ಮರಿನ್ ಮ್ಯಾಜಿಕ್

ನ್ಯೂಯಾರ್ಕ್: ಋತುವಿನ ಕೊನೆಯ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಯುಎಸ್ ಓಪನ್ ಪಂದ್ಯಾವಳಿ ಹೊಸ ಟೆನಿಸ್ ತಾರೆಯನ್ನು ಹುಟ್ಟು ಹಾಕಿದೆ. ಈ ಮೂಲಕ ಜಾಗತಿಕ ಟೆನಿಸ್ಗೆ ಹೊಸ ಚಾಂಪಿಯನ್ ಸೇರ್ಪಡೆಯಾಗಿದ್ದಾರೆ.
ಸೋಮವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಕ್ರೊವೇಷಿಯಾ ಆಗಾರ ಮರಿನ್ ಸಿಲಿಕ್, ತಮ್ಮ ಎದುರಾಳಿ ಜಪಾನ್ನ ಕೀ ನಿಶಿಕೋರಿ ಅವರನ್ನು 6-3, 6-3, 6-3 ನೇರ ಸೆಟ್ಗಳಿಂದ ಮಣಿಸುವ ಮೂಲಕ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಒಂದೆಡೆ ಮಾಜಿ ಒಂಬರ್ ಒನ್ ಆಟಗಾರ ರೋಜರ್ ಫೆಡರರ್ ಅವರನ್ನು ಉಪಾಂತ್ಯದಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಮರಿನ್ ಸಿಲಿಕ್ ಪ್ರವೇಶಿಸಿದ್ದರೆ, ಮತ್ತೊಂದೆಡೆ ಪ್ರಸಕ್ತ ಅಗ್ರಶ್ರೇಯಾಂಕಿತ ಆಟಗಾರ ನೊವಾಕ್ ಜೊಕೊವಿಚ್ರನ್ನು ಮಣಿಸುವ ಮೂಲಕ ಜಪಾನ್ನ ಕೀ ನಿಶಿಕೋರಿ ತಮ್ಮ ಮೊದಲ ಗರಿಗಾಗಿ ಗುದ್ದಾಟಕ್ಕೆ ಸಜ್ಜಾಗಿದ್ದರು. 1966ರ ನಂತರ ಮೊದಲ ಬಾರಿಗೆ ಯುಎಸ್ ಓಪನ್ ಟೂರ್ನಿಯಲ್ಲಿ ಅಗ್ರ ಎರಡು ಶ್ರೇಯಾಂಕಿತ ಆಟಗಾರರು ಉಪಾಂತ್ಯದಲ್ಲೇ ನಿರ್ಗಮಿಸಿದ್ದರು. ಹಾಗಾಗಿ ಪ್ರಶಸ್ತಿ ಕದನಕ್ಕೆ ನಿಂತಿದ್ದ ಹೊಸ ಪ್ರತಿಭೆಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು.
ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಲು ಕಣಕ್ಕಿಳಿದಿದ್ದ ಇಬ್ಬರೂ ಆಟಗಾರರು ಹೊಸ ಮುಖಗಳು. ಅಲ್ಲದೆ ಅಗ್ರ ಇಬ್ಬರು ಶ್ರೇಯಾಂಕಿತರ ವಿರುದ್ಧ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಿದ್ದರು. ಹಾಗಾಗಿ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಇಬ್ಬರೂ ಆಟಗಾರರು ಟೂರ್ನಿಯಲ್ಲಿ ಘಟಾನುಘಟಿ ಆಟಗಾರರ ಬೆವರು ಇಳಿಸಿದ್ದರು. ಅಂತೆಯೇ ಇವರ ನಡುವಿನ ಕಾದಾಟಕ್ಕೆ ಟೆನಿಸ್ ಪ್ರೇಮಿಗಳು ಕಾದು ಕುಳಿತಿದ್ದರು. ಇದುವರೆಗೂ ಜೊಕೊವಿಚ್, ರೋಜರ್ ಫೆಡರರ್, ಆಂಡಿ ಮರ್ರೆ, ರಾಫೆಲ್ ನಡಾಲ್ರಂತಹ ಖ್ಯಾತ ಆಟಗಾರರ ಸೆಣಸಾಟವನ್ನು ನೋಡಿದ್ದ ಟೆನಿಸ್ ಅಭಿಮಾನಿಗಳಿಗೆ, ಈ ಪಂದ್ಯ ವಿಭಿನ್ನವಾಗಿಯೇ ಕಾಣಿಸಿತ್ತು. ಕಾರಣ ಉಭಯ ಆಟಗಾರರು ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿಯಬೇಕೆಂಬ ಬಯಕೆ ಹಾಗೂ ಆ ಒತ್ತಡದಿಂದಲೇ ಕಣಕ್ಕಿಳಿದಿದ್ದರು. ಅಲ್ಲದೆ ಉಭಯ ಆಟಗಾರರ ಮೇಲೆ ಒಂದೇ ರೀತಿ ಒತ್ತಡ ಇತ್ತು. ಸುಮಾರು 2 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ತನ್ನ ಪ್ರಭುತ್ವ ಸಾಧಿಸಲು ಯಶಸ್ವಿಯಾಗಿದ್ದು ಮಾತ್ರ ಮರಿನ್ ಸಿಲಿಕ್. ಆರಂಭಿಕ ಸೆಟ್ನಿಂದಲೇ ನಿಶಿಕೋರಿ ವಿರುದ್ಧ ನಿಯಂತ್ರಣ ಸಾಧಿಸಿದ ಸಿಲಿಕ್, ಯಾವುದೇ ಹಂತದಲ್ಲೂ ಆತನಿಗೆ ಲಯ ಕಂಡುಕೊಳ್ಳಲು ಅವಕಾಶ ನೀಡಲಿಲ್ಲ. ಪ್ರತಿ ಸೆಟ್ನಲ್ಲೂ 6-3 ಅಂತರದ ಮುನ್ನಡೆ ಸಾಧಿಸಿದ ಮರಿನ್ ಪ್ರಶಸ್ತಿಯನ್ನು ಅರ್ಹ ರೀತಿಯಲ್ಲೇ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


