ಇಂಚಾನ್ ಏಷ್ಯನ್ ಗೇಮ್ಸ್: ಹೊರಗುಳಿದ ಜ್ವಾಲಾ

ನವದೆಹಲಿ: ಭಾರತದ ಅಗ್ರಮಾನ್ಯ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಬಲ ಮಂಡಿ ನೋವಿನಿಂದ ಬಳುತ್ತಿದ್ದು, ಇದೇ ತಿಂಗಳು ದಕ್ಷಿಣ ಕೊರಿಯಾ ಇಂಚಾನ್ನಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಜ್ವಾಲಾರ ಈ ನಿರ್ಧಾರದಿಂದಾಗಿ ಭಾರತಕ್ಕೆ ಭಾರಿ ನಷ್ಟವಾಗಿದೆ.
ವಿಶ್ವ ಚಾಂಪಿನಯನ್ಶಿಪ್ನ ಡಬಲ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಜ್ವಾಲಾ, ಅಶ್ವಿನಿ ಪೊನ್ನಪ್ಪ ಅವರ ಜೊತೆಗೂಡಿ ಉಬರ್ ಕಪ್ನಲ್ಲಿ ಸಹ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಆದರೀಗ ಮಂಡಿ ಉಳುಕಿರುವ ಪರಿಣಾಮ ಸಾಕಷ್ಟು ನೋವು ಉಂಟಾಗಿದ್ದು, ವೈದ್ಯರನ್ನು ಸಂಪರ್ಕಿಸಿದಾಗ ಎರಡು ವಾರಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ಆಕೆಗೆ ಸಲಹೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ಗೆ ಸಿದ್ಧತೆ ಆರಂಭಿಸಿದಾಗ ಮಂಡಿಯಲ್ಲಿ ನೋವು ಕಾಣಿಸಿಕೊಂಡಿದ್ದು, ಕೋಚ್ ಅವರಿಗೆ ಈ ವಿಷಯ ತಿಳಿಸಿದ್ದೇನೆ. ಆದರೆ, ನೋವು ಹೆಚ್ಚಾಗಿ ಸ್ವಲ್ಪ ಊತ ಬಂದ ಕಾರಣ ಇಬ್ಬರು ವೈದ್ಯರನ್ನು ಸಂಪರ್ಕಿಸಿ ಈ ಬಗ್ಗೆ ಪರೀಕ್ಷೆಗೆ ಒಳಗಾದ ನಂತರ ಕನಿಷ್ಠ 10-12 ದಿನ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ. ಹಾಗಾಗಿ ಏಷ್ಯನ್ ಗೇಮ್ಸ್ನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ ಎಂದು ಜ್ವಾಲಾ ಪ್ರತಿಕ್ರಿಯಿಸಿದ್ದಾರೆ.
ಜೀವನದಲ್ಲಿ ಎಂದಿಗೂ ಸಹ ಗಾಯದ ಸಮಸ್ಯೆಯಿಂದಾಗಿ ಟೂರ್ನಿಗಳಿಂದ ಹೊರಗುಳಿದಿರಲಿಲ್ಲ. ಆದರೆ, ಈ ಬಾರಿ ಇದೇ ಕಾರಣಕ್ಕೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸದಿರುವುದಕ್ಕೆ ಬೇಸರವಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದರೂ ಸಹ ಮಂಡಿ ಮೇಲೆ ಹೆಚ್ಚಿನ ಭಾರ ಹಾಕುವುದು ಸರಿಯಲ್ಲ. ಮೇಲಾಗಿ ವಯಸ್ಸು ಕೂಡ ನಮ್ಮ ಪರವಾಗಿಲ್ಲ ಎಂದು ಜ್ವಾಲಾ ತಿಳಿಸಿದ್ದಾರೆ.
2010 ಮತ್ತು 2014ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಸಂಪಾದಿಸಿದ್ದ ಜ್ವಾಲಾ ಗುಟ್ಟಾ ಏಷ್ಯನ್ ಗೇಮ್ಸ್ಗೆ ಅಲಭ್ಯರಾಗುತ್ತಿರುವುದು ಭಾರತಕ್ಕೆ ಪದಕ ಗೆಲ್ಲುವ ಉತ್ತಮ ಅವಕಾಶವೊಂದು ಕೈಜಾರಿ ಹೋದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


