ಕ್ರೀಡೆ

ಭಾರತ ಹೆಮ್ಮೆಗಾಗಿ ಹೋರಾಟ

Published On :

ನವದೆಹಲಿ: ಆರಂಭದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಥಾಮಸ್ ಕಪ್ ಪೈಪೋಟಿಯಿಂದ ಹೊರನಡೆದಿರುವ ಭಾರತ ತಂಡದ ಆಟಗಾರರು ಮುಂದಿನ ಪಂದ್ಯಗಳಲ್ಲಿ ಗೌರವಕ್ಕಾಗಿ ಹೋರಾಟ ನಡೆಸಬೇಕಾಗಿದೆಯಷ್ಟೇ.
ಭಾರತ ತಂಡದ ಆಟಗಾರರು ಬುಧವಾರ ನಡೆಯಲಿರುವ 'ಸಿ' ಗುಂಪಿನ ತಮ್ಮ ಮೂರನೇ ಸುತ್ತಿನ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದ್ದಾರೆ.
ಇದೇ ಮೊದಲ ಬಾರಿಗೆ ತವರಿನಲ್ಲಿ ಥಾಮಸ್ ಕಪ್ ಮತ್ತು ಉಬರ್ ಕಪ್ ಫೈನಲ್ಸ್ ಕದನವನ್ನು ಆಯೋಜಿಸುವ ಭಾಗ್ಯವನ್ನು ತನ್ನದಾಗಿಸಿಕೊಂಡಿದ್ದ ಭಾರತದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಪುರುಷರ ತಂಡ ನೀರಸ ಪ್ರದರ್ಶನ ನೀಡಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವ ಅವಕಾಶವನ್ನು ಹಾಳುಮಾಡಿಕೊಂಡಿತು.
ಆದರೆ, ಸೈನಾ ನೆಹ್ವಾಲ್ ನೇತೃತ್ವದ ಭಾರತದ ಮಹಿಳೆಯರ ತಂಡ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು ಸ್ವಲ್ಪ ಸಮಾಧಾನ ತರುವ ವಿಷಯವಾಗಿದೆ.
ಭಾರತದ ಪುರುಷರ ತಂಡ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ಮಲೇಷಿಯಾ ವಿರುದ್ಧ 1-4ರ ಅಂತರದಲ್ಲಿ ಆಘಾತಕಾರಿ ಸೋಲನುಭವಿಸಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-3ರಿಂದ ಸೋಲುವುದರೊಂದಿಗೆ ನಾಕೌಟ್ ಸುತ್ತಿನ ಆಸೆ ಕೈಬಿಡಬೇಕಾಯಿತು.
ಭಾರತದ ಪರ ನಾಯಕ ಪರುಪಳ್ಳಿ ಕಶ್ಯಪ್ ಮತ್ತು ಆರ್‌ಎಂವಿ ಗುರುಸಾಯಿದತ್ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಗೆಲವು ಸಾಧಿಸಿದರೂ, ಕೆ. ಶ್ರೀಕಾಂತ್ ಸೋಲಿನ ಕಹಿ ಅನುಭವಿಸಿದ್ದು ತವರಿನ ಪಾಲಿಗೆ ದೊಡ್ಡ ಹಿನ್ನಡೆಯಾಯಿತು.
ಇನ್ನು ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಹಾಗೂ ಪ್ರಣವ್ ಜೆರ್ರಿ ಛೋಪ್ರಾ ಮತ್ತು ಅಕ್ಷಯ್ ದಿವಾಲ್ಕರ್ ಅವರು ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಮತ್ತೊಂದೆಡೆ ಜರ್ಮನಿ ತಂಡದ ಸ್ಥಿತಿ ಕೂಡ ಭಾರತಕ್ಕಿಂತ ಭಿನ್ನವಾಗಿಲ್ಲ. ಕೊರಿಯಾ ವಿರುದ್ಧ ಜರ್ಮನಿ ಸೋಲುಂಡರೂ ಉತ್ತಮ ಪ್ರದರ್ಶನ ನೀಡಿದೆ. ಜರ್ಮನಿ ತಂಡದಲ್ಲಿ ನಾಯಕ ಮಾಕ್ ಜ್ವೆಬ್ಲರ್ ಮತ್ತು ಡೀಟರ್ ಡೋಮ್ಕ್ ಇಬ್ಬರು ಪ್ರಮುಖ ಸಿಂಗಲ್ಸ್ ಆಟಗಾರರಾಗಿದ್ದಾರೆ. ಅಲ್ಲದೆ, ಲೂಕಾಸ್ ಶೆಮಿಡ್ ಹಾಗೂ ಡಬಲ್ಸ್ ಪ್ರತಿಭೆಗಳಾದ ಮೈಕೆಲ್ ಫಚಸ್ ಮತ್ತು ಜೊಹಾನ್ನೆಸ್ ಶೊಯೆಟ್ಲರ್ ಹಾಗೂ ಪೀಟರ್ ಕಾಸ್‌ಬಯೂರ್ ಮತ್ತು ಜೋಶೆ ಜುರ್ವೊನೆ ಉತ್ತಮ ಪ್ರದರ್ಶನ ನೀಡಬಲ್ಲವರಾಗಿದ್ದಾರೆ.
ಭಾರತ ತಂಡ ಥಾಮಸ್ ಕಪ್‌ನಲ್ಲಿ ಒಟ್ಟು 8 ಬಾರಿ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ಅಂದರೆ ಕೌಲಾಲಂಪುರದಲ್ಲಿ ನಡೆದ 2000ನೇ ಸಾಲಿನ ಟೂರ್ನಿಯಲ್ಲಿ ಪುಲ್ಲೇಲ ಗೋಪಿಚಂದ್ ಅವರು ಭಾರತವನ್ನು ಫೈನಲ್ ಹಂತಕ್ಕೆ ಕೊಂಡೊಯ್ದಿದ್ದರು. ಇನ್ನು 2006ರಲ್ಲಿ ಕ್ವಾರ್ಟರ್‌ಫೈನಲ್ ಹಾಗೂ 2010ರಲ್ಲಿ ಅಂತಿಮ ಎಂಟರಘಟ್ಟ ತಲುಪುವಲ್ಲಿ ಯಶಸ್ವಿಯಾಗಿತ್ತು. ಕಳೆದ ಆವೃತ್ತಿಯಲ್ಲಿ ಮಾತ್ರ ಭಾರತ ಅರ್ಹತೆ ಪಡೆಯಲು ವಿಫಲವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.