ತಂಡಕ್ಕೆ ಮರಳಿದ ಯುವಿ

ಅಂತೂ ನಿರೀಕ್ಷೆಗಳು ಮುಗಿದಿವೆ. ಅಂದುಕೊಂಡಂತೆ ಸ್ಫೋಟಕ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪುನಃ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
Updated on: 

ಅಂತೂ ನಿರೀಕ್ಷೆಗಳು ಮುಗಿದಿವೆ. ಅಂದುಕೊಂಡಂತೆ ಸ್ಫೋಟಕ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಪುನಃ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.

2011ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಯುವರಾಜ್ ಸಿಂಗ್ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅವರು ಫಾರ್ಮ್ ಕಳೆದುಕೊಂಡಿದ್ದರಿಂದ ಟೀಂ ಇಂಡಿಯಾ ತಂಡದಿಂದ ದೂರ ಉಳಿಯಬೇಕಾಯಿತು. ಎಷ್ಟೇ ಪ್ರಯತ್ನಿಸಿದ್ದರು ತಂಡವನ್ನು ಸೇರಲು ಸಾಧ್ಯವಾಗಿರಲಿಲ್ಲ.

2013ರ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ನಡೆದ ಒಂದು ಟ್ವೆಂಟಿ–20 ಹಾಗೂ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ 15 ಆಟಗಾರರ ತಂಡದಲ್ಲಿ ಯುವರಾಜ್ ಸಿಂಗ್ 9 ತಿಂಗಳ ಬಳಿಕ ತಂಡಕ್ಕೆ ಮರಳಿದ್ದರು. ಜನವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಆಡಿದ್ದರು. ಆ ಬಳಿಕ ಕಳಪೆ ಫಾರ್ಮ್‌ ಕಾರಣ ಸ್ಥಾನ ಕಳೆದುಕೊಂಡಿದ್ದರು.

ಇದೀಗ ದೇಶಿಯ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವರಾಜ್ ಸಿಂಗ್ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ಟೂರ್ನಿಯ ತಂಡಕ್ಕೆ ಯುವಿ ಮತ್ತು ಆಶಿಶ್ ನೆಹ್ರಾ ಅವರಿಗೆ ಸ್ಥಾನ ಸಿಕ್ಕಿದೆ. ಎರಡೂ ತಂಡಗಳಲ್ಲಿಯೂ 16 ಆಟಗಾರರು ಇದ್ದಾರೆ. ಅನುಭವಿ ಮತ್ತು ಯುವ ಆಟಗಾರರಿಗೆ ಈ ಬಾರಿ ಮಣೆ ಹಾಕಲಾಗಿದೆ. ಎರಡೂ ತಂಡಗಳನ್ನು ಮಹೇಂದ್ರಸಿಂಗ್ ದೋನಿ ಮುನ್ನಡೆಸಲಿದ್ದಾರೆ.

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಯುವಿ ಆಯ್ಕೆಯಿಂದ ತಂಡದ ಬಲ ಹೆಚ್ಚಿದೆ ಎಂದ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ ಹೇಳಿದ್ದಾರೆ.

ಯುವಿಗೆ ಹ್ಯಾಜೆಲ್ ಕೀಚ್ ಅದೃಷ್ಟ ದೇವತೆಯಾಗ್ತಾಳಾ
ಭಾರತೀಯ ಕ್ರಿಕೆಟ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ಗಳಲ್ಲಿ ಒಬ್ಬರೆನಿಸಿದ್ದ ಯುವರಾಜ್ ಸಿಂಗ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಂಡೊನೇಷ್ಯಾದ ಬಾಲಿಯಲ್ಲಿ ರೊಮ್ಯಾಂಟಿಕ್ ಆಗಿ ಗೆಳತಿ, ನಟಿ ಹ್ಯಾಜೆಲ್ ಕೀಚ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಮೂರು ತಿಂಗಳಿಂದ ಮಾಜಿ ರೂಪದರ್ಶಿ, ನಟಿ ಹ್ಯಾಜೆಲ್ ಕೀಚ್ ಜತೆಗೆ ಡೇಟೀಂಗ್ ನಡೆಸುತ್ತಿದ್ದರು. ಮಾಧ್ಯಮದವರಿಂದ ಕದ್ದು ಮುಚ್ಚಿ ಲವಿ ಡವಿ ನಡೆಸುತ್ತಿದ್ದ ಯುವಿ ನವೆಂಬರ್ 13ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, 2016ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸನ್ನದ್ಧರಾಗಿದ್ದಾರೆ.

ನಿಶ್ಚಿತಾರ್ಥದ ವೇಳೆ ಹ್ಯಾಜೆಲ್ ಜತೆಗಿನ ಮಗನ ಮದುವೆ ಆತನ ಭವಿಷ್ಯವನ್ನು ಬದಲಿಸಿದೆ. ಆತ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲಿದ್ದಾರೆ ಎಂದು ಯುವಿ ತಂದೆ ಯೋಗರಾಜ್ ಸಿಂಗ್ ಆಶಾವಾದ ವ್ಯಕ್ತಪಡಿಸಿದ್ದು ಅದರಂತೆ ಇದೀಗ ಯುವಿ ಟೀಂ ಇಂಡಿಯಾಗೆ ಆಯ್ಕೆಯಾಗಿರುವುದು ಹ್ಯಾಜೆಲ್ ಕೀಚ್ ನ ಅದೃಷ್ಟದಿಂದ ಎಂದು ಹೇಳಲಾಗಿದೆ.

ಯುವಿ ಕ್ರಿಕೆಟ್ ಬದುಕು

ಏಕದಿನ

2000ದ ಅಕ್ಟೋಬರ್ 3 ರಂದು ಕೀನ್ಯಾ ವಿರುದ್ಧ ನಡೆದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 293 ಪಂದ್ಯಗಳನ್ನು ಆಡಿರುವ ಯುವಿ 36.37 ಸರಾಸರಿಯಲ್ಲಿ 8329 ರನ್ ಗಳಿಸಿದ್ದಾರೆ. 13 ಶತಕ ಹಾಗೂ 51 ದ್ವಿಶತಕ ದಾಖಲಿಸಿದ್ದಾರೆ. ಏಕದಿನ ಪಂದ್ಯದಲ್ಲಿ 139 ರನ್ ಗರಿಷ್ಟ ಮೊತ್ತವಾಗಿದೆ. ಆಫ್ ಸ್ಪಿನ್ನರ್ ಆಗಿರುವ ಯುವಿ 111 ವಿಕೆಟ್ ಪಡೆದಿದ್ದಾರೆ.

ಟೆಸ್ಟ್
2003ರ ಅಕ್ಟೋಬರ್ 16ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 33.92ರ ಸರಾಸರಿಯಲ್ಲಿ 1900 ರನ್ ಗಳಿಸಿದ್ದಾರೆ. 3 ಶತಕ ಹಾಗೂ 11 ದ್ವಿಶತಕ ಅವರ ಖಾತೆಯಲ್ಲಿದೆ.

ಟಿ20
2007ರಲ್ಲಿ ಸ್ಕಾಟ್ಯಾಂಡ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದರು. 40 ಪಂದ್ಯಗಳನ್ನು ಆಡಿರುವ ಯುವಿ 968 ರನ್ ಗಳನ್ನು ಸಿಡಿಸಿದ್ದಾರೆ.

-ವಿಶ್ವನಾಥ್. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com