ಬದ್ಧವೈರಿಗಳ ಬಡಿದಾಟ
ಏಷ್ಯಾ ಕಪ್: ಇಂದು ಭಾರತ-ಪಾಕಿಸ್ತಾನ ಮುಖಾಮುಖಿ
ಮೀರ್ಪುರ: ಶ್ರೀಲಂಕಾ ವಿರುದ್ಧ ಸೋಲನುಭವಿಸಿ ಆತಂಕದಲ್ಲಿ ಸಿಲುಕಿರುವ ಟೀಂ ಇಂಡಿಯಾ, ಏಷ್ಯಾಕಪ್ನಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.
ಲಂಕಾ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡರೆ ಮಾತ್ರ ಭಾರತ, ಪಾಕ್ ವಿರುದ್ಧ ತಕ್ಕ ಹೋರಾಟ ನೀಡಬಹುದಾಗಿದೆ. ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಸತತ ಎರಡು ಜಯ ಕಂಡ ಶ್ರೀಲಂಕಾ, ಈಗಾಗಲೇ ಏಷ್ಯಾ ಕಪ್ ಪಂದ್ಯಾವಳಿಯ ಫೈನಲ್ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹೀಗಾಗಿ ಈಗ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಕ್ಕಾಗಿ ಹರಸಾಹಸ ನಡೆಸಬೇಕಾಗಿದೆ. ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಮತ್ತೊಂದರಲ್ಲಿ ಸೋಲನುಭವಿಸಿವೆ. ಆದರೆ, ಪಾಕಿಸ್ತಾನ ತಂಡ, ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಗೆದ್ದಾಗ ಒಂದು ಬೋನಸ್ ಅಂಕ ಪಡೆದುಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶದ ವಿರುದ್ಧ ಸುಲಭ ಜಯ ಕಂಡುಕೊಂಡಿತ್ತು. ಆದರೆ, ನಂತರದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2 ವಿಕೆಟ್ಗಳ ಅಂತರದಿಂದ ಸೋಲನುಭವಿಸಿತ್ತು. ಇನ್ನು ಪಾಕಿಸ್ತಾನ ಸಹ ಶ್ರೀಲಂಕಾ ವಿರುದ್ಧವೇ 12 ರನ್ಗಳ ಅಂತರದಿಂದ ಪರಾಭವ ಹೊಂದಿತ್ತು. ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ಬಾಂಗ್ಲಾದೇಶದ ವಿರುದ್ಧ ಗೆಲ್ಲಲು ಭಾರತಕ್ಕೆ ನೆರವಾಗಿತ್ತು. ಇನ್ನು ಉಮರ್ ಅಕ್ಮಲ್ ಶತಕ ಸಿಡಿಸಿದ್ದು ಅಫ್ಘಾನಿಸ್ತಾನದ ವಿರುದ್ಧ ಗೆಲ್ಲಲು ಪಾಕಿಸ್ತಾನಕ್ಕೆ ನೆರವಾಗಿತ್ತು. ಇದು ಪಂದ್ಯಾವಳಿಯಲ್ಲಿ ಉಭಯ ತಂಡಗಳು ಇದುವರೆಗೂ ಒಂದೇ ರೀತಿಯಾದ ಪ್ರದರ್ಶನ ನೀಡಿರುವುದನ್ನು ತೋರಿಸುತ್ತಿದೆ.
ಈಗ ಎರಡೂ ತಂಡಗಳು ತಮ್ಮ ತಪ್ಪನ್ನು ತಿದ್ದಿಕೊಂಡು ಹೋರಾಟ ನಡೆಸಲು ಎದುರು ನೋಡುತ್ತಿವೆ.ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ಮನ್ಗಳು ವೈಫಲ್ಯ ಕಾಣುತ್ತಿರುವುದು, ಭಾರತ ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ. ಹೀಗಾಗಿ ಈಗ ಈ ಪಂದ್ಯದಲ್ಲಿ ಚೇತೇಶ್ವರ ಪೂಜಾರ್ಗೆ ತಂಡದ ಆಡಳಿತ ಮಂಡಳಿ ಅವಕಾಶ ನೀಡುವ ಸಾಧ್ಯತೆಗಳಿವೆ. ಏಕದಿನ ಕ್ರಿಕೆಟ್ನಲ್ಲಿ ಪದರ್ಪಾಣೆ ಮಾಡಲು ಬೆಂಚ್ ಕಾಯುತ್ತಿರುವ ಪೂಜಾರ ಪಾಕ್ ವಿರುದ್ಧ, ಭಾರತ ತಂಡಕ್ಕೆ ಸ್ಥಿರ ಪ್ರದರ್ಶನ ನೀಡುವ ಸಾಧ್ಯತೆಗಳಿವೆ. ಲಂಕಾ ವಿರುದ್ಧ ಅಂಬಾಟಿ ರಾಯುಡು (18), ದಿನೇಶ್ ಕಾರ್ತಿಕ್ (4) ಹಾಗೂ ಸ್ಟುವರ್ಟ್ ಬಿನ್ನಿ (0) ಬ್ಯಾಟಿಂಗ್ ವೈಫಲ್ಯ ಕಂಡಿದ್ದು, ಶ್ರೀಲಂಕಾ ವಿರುದ್ಧ ಭಾರತ 264 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಮಾತ್ರ ಸಾಧ್ಯವಾಗಿತ್ತು. ಶಿಖರ್ ಧವನ್ (94) ಮತ್ತು ವಿರಾಟ್ ಕೊಹ್ಲಿ (48) ಅಗ್ರ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಿದ್ದರು.
ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಅಂತಿಮ ಓವರ್ಗಳಲ್ಲಿ ಮೊನಚಾದ ಬೌಲಿಂಗ್ ಮಾಡದ ಪರಿಣಾಮ, ಲಂಕಾಕ್ಕೆ ಜಯ ಕಾಣಲು ಸುಲಭವಾಗಿ ಪರಿಣಮಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಅಮಿತ್ ಮಿಶ್ರಾ ಅವರಿಗೆ ಪಾಕ್ ವಿರುದ್ಧ ಅಂಗಣಕ್ಕಿಳಿಯಬಹುದು. ಅಲ್ಲದೆ, ಸ್ಪಿನ್ನರ್ ಅಮಿತ್ ಅವರು ಬ್ಯಾಟಿಂಗ್ನೊಂದಿಗೆ ತಕ್ಕ ಪ್ರದರ್ಶನ ನೀಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಯಾರು ಅಂಗಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ನಾಲ್ಕು ಕ್ಯಾಚ್ಗಳನ್ನು ಕೈಚೆಲ್ಲಿದ್ದ ಮತ್ತು ಒಂದು ಸ್ಟಂಪೌಟ್ ಮಿಸ್ ಮಾಡಿದ್ದ ಭಾರತ ಪಾಕ್ ವಿರುದ್ಧ ಫೀಲ್ಡಿಂಗ್ನಲ್ಲೂ ಅಚ್ಚುಕಟ್ಟಾಗಿರಬೇಕಾದ ಅಗತ್ಯವಿದೆ. ಇನ್ನೊಂದೆಡೆ ಪಾಕಿಸ್ತಾನ ಸಹ ಭಾರತದ ಮಾದರಿಯಲ್ಲೇ ಬ್ಯಾಟಿಂಗ್ ಸವಾಲುಗಳನ್ನು ಎದುರಿಸುತ್ತಿದೆ. ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಒಂದು ಎಸೆತ ಎದುರಿಸಿದೆ, ವಿಕೆಟ್ ಒಪ್ಪಿಸಿದ ಪಾಕ್ ನಾಯಕ ಮಿಸ್ಬಾ ಉಲ್ ಹಕ್ ರನೌಟ್ ಆಗಿದ್ದರು.ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಮೊಹ್ಮದ್ ಹಫೀಜ್ ಹಾಗೂ ಆಲ್ರೌಂಡರ್ ಶಹೀದ್ ಅಫ್ರಿದಿ ಸಹ ಸತತ ವೈಫಲ್ಯ ಕಾಣುತ್ತಿರುವುದು ಪಾಕಿಸ್ತಾನಕ್ಕೆ ಆತಂಕವಾಗಿ ಪರಿಣಮಿಸಿದೆ.ಉಮರ್ ಗುಲ್ ಮತ್ತು ಜುನೈದ್ ಖಾನ್ ಅವರಿಂದ ಕೂಡಿರುವ ಪಾಕ್ ವೇಗದ ಬೌಲಿಂಗ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಆದರೆ, ಸ್ಪಿನ್ನರ್ಗಳಾದ ಸಯಿದ್ ಅಜ್ಮಲ್, ಮೊಹ್ಮದ್ ಹಫೀಜ್ ಹಾಗೂ ಅಫ್ರಿದಿ ಅವರು ಭಾರತ ಬ್ಯಾಟ್ಸ್ಮನ್ಗಳಿಗೆ ಸವಾಲೊಡ್ಡಬಹುದಾಗಿದೆ. ಪಂದ್ಯದಲ್ಲಿ ಮಂಜು ಮಹತ್ವದ ಪಾತ್ರ ನಿರ್ವಹಿಸುವ ಸಾಧ್ಯತೆಗಳಿವೆ. ಹೀಗಾಗಿ ಉಭಯ ತಂಡಗಳು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಳ್ಳಲು ಎದುರು ನೋಡುತ್ತಿವೆ.
ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಟುವರ್ಟ್ ಬಿನ್ನಿ, ರವಿಚಂದ್ರನ್ ಅಶ್ವಿನ್, ಭುವನೇಶ್ವರ ಕುಮಾರ್, ಮೊಹ್ಮದ್ ಶಮಿ, ಚೇತೇಶ್ವರ ಪೂಜಾರ, ಅಮಿತ್ ಮಿಶ್ರಾ, ವರುಣ್ ಎರಾನ್ ಹಾಗೂ ಈಶ್ವರ ಪಾಂಡೆ.
ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಶಾರ್ಜಿಲ್ ಖಾನ್, ಅಹ್ಮದ್ ಶೆಹ್ಜಾದ್, ಮೊಹ್ಮದ್ ಹಫೀಜ್, ಸೋಹೈಬ್ ಮಖ್ಸೂದ್, ಉಮರ್ ಅಕ್ಮಲ್ (ವಿಕೆಟ್ ಕೀಪರ್), ಶಾಹಿದ್ ಅಫ್ರಿದಿ, ಅನ್ವರ್ ಅಲಿ, ಉಮರ್ ಗುಲ್, ಸಯಿದ್ ಅಜ್ಮಲ್, ಜುನೈದ್ ಖಾನ್, ಮೊಹ್ಮದ್ ತಲ್ಹಾ, ಅಬ್ದುರ್ ರೆಹ್ಮಾನ್, ಫವಾದ್ ಅಲಮ್.
ಪಂದ್ಯದ ಸಮಯ: ಮಧ್ಯಾಹ್ನ 1.30 ಗಂಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

