ಗೋಲು ಮಳೆ ಸುರಿಸಿದ ಮಣಿಪುರ ದೇವಿಯರು
ಮೈಸೂರು: ಸರಿತಾ ದೇವಿ ಅವರ ಸಮಯೋಚಿತ ಆಟದ ನೆರವಿನಿಂದ ಮಣಿಪುರ ಹಾಕಿ ತಂಡವು, ತ್ರಿಪುರ ತಂಡದ ವಿರುದ್ಧ 24-0 ಅಂತರದಲ್ಲಿ ಜಯ ಗಳಿಸಿತು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ಬುಧವಾರ ಆರಂಭವಾದ 4ನೇ ರಾಷ್ಟ್ರೀಯ ಕಿರಿಯ ಮಹಿಳೆಯರ ಹಾಕಿ ಪಂದ್ಯಾವಳಿ- 2014ರಲ್ಲಿ ಸರಿತಾ ದೇವಿ ಅವರು ಬಾರಿಸಿದ 9 ಗೋಲ್ಗಳು ತಂಡಕ್ಕೆ ಹೆಚ್ಚು ಆಸರೆ ನೀಡಿತು. ಆರಂಭದಿಂದಲೂ ಪಂದ್ಯವನ್ನು ತಮ್ಮ ಹಿಡಿತಕ್ಕೆ ಪಡೆದ ಮಣಿಪುರ ಹಾಕಿ ತಂಡವು, ತ್ರಿಪುರ ತಂಡಕ್ಕೆ ಒಂದು ಗೋಲ್ ಬಾರಿಸಲು ಸಹ ಅವಕಾಶ ನೀಡಲಿಲ್ಲ. ಸರಿತಾ ದೇವಿ 4ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಜೊತೆಗೆ 12, 17, 30, 36, 51, 58 ಮತ್ತು 66ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.
ಮಣಿಪುರ ತಂಡದ ಗೀತಾರಾಣಿ ಮೊದಲ ಗೋಲನ್ನು 2ನೇ ನಿಮಿಷದಲ್ಲಿ ಬಾರಿಸುವ ಮೂಲಕ ತಂಡದ ಖಾತೆ ತೆರೆದರು. ಮತ್ತೆ 7ನೇ ನಿಮಿಷದಲ್ಲಿ ಸರಿತಾ ದೇವಿ ಪೆನಾಲ್ಟಿ ಕಾರ್ನರ್ ಮೂಲಕವೆ ಮತ್ತೊಂದು ಗೋಲ್ ದಾಖಲಿಸಿದರು. ಬಳಿಕ ಸೋನಿಯಾ ದೇವಿ 9ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಮತ್ತೆ ಸರಿತಾ ದೇವಿ ಅವರು 12 ಮತ್ತು 17ನೇ ನಿಮಿಷದಲ್ಲಿ ಸತತ ಗೋಲ್ ಬಾರಿಸಿ ತಂಡದ ಇತರ ಆಟಗಾರರಿಂದ ಪ್ರಸಂಶೆಗೆ ಪಾತ್ರರಾದರು.
ಪಂದ್ಯಾವಳಿ ಅರ್ಧ ಸಮಯಕ್ಕಾಗಲೆ ಮಣಿಪುರ ತಂಡ 13-0 ಅಂತರ ಕಾಯ್ದುಕೊಂಡು ಪಂದ್ಯವನ್ನು ತನ್ನ ವಶಕ್ಕೆ ಪಡೆದಿತ್ತು. ದ್ವಿತೀಯಾರ್ಧದಲ್ಲೂ ತ್ರಿಪುರ ತಂಡವು, ಮಣಿಪುರ ತಂಡದ ಗೋಲ್ಗಳ ಮಳೆಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಈ ವೇಳೆ ರೋಜಿತ ದೇವಿ ನಾಲ್ಕು ಗೋಲ್ಗಳನ್ನು(39, 41, 45,47 ನಿ.) ಬಾರಿಸಿ ಗಮನ ಸೆಳೆದರು. ಒಟ್ಟಾರೆ ತಂಡವು 3 ಅಂಕ ಗಳಿಸಿತು.
ನಾಲ್ಕನೆ ಪಂದ್ಯಾವಳಿಯಲ್ಲಿ ಉತ್ತರಖಂಡ ಹಾಕಿ ತಂಡವು, ವಿದರ್ಭ ಹಾಕಿ ತಂಡವನ್ನು 7-0 ಅಂತರದಿಂದ ಮಣಿಸಿ, ಮೂರು ಅಂಕ ಗಳಿಸಿತು. ಅಗ್ರ ಕ್ರಮಾಂಕದ ಆಟಗಾರರಾದ ಪೂಜಾ ಮತ್ತು ಅನೀತಾ ಬಾರಿಸಿದ ತಲಾ ಎರಡು ಗೋಲ್ಗಳು ತಂಡಕ್ಕೆ ಪ್ರೇರಣೆಯಾಯಿತು.
ಮೊದಲ ದಿನದ ಫಲಿತಾಂಶ: ಮೊದಲ ಪಂದ್ಯ- ಛತ್ತೀಸ್ಘಡ ತಂಡಕ್ಕೆ ವಾಕ್ ಓವರ್ (ಹಿಮಾಚಲ ಪ್ರದೇಶ ತಂಡದ ಗೈರು)
ದ್ವಿತೀಯ ಪಂದ್ಯ- ಗೋ ಹಾಕಿ ತಂಡಕ್ಕೆ ವಾಕ್ ಓವರ್ (ಮಿಜೋರಾಮ್ ತಂಡ ಗೈರು)
ತೃತೀಯ ಪಂದ್ಯ- ತ್ರಿಪುರ ಹಾಕಿ ತಂಡ ಮಣಿಸಿದ ಮಣಿಪುರ್ ತಂಡ 24-0(ಹಾಫ್ ಟೈಮ್ 13-0)
ನಾಲ್ಕನೆ ಪಂದ್ಯ- ವಿದರ್ಭ ತಂಡ ಮಣಿಸಿದ, ಉತ್ತರಖಂಡ ಹಾಕಿ ತಂಡ 7-0.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

