

ಮಿಯಾಮಿ (ಅಮೆರಿಕ): ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಜೋಡಿಯಾಗಿದ್ದ ಸಾನಿಯಾ ಮತ್ತು ಹಿಂಗಿಸ್, 7-5, 6-1 ನೇರ ಸೆಟ್‍ಗಳಿಂದ ರಷ್ಯಾದ ಎಕಟೆರಿನಾ ಮಕಾರೊವಾ ಮತ್ತು ಎಲೆನಾ ವೆಸ್ನಿನಾ ಜೋಡಿಯನ್ನು ಸೋಲಿಸಿ ಈ ಸಾಧನೆ ಮಾಡಿದರು. ಭಾರತ-ಸ್ವಿಸ್ ಜೋಡಿಗೆ ಇದು ಸತತ ಎರಡನೇ ಡಬ್ಲ್ಯುಟಿಎ ಪ್ರಶಸ್ತಿಾಗಿದೆ. ಈ ಮುನ್ನ ಇಂಡಿಯಾನ ವೇಲ್ಸ್ ಟೂರ್ನಿಯಲ್ಲಿ ಮೊದಲ ಬಾರಿಗೆ ಜೊತೆಗೂಡಿ ಆಡಿದ್ದ ಅವರು ಜೊಚ್ಚಲ ಪ್ರವೇಶದಲ್ಲಿಯೇ ಪ್ರಶಸ್ತಿ ಸಂಪಾದಿಸಿದ್ದರು. ಈಗ ಎರಡನೇ ಟೂರ್ನಿಯಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಈ ಋತುವಿನಲ್ಲಿ ಅತ್ಯುತ್ತಮ ಜೋಡಿಯಾಗಿ ಶುಭಾರಂಭ ಮಾಡಿದಂತಾಗಿದೆ.
ವಿಶ್ವದ ಎರಡನೇ ಶ್ರೇಯಾಂಕಿತ ಜೋಡಿಯಾದ ಮಕಾರೊವಾ ಮತ್ತು ವೆಸ್ನಿನಾ ಎದುರಿನ ಪೈಪೋಟಿಯಲ್ಲಿ ಸಾನಿಯಾ ಮತ್ತು ಹಿಂಗಿಸ್ ಉತ್ತಮ ಆರಂಭ ಪಡೆಯಲಿಲ್ಲ. ಏಕೆಂದರೆ, ಮೊದಲ ಸೆಟ್‍ನ ಒಂದು ಹಂತದಲ್ಲಿ ಅವರು 2-5ರಿಂದ ಹಿನ್ನಡೆಯಲ್ಲಿದ್ದಾಗ ಸೋಲಿನ ಆತಂಕದಲ್ಲಿದ್ದರು. ಆದರೆ, ನಂತರದ ಹಾದಿಯಲ್ಲಿ ಮೈಕೊಡವಿ ಮೇಲೆದ್ದ ಭಾರತ-ಸ್ವಿಸ್ ಜೋಡಿ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ನಿರಂತರ ಅಂಕಗಳನ್ನು ಕಲೆಹಾಕುವುದರೊಂದಿಗೆ ಮೊದಲ ಸೆಟ್ ವಶಕ್ಕೆ ತೆಗೆದುಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಇದೇ ಸ್ಫೂರ್ತಿಯಲ್ಲಿ ಎರಡನೇ ಸೆಟ್‍ನ ಹೋರಾಟ ಆರಂಭಿಸಿದ ಸಾನಿಯಾ-ಹಿಂಗಿಸ್ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಲ್ಲಲು ರಷ್ಯನ್ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ. ಎದುರಾಳಿ ಜೋಡಿ ತಪ್ಪೆಸಗುವಂತೆ ಮಾಡಿದ ಸಾನಿಯಾ-ಹಿಂಗಿಸ್, ಕೇವಲ ಒಂದು ಗೇಮ್ ಗೆದ್ದುಕೊಳ್ಳಲಷ್ಟೇ ಅವಕಾಶ ನೀಡಿ ಅಂತಿಮವಾಗಿ 6-1ರಿಂದ ಎರಡನೇ ಸೆಟ್ ಜಯಿಸಿ ಪ್ರಶಸ್ತಿಯ ಮೇಲೆ ಮೊಹರು ಒತ್ತಿದರು.
25ನೇ ಡಬ್ಲ್ಯುಟಿಎ ಪ್ರಶಸ್ತಿ ನಂ.1ನತ್ತ ಸಾನಿಯಾ
ಹಿಂಗಿಸ್ ಜೊತೆಗೂಡಿ ಮಿಯಾಮಿ ಓಪನ್ ಪ್ರಶಸ್ತಿ ಗೆದ್ದಿರುವ ಸಾನಿಯಾ ಮಿರ್ಜಾಗೆ ಇದು ಒಟ್ಟಾರೆ 25ನೇ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ. ಈ ಸಾಧನೆಯೊಂದಿಗೆ ಭಾರತೀಯ ಆಟಗಾರ್ತಿ ವಿಶ್ವ ಡಬಲ್ಸ್ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನದ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಮಿಯಾಮಿ ಓಪನ್ ಪ್ರಶಸ್ತಿಯೊಂದಿಗೆ ಸಾನಿಯಾ ಒಟ್ಟು 1000 ರ್ಯಾಂಕಿಂಗ್ ಅಂಕಗಳನ್ನು ಪಡೆದರು. ಆ ಮೂಲಕ ಅವರು ತಮ್ಮ ಅಂಕ ಗಳಿಕೆಯನ್ನು 7495ಕ್ಕೆ ಹೆಚ್ಚಿಸಿಕೊಂಡರು. ಸದ್ಯ ಸಾನಿಯಾ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ವಿಶ್ವದ ನಂಬರ್ ಒನ್ ಮತ್ತು ಎರಡನೇ ಸ್ಥಾನಗಳಲ್ಲಿರುವ ಇಟಲಿಯ ಆಟಗಾರ್ತಿಯರಾದ ಸಾರಾ ಎರಾನಿ ಮತ್ತು ರಾಬರ್ಟಾ ವಿನ್ಸಿ ತಲಾ 7640 ಅಂಕಗಳಿಸಿದ್ದಾರೆ ಸಾನಿಯಾ ಮತ್ತು ಈ ಆಟಗಾರ್ತಿಯರ ನಡುವೆ ಕೇವಲ 145 ಅಂಕಗಳ ಅಂತರವಿದ್ದು, ಮುಂದಿನ ಟೂರ್ನಿಯಲ್ಲಿ ಹೈದರಾಬಾದ್ ಆಟಗಾರ್ತಿಯು ಉತ್ತಮ ಪ್ರದರ್ಶನ ಮುಂದುವರಿಸಿದರೆ, ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಡುವ ಎಲ್ಲ ಅವಕಾಶಗಳಿವೆ.