ಕ್ರೀಡೆ

ಯುವಿ, ರೈನಾ ಮೇಲೆ ಹೆಚ್ಚಿನ ನಿರೀಕ್ಷೆ

Published On :

ಟಿ20 ವಿಶ್ವಕಪ್ ಸರಣಿಯಲ್ಲಿ ಈ ಇಬ್ಬರ ಆಟಗಾರರ ಪ್ರದರ್ಶನ ಎಲ್ಲರ ಚಿತ್ತ ಸೆಳೆದಿದೆ
ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ಪ್ರಭುತ್ವ ಬ್ಯಾಟಿಂಗ್‌ನಿಂದ ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಈಗ ತಂಡಕ್ಕ ಮರಳಲು ಪ್ರಯತ್ನಿಸುತ್ತಿದ್ದಾರೆ. ಭಾರತ ತಂಡ ಕಳೆದ ಕೆಲ ಸರಣಿಗಳಲ್ಲಿ ಹೀನಾಯ ಸೋಲನುಭವಿಸುತ್ತಿದ್ದು, ತಂಡ ಮತ್ತೆ ಈ ಇಬ್ಬರು ಆಟಗಾರರ ಕಾಣಿಕೆಯನ್ನು ಎದುರು ನೋಡುತ್ತಿದೆ.
ಈ ಇಬ್ಬರು ಆಟಗಾರರು ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್ ಸರಣಿಯನ್ನು ಮನೆಯಲ್ಲಿ ಕೂತು ವೀಕ್ಷಿಸಿದ್ದಾರೆ. ಭಾರತ ತಂಡದ ಪರಿಸ್ಥಿತಿ ಇವರಿಗೆ ಅರಿವಾಗಿದೆ. ಅಲ್ಲದೆ ತಂಡಕ್ಕೆ ಮರಳಿದಾಗ ತಾವು ನಿಭಾಯಿಸಬೇಕಾದ ಜವಾಬ್ದಾರಿಯನ್ನು ಅರಿತಿದ್ದಾರೆ. ಹಾಗಾಗಿ ಮುಂಬರುವ ಟಿ20 ವಿಶ್ವಕಪ್ ಸರಣಿಯಲ್ಲಿ ಈ ಇಬ್ಬರ ಆಟಗಾರರ ಪ್ರದರ್ಶನ ಎಲ್ಲರ ಚಿತ್ತ ಸೆಳೆದಿದೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಳೆಗೆ ತುತ್ತಾದ ಕಡೆಯ ಹಾಗೂ ಮೂರನೇ ಏಕದಿನ ಪಂದ್ಯ ಯುವರಾಜ್ ಪಾಲಿಗೆ ಕಡೆಯ ಪಂದ್ಯವಾಗಿದೆ. ಇನ್ನು ರೈನಾ ನ್ಯೂಜಿಲೆಂಡ್ ಪ್ರವಾಸದಲ್ಲಿ ತಂಡದಿಂದ ಹೊರಗುಳಿದಿದ್ದರು. ಆದರೆ ಸಂದೀಪ್ ಪಾಟೀಲ್ ನೇತೃತ್ವದ ಭಾರತ ತಂಡದ ಆಯ್ಕೆ ಸಮಿತಿ ಈ ಇಬ್ಬರ ಅನುಭವ ತಂಡಕ್ಕೆ ಬೇಕಾಗಿರುವುದನ್ನು ಅರಿತಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಈ ಆಟಗಾರರನ್ನು ಆಯ್ಕೆ ಮಾಡಿದೆ.
ವಿಶ್ವದ ಬಲಿಷ್ಠ ತಂಡವಾಗಿ ಬಿಂಬಿತವಾಗಿರುವ ಭಾರತ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಪ್ರವಾಸದಲ್ಲಿ ಗೆಲವು ಕಾಣಲಿಲ್ಲ. ಅಲ್ಲದೆ ಈ ವರ್ಷ ಭಾರತ ಕೇವಲ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಮಾತ್ರ ಗೆಲವು ಸಾಧಿಸಿದೆ. ಭಾರತ ತಂಡ ಎದುರಿಸುತ್ತಿರುವ ಸೋಲಿನ ಸಮಸ್ಯೆಗೆ ಈ ಇಬ್ಬರು ಆಟಗಾರರು ಪರಿಹಾರವಾಗುವರೇ ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ. ಈ ಇಬ್ಬರ ಬ್ಯಾಟಿಂಗ್‌ನಿಂದ ಸರಾಗವಾಗಿ ರನ್ ಹರಿಯಲಾರಂಭಿಸಿದರೆ, ಭಾರತ ತಂಡದ ಮುಂದೆ ಬೆಟ್ಟದಂತೆ ಕಾಣುತ್ತಿರುವ ಸಮಸ್ಯೆ ಮಂಜಿನಂತೆ ಕರಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಧ್ಯಮ ಕ್ರಮಾಂಕ ಕುಗ್ಗಿದೆ: ಯುವರಾಜ್ ಹಾಗೂ ರೈನಾ ವೈಫಲ ಕಾಣಲಾರಂಭಿಸಿದ ನಂತರ ತಂಡ ಗೆಲವಿನ ಹಳಿಯನ್ನು ತಪ್ಪಿದೆ. ನಂತರ ಕೊಹ್ಲಿ ಹಾಗೂ ನಾಯಕ ಧೋನಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದಾರೆ.
ಅಲ್ಲದೆ ಭಾರತದ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ಅವರನ್ನು ಪ್ರಯೋಗಿಸಲಾಗಿದೆಯಾದರು, ಈ ಪ್ರಯೋಗಗಳು ಯಶಸ್ವಿಯಾಗಿಲ್ಲ. ಒಂದು ವೇಳೆ ಬಾಂಗ್ಲಾದೇಶದಲ್ಲಿ ಯುವಿ ಹಾಗೂ ರೈನಾ ತಮ್ಮ ಅವಕಾಶವನ್ನು ಬಳಸಿಕೊಂಡಿದ್ದೇ ಆದಲ್ಲಿ ನಾಯಕ ಧೋನಿಗೆ ಸವಾಲು ಎದುರಿಸಲು ಕಷ್ಟವಾಗುವುದಿಲ್ಲ.
ಮುಂದಿನ ವರ್ಷ ವಿಶ್ವಕಪ್ ಹಿನ್ನಲೆಯಲ್ಲಿ ಈ ಇಬ್ಬರು ಆಟಗಾರರ ಅಗತ್ಯವನ್ನು ಆಯ್ಕೆ ಸಮಿತಿ ಮನಗಂಡಿದೆ. ಆದರೆ ಅವರ ಕಳಪೆ ಫಾರ್ಮ್‌ನಿಂದ ಟೀಕಾಕಾರರ ಒತ್ತಡದಿಂದ ಈ ಆಟಗಾರರನ್ನು ತಂಡದಿಂದ ಕೈಬಿಡಲು ಆಯ್ಕೆ ಸಮಿತಿ ಮುಂದಾಯಿತು.
ಕಳೆದ ಒಂದೂವರೆ ಹಾಗೂ ಎರಡು ತಿಂಗಳಿಗೂ ಹೆಚ್ಚಿನ ಕಾಲ ಈ ಇಬ್ಬರೂ ಆಟಗಾರರಿಗೂ ಒಂದು ಬ್ರೇಕ್ ಸಿಕ್ಕಿದ್ದು, ಮತ್ತೆ ತಂಡದಲ್ಲಿ ಹೊಸ ಆರಂಭ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ತಮ್ಮ ಆಟದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಿ ನಡೆಸಿದ್ದಾರೆ.
ಇಬ್ಬರೂ ಉತ್ತಮ ತಯಾರಿ: ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಭಾರತ ತಂಡಕ್ಕೆ ಮರಳಲೇಬೇಕೆಂಬ ಪಣತೊಟ್ಟಿದ್ದು, ಇಬ್ಬರೂ ಆಟಗಾರರು ಸಾಕಷ್ಟು ತಯಾರಿ ನಡೆಸಿದ್ದಾರೆ.
ಈ ಇಬ್ಬರೂ ಆಟಗಾರರು ತಮ್ಮ ಬ್ಯಾಟಿಂಗ್‌ನಲ್ಲಿನ ಲೋಪಗಳನ್ನು ಕಂಡುಕೊಂಡು ಅದನ್ನು ಬಗೆಹರಿಸಿಕೊಳ್ಳುವ ಹಾಗೂ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಯುವರಾಜ್ ವಿಜಯ್ ಹಜಾರೆ ಪಂದ್ಯಾವಳಿಯಲ್ಲಿ ತಮ್ಮ ಬ್ಯಾಟಿಂಗ್ ಶೈಲಿ ಬದಲಿಸಿಕೊಂಡಿದ್ದಾರೆ. ತಮ್ಮ ಪುಟ್‌ವರ್ಕ್ ಮೇಲೆ ಸಾಕಷ್ಟು ಬದಲಾವಣೆ ಕಂಡುಕೊಂಡಿದ್ದಾರೆ. ಇನ್ನು ರೈನಾ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಬಳಿ ತಮ್ಮ ಸಮಸ್ಯೆಗೆ ಸಲಹೆ ಪಡೆದಿದ್ದಾರೆ.
ಒಟ್ಟಿನಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಈ ಇಬ್ಬರು ಆಟಗಾರರು ಫಾರ್ಮ್‌ಗೆ ಮರಳುವ ಮೂಲಕ ಪರಿಹಾರವಾಗುವರೇ ಎಂಬುದನ್ನು ಟಿ20 ವಿಶ್ವಕಪ್‌ನಲ್ಲಿ ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.