ್ಪ ಅವರು ಚತುಷ್ಕೋನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನ ಏಳನೇ ಆವೃತ್ತಿಯಲ್ಲಿ ರಾಬಿನ್ ಉತ್ತಪ್ಪ ಅತಿ ಹೆಚ್ಚು ರನ್‌ಗಳಿಸಿದ್ದಲ್ಲದೇ, ತಾವು ಪ್ರತಿನಿಧಿಸಿದ್ದ ಕೊಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್‌ಪಟ್ಟ ದಕ್ಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇದೇ ತಂಡದಲ್ಲಿ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಸಹ ಸ್ಥಾನ ಪಡೆದಿದ್ದಾರೆ. ಚತುಷ್ಟೋನ ಸರಣಿಯಲ್ಲಿ ಭಾರತ 'ಎ', ಆಸ್ಟ್ರೇಲಿಯಾ 'ಎ', ದಕ್ಷಿಣ ಆಫ್ರಿಕಾ 'ಎ' ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ನ್ಯಾಷನಲ್ ಪರ್‌ಫಾರ್‌ಮೆನ್ಸ್ ತಂಡಗಳು ಪಾಲ್ಗೊಳ್ಳಲಿವೆ.
ಇನ್ನು ನಾಲ್ಕು ದಿನಗಳ ಎರಡು ಪಂದ್ಯಗಳಿಗೆ ಆಯ್ಕೆ ಮಾಡಲಾಗಿರುವ ಮನೋಜ್ ತಿವಾರಿ ನಾಯಕತ್ವದ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಿಗೆ ಸ್ಥಾನ ಲಭಿಸಿದೆ. ರಾಬಿನ್ ಉತ್ತಪ್ಪ ಜೊತೆಗೆ ಯುವಪ್ರತಿಭೆಗಳಾದ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್‌ಗೆ ಅವಕಾಶ ಲಭಿಸಿದೆ. ಆದರೆ, ಕರ್ನಾಟಕದಿಂದ ಯಾವೊಬ್ಬ ಬೌಲರ್‌ಗೂ ಸ್ಥಾನ ದೊರೆತಿಲ್ಲ.
ಮೊದಲಿಗೆ ನಾಲ್ಕು ದಿನಗಳ ಎರಡು ಪಂದ್ಯಗಳು ಜುಲೈ 6 ಮತ್ತು ಜುಲೈ 13ರಿಂದ ಕ್ರಮವಾಗಿ ಬ್ರಿಸ್ಬೇನ್‌ನಲ್ಲಿಯೇ ನಡೆಯಲಿವೆ. ಬಳಿಕ ರೌಂಡ್ ರಾಬಿನ್ ಹಂತದ ಚತುಷ್ಕೋನ ಸರಣಿ ಜುಲೈ 20ರಿಂದ ಆರಂಭವಾಗಲಿದ್ದು, ಆಗಸ್ಟ್ 2ರಂದು ಫೈನಲ್ ಪಂದ್ಯ ನಡೆಯಲಿದೆ.
ಇದಾದ ನಂತರ ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಆಡಲಿದೆ. ಈ ಎಲ್ಲ ಪಂದ್ಯಾವಳಿಗಳ ಮೂಲಕ ಮುಂದಿನ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ ಪಂದ್ಯಾವಳಿಗಾಗಿ ಸಮರ್ಥ ಭಾರತ ತಂಡದ ಆಯ್ಕೆಗೆ ಅನುಕೂಲವಾಗುತ್ತದೆ.

ನಾಲ್ಕು ದಿನಗಳ ಸರಣಿಗೆ ತಂಡ: ಮನೋಜ್ ತಿವಾರಿ (ನಾಯಕ), ಕೆ.ಎಲ್. ರಾಹುಲ್, ಜೀವನ್‌ಜೋತ್ ಸಿಂಗ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಕರುಣ್ ನಾಯರ್, ನಮನ್ ಓಜಾ, ಪ್ರಗ್ಯಾನ್ ಓಜಾ, ಉಮೇಶ್ ಯಾದವ್, ಧವಳ್ ಕುಲಕರ್ಣಿ, ಅನುರೀತ್ ಸಿಂಗ್, ರಜತ್ ಪಾಲಿವಾಲ್, ಅಮಿತ್ ಮಿಶ್ರಾ, ಸಂದೀಪ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಬಾಬಾ ಅಪರಾಜಿತ್.

ಚತುಷ್ಕೋನ ಸರಣಿಗೆ ತಂಡ: ರಾಬಿನ್ ಉತ್ತಪ್ಪ (ನಾಯಕ), ಉನ್ಮುಕ್ತ ಚಾಂದ್, ಮನೀಷ್ ಪಾಂಡೆ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ಸಂಜು ಸ್ಯಾಮ್ಸನ್, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಧವಳ್ ಕುಲಕರ್ಣಿ, ರಿಶಿ ಧವನ್, ಮೋಹಿತ್ ಶರ್ಮಾ, ಕರಣ್ ಶರ್ಮಾ, ರಾಹುಲ್ ಶುಕ್ಲಾ, ಮನನ್ ವೋಹ್ರಾ, ಜೈದೇವ್ ಉನದ್ಕತ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.