ಭಾರತಕ್ಕೆ 9ನೇ ಸ್ಥಾನದ ಗೌರವ

ದಿ ಹೇಗ್ (ಹಾಲೆಂಡ್): ಭಾರತ ತಂಡದ ಆಟಗಾರರು ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಒಂಬತ್ತನೇ ಸ್ಥಾನದೊಂದಿಗೆ ತಮ್ಮ ಹೋರಾಟಕ್ಕೆ ತೆರೆ ಎಳೆದುಕೊಂಡಿದ್ದಾರೆ.
ಕ್ಯುಸೆರಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಒಂಬತ್ತು ಮತ್ತು 10ನೇ ಸ್ಥಾನಕ್ಕಾಗಿನ ಪ್ಲೇಆಫ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರು 3-0 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಪರಾಭವಗೊಳಿಸಿದರು.
ಈ ಗೆಲವಿನೊಂದಿಗೆ ಭಾರತ ತಂಡ ಕಳೆದ ವರ್ಷ ಮಲೇಷಿಯಾದ ಇಫೋದಲ್ಲಿ ನಡೆದ ಏಷ್ಯಾ ಕಪ್ ಫೈನಲ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಅನುಭವಿಸಿದ 3-4 ಗೋಲುಗಳ ಸೋಲಿಗೆ ಸೇಡು ತೀರಿಸಿಕೊಂಡಿತು.
ಭಾರತ ತಂಡದ ಪರ ಆಕಾಶ್ದೀಪ್ ಸಿಂಗ್ ಎರಡು ಗೋಲುಗಳಿಸಿದರೆ, ರೂಪಿಂದರ್ ಪಾಲ್ ಸಿಂಗ್ ಮತ್ತೊಂದು ಗೋಲು ದಾಖಲಿಸಿ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತದ ಆಟಗಾರರು ಪಂದ್ಯ ಆರಂಭಗೊಳ್ಳುತ್ತಿದ್ದಂತೆಯೇ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿ ಆಟದ ಮೇಲೆ ಹಿಡಿತ ಸಾಧಿಸಿದರು. ಪ್ರಥಮಾರ್ಧದ ಆರನೇ ನಿಮಿಷದಲ್ಲಿ ಎಸ್.ವಿ. ಸುನೀಲ್ ನೀಡಿದ ಪಾಸ್ನಲ್ಲಿ ಆಕಾಶ್ದೀಪ್ ಸಿಂಗ್, ಆಕರ್ಷಕ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು.
ಬಳಿಕ ಉತ್ತರಾರ್ಧದ ಆಟದಲ್ಲಿ ರೂಪಿಂದರ್ ಪಾಲ್ ಸಿಂಗ್ ಪಂದ್ಯದ 42ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಸ್ಟ್ರೋಕ್ ಅವಕಾಶದಲ್ಲಿ ಗೋಲುಗಳಿಸುವಲ್ಲಿ ಸಫಲರಾದರು. ಗೋಲು ಗೆರೆಯ ಬಳಿ ಕೊರಿಯಾ ತಂಡದ ಆಟಗಾರ, ಭಾರತೀಯ ಆಟಗಾರನಿಗೆ ಗೋಲುಗಳಿಸುವ ಅವಕಾಶ ತಪ್ಪಿಸುವ ಪ್ರಯತ್ನದಲ್ಲಿ ಅವರನ್ನು ತಳ್ಳಿದ್ದರು. ಇದರಿಂದಾಗಿ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ಲಭಿಸಿತ್ತು.
ಇದೇ ಸ್ಫೂರ್ತಿಯಲ್ಲಿ ಮುನ್ನುಗ್ಗಿದ ಸರ್ದಾರ್ ಸಿಂಗ್ ಪಡೆಗೆ ಮತ್ತೊಂದು ಗೋಲು ಸಂಪಾದಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೇವಲ 5 ನಿಮಿಷಗಳ ಅಂತರದಲ್ಲಿಯೇ ಆಕಾಶ್ದೀಪ್ ಸಿಂಗ್ (ಪಂದ್ಯದ 50ನೇ ನಿಮಿಷ) ಮತ್ತೊಂದು ಗೋಲು ಗಳಿಸಿ ಭಾರತದ ಮುನ್ನಡೆಯನ್ನು 3-0ಗೆ ಹಿಗ್ಗಿಸಿದರು. ಕಳೆದ ಬಾರಿ ನವದೆಹಲಿಯಲ್ಲಿ ನಡೆದ 2010ರ ವಿಶ್ವಕಪ್ನಲ್ಲಿ 8ನೇ ಭಾರತ ಸ್ಥಾನಕ್ಕೆ ತೃಪ್ತಿ ಹೊಂದಿತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


