ಕ್ರೀಡೆ

ಗೆಲವಿನ ಲಹರಿಗೆ ಮರಳಿದ ಬಿಎಫ್‌ಸಿ

Published On :

ಬೆಂಗಳೂರು: ಐ ಲೀಗ್ ಪಂದ್ಯಾವಳಿಯ ದ್ವಿತಿಯಾರ್ಧದಲ್ಲಿ ಮಂದಗತಿಯ ಆರಂಭ ಪಡೆದಿದ್ದ ಬೆಂಗಳೂರು ಎಫ್‌ಸಿ ತಂಡ ಮತ್ತೆ ತಮ್ಮ ಗೆಲವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಇಲ್ಲಿನ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಮ್ಮ ಎದುರಾಳಿ ಚರ್ಚಿಲ್ ಬ್ರದರ್ಸ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲವು ದಾಖಲಿಸಿದೆ.
ಬಿಎಫ್‌ಸಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ನಾಯಕ ಸುನಿಲ್ ಛೆಟ್ರಿ 2 ಗೋಲು ದಾಖಲಿಸಿದರೆ, ರಾಬಿನ್ ಸಿಂಗ್ ಒಂದು ಗೋಲು ದಾಖಲಿಸಿದರು.
ಐ ಲೀಗ್‌ಗೆ ಇದೇ ಮೊದಲ ಬಾರಿ ಭಾಗವಹಿಸುತ್ತಿರುವ ಬೆಂಗಳೂರು ಎಫ್‌ಸಿ ಪಂದ್ಯಾವಳಿಯ ಮೊದಲಾರ್ಧದ ಮುಕ್ತಾಯದ ವೇಳೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ನಂತರ ಕಳೆದ ಫೆ.23ರಂದು ಆರಂಭವಾದ ಎರಡನೇ ಅವಧಿಯ ಮೊದಲ ಪಂದ್ಯದಲ್ಲಿ ಮುಂಬೈ ಎಫ್‌ಸಿ ವಿರುದ್ಧ 1-1 ಗೋಲುಗಳ ಡ್ರಾಗೆ ತೃಪ್ತಿ ಪಟ್ಟುಕೊಂಡಿತ್ತು. ನಂತರ ಮಾ.1ರಂದು ನಡೆದ ಪಂದ್ಯದಲ್ಲಿ ರಂಗದಾಜಿದ್ ಯುನೈಟೆಡ್ ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲನುಭವಿಸಿತು. ಈ ಮೂಲಕ ಬಿಎಫ್‌ಸಿ ಎರಡನೇ ಅವಧಿಯಲ್ಲಿ ಮಂದಗತಿಯಲ್ಲಿ ಸಾಗುತ್ತಿತ್ತು. ಈ ಪಂದ್ಯದಲ್ಲಿ ತಂಡ ಮತ್ತೆ ಗೆಲವಿನ ಹಾದಿಗೆ ಮರಳಿರುವುದು ಬಿಎಫ್‌ಸಿ ಅಭಿಮಾನಿಗಳಿಗೆ ಸಂತಸ ತಂದಿದೆ.
ಈ ಗೆಲವಿನೊಂದಿಗೆ ಆಡಿರುವ 18 ಪಂದ್ಯಗಳಲ್ಲಿ 34 ಅಂಕಗಳನ್ನು ಪಡೆದಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಸಾಗಿದೆ. ನಂತರದ ಸ್ಥಾನದಲ್ಲಿ ಪುಣೆ ಎಫ್‌ಸಿ ತಂಡ 17 ಪಂದ್ಯಗಳಿಂದ 29 ಅಂಕಗಳನ್ನು ಪಡೆದು ಅಗ್ರಸ್ಥಾನದ ರೇಸ್‌ನಲ್ಲಿದೆ.
ಮೊದಲ ಅವಧಿಯಲ್ಲಿ ಉತ್ತಮ ಹೋರಾಟ: ಪಂದ್ಯದ ಮೊದಲ ಅವಧಿಯಲ್ಲಿ ಉಭಯ ತಂಡಗಳು ಪರಸ್ಪರ ಉತ್ತಮ ಹೋರಾಟ ನೀಡಿದರು. ಹಾಗಾಗಿ ಈ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಮೊದಲ ಅವಧಿಯಲ್ಲಿ ಚರ್ಚಿಲ್ ತಂಡ ಗೋಲು ದಾಖಲಿಸಲು ಅವಕಾಶವನ್ನು ಕಲ್ಪಿಸಿಕೊಂಡಿತಾದರೂ, ಬಿಎಫ್‌ಸಿ ತಂಡದ ಪರ ಜಾನ್ಸನ್ ಹಾಗೂ ಒಸ್ಸಾನೊ ಆಕ್ರಮಣಕಾರಿ ಆಟದಿಂದ ಎದುರಾಳಿಯ ಅವಕಾಶವನ್ನು ವಿಫಲಗೊಳಿಸಿದರು.
ಎರಡನೇ ಅವಧಿಯಲ್ಲಿ ಆರ್ಭಟಿಸಿದ ಬಿಎಫ್‌ಸಿ: ಮೊದಲ ಅವಧಿಯಲ್ಲಿ ಗೋಲು ಖಾತೆ ತೆರೆಯುವಲ್ಲಿ ವಿಫಲವಾಗಿದ್ದ ಬಿಎಫ್‌ಸಿ ಎರಡನೇ ಅವಧಿಯಲ್ಲಿ ಉತ್ತಮ ರೀತಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು.
ಪಂದ್ಯದ 56ನೇ ನಿಮಿಷದಲ್ಲಿ ರಾಬಿನ್ ಸಿಂಗ್ ಅವರು ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಪ್ರಯತ್ನಿಸಿದರು. ಆಗ ಗೋಲ್‌ಕೀಪರ್ ಚೆಂಡನ್ನು ಬೇರೆಡೆಗೆ ಕಳುಹಿಸಲು ಪ್ರಯತ್ನಿಸಿದರು. ಆಗ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸುನಿಲ್ ಛೆಟ್ರಿ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು.
ನಂತರ 61ನೇ ನಿಮಿಷದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ರಾಬಿನ್ ಸಿಂಗ್ ತಂಡಕ್ಕೆ ಎರಡನೇ ಗೋಲು ತಂದುಕೊಟ್ಟರು. ಇನ್ನು ಪಂದ್ಯದ 90ನೇ ನಿಮಿಷದಲ್ಲಿ ಮತ್ತೆ ಅವಕಾಶವನ್ನು ಬಳಸಿಕೊಂಡ ಛೆಟ್ರಿ ಗೋಲು ದಾಖಲಿಸಿ ತಂಡದ ಗೆಲವಿನ ಅಂತರವನ್ನು ಹೆಚ್ಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.