

ನವದೆಹಲಿ: ವಿವಾದದಿಂದ ಕೂಡಿರುವ ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ತನ್ನೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಮಾತ್ರ ಮುಂದಿನ ವರ್ಷ ಮಾರ್ಚ್‍ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಆತಿಥ್ಯವನ್ನು ವಹಿಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ದೆಹಲಿ ಹೈಕೋರ್ಟ್ ಡಿಡಿಸಿಎಗೆ ಎಚ್ಚರಿಕೆ ನೀಡಿದೆ.
ಶುಕ್ರವಾರ ಟಿ20 ವಿಶ್ವಕಪ್ ಪಂದ್ಯಗಳ ಆಯೋಜನೆಗೆ ಅನುಮತಿಗಾಗಿ ಡಿಡಿಸಿಎ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ಡಿ ಅಹ್ಮದ್ ಮತ್ತು ಸಂಜೀವ್ ಸಖ್ ದೇವ್ ಅವರ ಪೀಠ, ಈ ತೀರ್ಪು ನೀಡಿದೆ. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಆಯೋಜನೆಗೆ ಅನುಮತಿ ನೀಡುವಾಗಲೇ ಹೈಕೋರ್ಟ್, ಭವಿಷ್ಯದಲ್ಲಿ ವಿವಾದಗಳನ್ನು ಬಗೆರಿಸಿಕೊಂಡ ನಂತರವಷ್ಟೇ ಆತಿಥ್ಯ ವಹಿಸಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ತಿಳಿಸಿತ್ತು.