

ಮುಂಬೈ: ಅಗ್ರ ಕ್ರಮಾಂಕದ ಆಟಗಾರರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 18 ರನ್‍ಗಳ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್, 20 ಓವರ್ ಗಳಲ್ಲಿ 5 ವಿಕೆಟ್‍ಗೆ 177 ರನ್ ಗಳಿಸಿತ್ತು. ಈ ಮೊತ್ತವನ್ನು ಮೆಟ್ಟಲು ಕ್ರೀಸ್‍ಗೆ ಇಳಿದಿದ್ದ ಮುಂಬೈ ಇಂಡಿಯನ್ಸ್ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಆರಂಭಿಕರಾದ ಮುರಳಿ ವಿಜಯ್ ಹಾಗೂ ವೀರೇಂದ್ರ ಸೆಹ್ವಾಗ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ 6.4 ಓವರ್‍ಗಳಲ್ಲಿ 60 ರನ್ ಪೇರಿಸಿದ ಈ ಜೋಡಿ, ಇನಿಂಗ್ಸ್‍ಗೆ ಭದ್ರ ಅಡಿಪಾಯ ಹಾಕಿತು. 7ನೇ ಓವರ್‍ನಲ್ಲಿ ಸೆಹ್ವಾಗ್ ವಿಕೆಟ್ ಪತನಗೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಆಗ, ಕ್ರೀಸ್‍ಗೆ ಕಾಲಿಟ್ಟ ಮಿಲ್ಲರ್ ಹೆಚ್ಚು ಆಡಲಿಲ್ಲ. ಮುರಳಿ ಸಹ ವೈಯಕ್ತಿಕ 35 ರನ್ ಕಾಣಿಕೆ ನೀಡಿ ಹೊರನಡೆದರು. ಆನಂತರ ಡೇವಿಡ್ ಮಿಲ್ಲರ್ ಹಾಗೂ ನಾಯಕ ಜಾರ್ಜ್ ಬೇಯ್ಲಿ ಜೋಡಿ 4ನೇ ವಿಕೆಟ್‍ಗೆ 46 ರನ್ ಸೇರಿಸಿತು.
ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೇಯ್ಲಿ 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಒಳಗೊಂಡ 61 ರನ್ ಗಳಿಸಿ, ತಂಡದ ಮೊತ್ತ 177 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳಪೆ ಆರಂಭ: ಪಂಜಾಬ್ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಮುಂಬೈ ಆರಂಭದಿಂದಲೇ ತತ್ತರಿಸಿತು. ಮುಂಬೈ ತಂಡದ ರನ್ ಖಾತೆ ತೆರೆಯುವ ಮುನ್ನವೇ ಆರಂಭಿಕ ರೋಹಿತ್ ಶರ್ಮಾ ಅವರನ್ನು ಸಂದೀಪ್ ಶರ್ಮಾ ಪೆವಿಲಿಯನ್‍ಗೆ ಅಟ್ಟಿದರು. ಇದಾದ ನಂತರ ಅನುರೀತ್ ಸಿಂಗ್, ಮೂರನೇ ಕ್ರಮಾಂಕದ ಆದಿತ್ಯ ತಾರೆಯವರ ವಿಕೆಟ್ ಪಡೆದರು. ಆನಂತರ, ಮಿಚೆಲ್ ಜಾನ್ಸನ್ ಮತ್ತೊಬ್ಬ ಆರಂಭಿಕ ಆರೋನ್ ಫಿಂಚ್ ಹಾಗೂ 4ನೇ ಕ್ರಮಾಂಕದ ರಾಯುಡು ವಿಕೆಟ್ ಉರುಳಿಸಿದರು.
ಅಲ್ಲಿಗೆ, ಮುಂಬೈ ತಂಡದ 25 ರನ್ ಮೊತ್ತಕ್ಕೆ 4 ವಿಕೆಟ್‍ಗಳು ಉರುಳಿದ್ದವು. ಕೋರಿ ಆ್ಯಂಡರ್ಸನ್ ಸಹ ಪಟೇಲ್ ಬೌಲಿಂಗ್‍ಗೆ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಆಮೇಲೆ, ಪೆವಿಲಿಯನ್ ಪರೇಡ್ ನಡೆಸಿದ್ದು ಕೀರನ್ ಪೋರ್ಲಾಡ್ ಆದರೆ, 7ನೇ ವಿಕೆಟ್‍ಗೆ ಜೊತೆಯಾದ ಹರ್ಭಜನ್ ಸಿಂಗ್ ಹಾಗೂ ಸುಚಿತ್ ಜೋಡಿ, 6.1 ಓವರ್‍ಗಳಲ್ಲಿ 100 ರನ್‍ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಗೆಲವು ತರಲು ಶ್ರಮಿಸಿತು. ಅಪರೂಪವೆಂಬಂತೆ ಕ್ರೀಸ್‍ನಲ್ಲಿ ಹರ್ಭಜನ್ ಸಿಂಗ್ ಆರ್ಭಟಿಸಿ 5 ಬೌಂಡರಿ, 6 ಸಿಕ್ಸರ್ ಸೇರಿದಂತೆ 64 ರನ್ ಗಳಿಸಿದರು. ಆದರೆ, ಅವರ
ಆರ್ಭಟದ ಹೊರತಾಗಿಯೂ ಕೊನೆಯ ಓವರ್‍ನಲ್ಲಿ ಪಂದ್ಯ ಗೆಲ್ಲಲು 30 ರನ್ ಪೇರಿಸುವ ಒತ್ತಡಕ್ಕೆ ಮುಂಬೈ ಸಿಲುಕಿತ್ತು. ಅಂತಿಮ ಓವರ್‍ನಲ್ಲಿ ಹರ್ಭಜನ್ ಔಟಾದರು.
ಅಂತಿಮವಾಗಿ, ಮುಂಬೈ ತಂಡ 159 ರನ್ ಮಾತ್ರ ಗಳಿಸಲು ಶಕ್ತವಾಯಿತು. ಈ ಗೆಲವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಉತ್ಸಾಹ ತುಂಬಿದೆ. ಶುಕ್ರವಾರ ನಡೆದಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸೋತಿದ್ದ ಪಂಜಾಬ್, ಈ ಗೆಲವಿನ ಮೂಲಕ ಮೊದಲ ಜಯ ದಾಖಲಿಸಿದೆ. ಆದರೆ, ಮುಂಬೈ ತಂಡಕ್ಕೆ ಈ ಪಂದ್ಯದ ಫಲಿತಾಂಶ ತೀವ್ರ ಮುಜುಗರ ಉಂಟು ಮಾಡಿದೆ. ಈ ಬಾರಿಯ ಐಪಿಲ್ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತಿದ್ದ ಮುಂಬೈ, ತವರಿನ ಅಂಗಳದಲ್ಲೇ ಮತ್ತೊಂದು ಸೋಲು ಕಂಡಿದೆ.