ಕ್ರೀಡೆ

130 ಎಸೆತಗಳಲ್ಲಿ 341 ರನ್..!

130 ಎಸೆತಗಳಲ್ಲಿ 341 ರನ್..!
Published On :

ಸಿಡ್ನಿ: ದೇಶೀ ಕ್ರಿಕೆಟ್‌ನಲ್ಲಿ ಜೇಮ್ಸ್ ಟಲ್ ಎಂಬ ಆಟಗಾರ ಕೇವಲ 130 ಎಸೆತಗಳಲ್ಲಿ 341 ರನ್‌ಗಳನ್ನು ಸಿಡಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾನೆ.

'ದಾಖಲೆಗಳು ಇರುವುದೇ ಮುರಿಯಲು' ಎಂಬ ಕ್ರಿಕೆಟ್ ಅತಿ ಜನಪ್ರಿಯ ಮಾತು ಮತ್ತೊಮ್ಮೆ ಸಾಬೀತಾಗಿದ್ದು, ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಇಂದು ಮತ್ತೊಂದು ಸಾರ್ವಕಾಲಿಕ ಶ್ರೇಷ್ಠ ದಾಖಲೆ ನಿರ್ಮಾಣವಾಗಿದೆ. ಕ್ವೀನ್ಸ್‌ಲ್ಯಾಂಡ್ ವೇರ್‌ಹೌಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ರಿಸ್ಬೇನ್ ಮೂಲದ ಕ್ರಿಕೆಟಿಗ ಜೇಮ್ಸ್ ಟಲ್ ಕೇವಲ 130 ಎಸೆತಗಳಲ್ಲಿ 341 ರನ್‌ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಅನಾರೋಗ್ಯದಿಂದ ಬಳಲುತಿದ್ದ ಟಲ್ ಇಂದಿನ ಪಂದ್ಯದಲ್ಲಿ ಪಾಲ್ಗೊಳ್ಳುವುದೇ ಅನುಮಾನವಿತ್ತು. ಪಂದ್ಯಕ್ಕೂ ಮುನ್ನ ಟುಲ್‌ರೊಂದಿಗೆ ಚರ್ಚೆ ನಡೆಸಿದ್ದ ತಂಡದ ನಾಯಕ ಆರಂಭಿಕರಾಗಿ ಕಣಕ್ಕಿಳಿಯುವಂತೆ ಮನವೊಲಿಸಿದ್ದರು. ನಾಯಕನ ಒತ್ತಾಯದ ಮೇರೆಗೆ ಬ್ಯಾಟಿಂಗ್‌ಗೆ ಇಳಿದ ಟಲ್ ತಮ್ಮ ಅನಾರೋಗ್ಯವನ್ನೇ ಮರೆತು, ಎದುರಾಳಿ ಬೌಲರ್‌ಗಳನ್ನು ಚೆಂಡಾಡಿದ್ದಾರೆ. ಒಟ್ಟು 130 ಎಸೆತಗಳನ್ನು ಎದುರಿಸಿದ ಟಲ್ ಒಟ್ಟು 25 ಸಿಕ್ಸರ್ ಮತ್ತು 32 ಬೌಂಡರಿಗಳನ್ನು ಸಿಡಿಸಿದರು.

ಪಂದ್ಯದ ಬಳಿಕ ಮಾತನಾಡಿದ ಟಲ್, 'ನನಗೆ ಕೊಂಚ ಅನಾರೋಗ್ಯವಿದ್ದು, ಪಂದ್ಯದಲ್ಲಿ ಪಾಲ್ಗೊಳ್ಳುವುದೇ ಅನುಮಾನವಿತ್ತು. ಆದರೆ ನಾಯಕನ ಒತ್ತಾಯದ ಮೇರೆಗೆ ಕಣಕ್ಕಿಳಿದಿದ್ದೆ. ಪಂದ್ಯದಲ್ಲಿ ತ್ರಿಶತಕ ಗಳಿಸಿದ್ದು ಕೊಂಚ ಸಂತೋಷ ಉಂಟುಮಾಡಿದೆಯಾದರೂ, ನಾನು ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ 400 ಗಡಿ ದಾಟಬಹುದಿತ್ತು. ಪಂದ್ಯದ 25ನೇ ಓವರ್‌ನಲ್ಲಿಯೇ ನನ್ನ ವೈಯುಕ್ತಿಕ ಮೊತ್ತ 235 ರನ್‌ಗಳಾಗಿತ್ತು. ಇದೇ ರೀತಿ ನಾನು ರನ್ ರೇಟ್ ಕಾಯ್ದುಕೊಂಡಿದ್ದರೆ ಸುಲಭವಾಗಿ 400ರ ಗಡಿ ತಲುಪಬಹುದಿತ್ತು. ಆದರೆ ಎದುರಾಳಿ ತಂಡದ ನಾಯಕ ಪದೇ ಪದೇ ಕ್ಷೇತ್ರ ರಕ್ಷಣೆಯನ್ನು ಬದಲಿಸುತ್ತಿದ್ದರಿಂದ ಪಂದ್ಯ ವಿಳಂಬವಾಯಿತು. ಅಲ್ಲದೆ ಪ್ರತಿ ಬಾರಿ ಸಿಕ್ಸರ್ ಸಿಡಿಸಿದಾಗಲೂ ಚೆಂಡನ್ನು ಹುಡುಕಿ ತರುವುದು ವಿಳಂಬವಾಗುತ್ತಿತ್ತು. ಹೀಗಾಗಿ ಪಂದ್ಯ ಕೇವಲ 44 ಓಪರ್‌ಗಳಿಗೆ ಸೀಮಿತವಾಯಿತು' ಎಂದು ಟಲ್ ಅಭಿಪ್ರಾಯಪಟ್ಟಿದ್ದಾರೆ.

ಕಾರಣಾಂತರಗಳಿಂದ ಕ್ರಿಕೆಟ್‌ನಿಂದ ಐದು ವರ್ಷ ದೂರವಿದ್ದ ಟಲ್, ಕಳೆದ ವರ್ಷವಷ್ಟೇ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಮರಳಿದ್ದರು. ವಿರಾಮಕ್ಕೂ ಮೊದಲು ಕೌಂಟಿ ಕ್ರಿಕೆಟ್‌ನಲ್ಲಿ 45ರ ಆಸುಪಾಸಿನ ಸರಾಸರಿ ಹೊಂದಿದ್ದ ಟಲ್, ಐದು ವರ್ಷಗಳ ವಿರಾಮದ ಬಳಿಕ ತಮ್ಮ ಸರಾಸರಿಯಲ್ಲಿ ಗಣನೀಯ ಬದಲಾವಣೆ ಮಾಡಿಕೊಂಡಿದ್ದಾರೆ. 2014-15ರ ಸಾಲಿನಲ್ಲಿ ಜೇಮ್ಸ್ ಟಲ್ ಅವರ ಸರಾಸರಿ ಬರೋಬ್ಬರಿ 172.5ಕ್ಕೇರಿದೆ. ಇದು ಕೂಡ ಕ್ರಿಕೆಟ್ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಗಳಿಸಿರುವ 219 ರನ್‌ಗಳ ಮೊತ್ತವೇ ಈ ವರೆಗಿನ ದಾಖಲೆಯಾಗಿದ್ದು, 2011 ಡಿಸೆಂಬರ್ 8ರಂದು ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸೆಹ್ವಾಗ್ ಈ ದಾಖಲೆ ನಿರ್ಮಿಸಿದ್ದರು. ಇದಕ್ಕೂ ಮುನ್ನ 2010ರಲ್ಲಿ ಗ್ವಾಲಿಯರ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಸಚಿನ್ ತೆಂಡೂಲ್ಕರ್ ಅವರು ಅಜೇಯ 200 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.