ಕ್ರೀಡೆ

ಸುರೇಶ್ ರೈನಾ ಪಡೆಗೆ ಪರೀಕ್ಷೆ

ಸುರೇಶ್ ರೈನಾ ಪಡೆಗೆ ಪರೀಕ್ಷೆ
Published On :

ಮಿರ್‌ಪುರ: ಒಂದೆಡೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಮೆರೆಯಬೇಕು ಎಂಬ ಮನೋಭಾವದಿಂದ ಕೂಡಿದ ಭಾರತ ಯುವ ಪಡೆ, ಇನ್ನೊಂದೆಡೆ ಎರಡನೇ ದರ್ಜೆಯಿಂದ ಕೂಡಿರುವ ಭಾರತ ತಂಡವನ್ನು ಸೋಲಿಸಬೇಕು ಎಂಬ ಬಾಂಗ್ಲಾದೇಶ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಏಳು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದು, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಪರ್ವೇಜ್ ರಸೂಲ್ ಹಾಗೂ ಅಕ್ಷರ್ ಪಟೇಲ್ ಅವರಿಗೆ ತಂಡದಲ್ಲಿ ಸ್ಥಾನ ಒದಗಿಸಿಕೊಟ್ಟಿದೆ. ಅಲ್ಲದೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಈ ಎಲ್ಲ ಆಟಗಾರರು ತಮ್ಮ ಕೌಶಲ್ಯವನ್ನು ಮೆರೆಯಬಹುದಾಗಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಈಗ ಉಂಟಾಗಿರುವ ಕುತೂಲವಾಗಿದೆ. ಅಲ್ಲದೆ, ಫಿಫಾ ವಿಶ್ವಕಪ್ ಪಂದ್ಯಾವಳಿಯತ್ತ ಎಲ್ಲ ಕ್ರೀಡಾಭಿಮಾನಿಗಳ ಗಮನೆ ನೆಟ್ಟಿರುವ ಸಮಯದಲ್ಲಿ ಪಂದ್ಯಾವಳಿ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ. ಹೀಗಾಗಿಯೇ ಪಂದ್ಯಾವಳಿಯನ್ನು ನೇರವಾಗಿ ಬಿತ್ತರಿಸಲು ಕೊನೆ ದಿನದವರೆಗೂ ಅಗ್ರ ಪ್ರಾಯೋಜಕರು  ಮುಂದೆ ಬಂದಿರಲಿಲ್ಲ. ಆದರೆ, ಈ ಸ್ಟಾರ್‌ಸ್ಪೋರ್ಟ್ಸ್ ಮುಂದೆ ಬಂದಿದೆ.
 ಭಾರತ ತಂಡಕ್ಕೆ ಈ ಸರಣಿ ಅಧಿಕೃತವಾಗಿ ನೂತನ ಅಂತಾರಾಷ್ಟ್ರೀಯ ಋತುವು ಆರಂಭವಾಗಿದೆ. ಅಲ್ಲದೆ, ಇಂಡಿಯನ್ ಪ್ರಿಮೀಯರ್ ಲೀಗ್‌ನಲ್ಲಿ ಮುಳುಗಿದ್ದ ಆಟಗಾರರು, ಈ ರಾಷ್ಟ್ರೀಯ ತಂಡದ ಪರ ಉತ್ತಮ ಪ್ರದರ್ಶನ ನೀಡುವುದು ಈಗ ಅಗತ್ಯವಾಗಿದೆ.
ಏಷ್ಯಾ ಕಪ್‌ನಲ್ಲಿ ಏಕದಿನ ತಂಡದಿಂದ ಹೊರಗುಳಿದಿದ್ದ ಮತ್ತು ತಂಡದ ನಾಯಕತ್ವ ವಹಿಸಿಕೊಂಡಿರುವ ಸುರೇಶ್ ರೈನಾ ಅವರಿಗೆ ತಮ್ಮ ನೈಜ ಸಾಮರ್ಥ್ಯವನ್ನು ಮೆರೆಯಲು ಇದು ಸೂಕ್ತ ವೇದಿಕೆಯಾಗಿದೆ.
ಐಪಿಎಲ್ ಪಂದ್ಯಾವಳಿಯಲ್ಲಿ ಮಿಂಚಿದ ರಾಬಿನ್ ಉತ್ತಮ ಅವರು ದೀರ್ಘ ಕಾಲದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಬಗ್ಗೆ ಈಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಆರು ವರ್ಷಗಳ ನಂತರ ಉತ್ತಪ್ಪ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.ಉತ್ತಪ್ಪ ಪಂದ್ಯಾವಳಿಯಲ್ಲಿ ತಕ್ಕ ಪ್ರದರ್ಶನ ನೀಡಿದಲ್ಲಿ, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸುವ ಮುನ್ನ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಮೇಲೆ ಒತ್ತಡ ಹೆಚ್ಚಿಸಲಿದೆ.
ಇನ್ನು ಬಾಂಗ್ಲಾ ತಂಡ, ತಮ್ಮ ಹೊಸ ಕೋಚ್ ಚಾಂದಿಕಾ ಹಥುರಾಸಿಂಘೆ ಅವರ ಗರಡಿಯಲ್ಲಿ ಪಳಗಿದೆ. ಅಲ್ಲದೆ, ಐಸಿಸಿ ಟಿ20 ವಿಶ್ವಕಪ್‌ನ ಲೀಗ್ ಹಂತದಿಂದಲೇ ಹೊರಬಿದ್ದ ಬಾಂಗ್ಲಾ ತಂಡ ಈಗ ಗರಿ ಬಿಚ್ಚಿಕೊಳ್ಳಲು ತಕ್ಕ ಸಮಯವಾಗಿದೆ.
ಸ್ಥಿರ ಪ್ರದರ್ಶನ ನೀಡದಿರುವುದೇ ಬಾಂಗ್ಲಾದ ಪ್ರಮುಖ ವೈಫಲ್ಯವಾಗಿದೆ. ನಾಯಕ ರಹೀಮ್, ಆಲ್ರೌಂಡ್ ಆಟಗಾರ ಶಕಿಬ್ ಅಲ್ ಹಸನ್ ಹಾಗೂ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಅವರ ಮೇಲೆ ಬಾಂಗ್ಲಾದೇಶ ಹೆಚ್ಚು ಅವಲಂಬಿತವಾಗಿದೆ.

ತಂಡಗಳು
ಭಾರತ: ಸುರೇಶ್ ರೈನಾ (ನಾಯಕ), ರಾಬಿನ್ ಉತ್ತಪ್ಪ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ವಿನಯ್ ಕುಮಾರ್, ಉಮೇಶ್ ಯಾದವ್, ಸ್ಟುವಟ್ ಬಿನ್ನಿ, ಮೋಹಿತ್ ಶರ್ಮಾ ಹಾಗೂ ಅಮಿತ್ ಮಿಶ್ರಾ.

ಬಾಂಗ್ಲಾದೇಶ: ಮುಶ್ಫಿಖರ್ ರಹೀಮ್ (ನಾಯಕ), ತಮೀಮ್ ಇಕ್ಬಾಲ್, ಅನಾಮುಲ್ ಹಕ್, ಶಂಶೂರ್ ರಹಮಾನ್, ಮೊಮಿನಲ್ ಹಕ್, ಶಕಿಬ್ ಅಲ್ ಹಸನ್, ನಾಸಿರ್ ಹುಸೇನ್, ಮೊಹ್ಮದುಲ್ಲಾ, ಮಿಥುನ್ ಅಲಿ, ಅಬ್ದೂರ್ ರಜಾಕ್, ಮಶ್ರಾಫೆ ಮಾರ್ಟಾಜಾ, ಶೋಹಾಗ್ ಗಾಜಿ, ಜಿಯಾವುರ್ ರಹಮಾನ್, ಅಲ್-ಅಮಿನ್ ಹುಸೇನ್, ಟಸ್ಕಿಟನ್ ಅಹ್ಮದ್.

ಪಂದ್ಯ ಸಮಯ
ಮಧ್ಯಾಹ್ನ 12-30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.