

ಮುಂಬೈ: ಆರೋಪ ಎದುರಿಸುತ್ತಿರುವ ಕ್ರಿಕೆಟಿಗರಾದ ಅಜಿತ್ ಚಾಂಡೀಲಾ ಹಾಗೂ ಹಿಕೇನ್ ಶಾ ಅವರ ಭವಿಷ್ಯ ಇದೇ ತಿಂಗಳು 24ರಂದು ನಿರ್ಧಾರವಾಗಲಿದೆ.
ಈ ಸಂಬಂಧ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದಲ್ಲಿ ಸಂಸ್ಥೆಯ ಶಿಸ್ತು ಪಾಲನಾ ಸಮಿತಿಯ ತ್ರಿಸದಸ್ಯ ಪೀಠವು ಗುರುವಾರ ಸಭೆ ಸೇರಲಿದೆ ಎಂದು ಐಬಿಎನ್ ಲೈವ್ ವರದಿ ಮಾಡಿದೆ. 2013ರ ಐಪಿಎಲ್ ಟೂರ್ನಿಯ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎಸ್. ಶ್ರೀಶಾಂತ್, ಚಾಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಬಂಧಿತರಾಗಿ ಬಳಿಕ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾಗಿದ್ದಾರೆ. ಇನ್ನು, ಮುಂಬೈ ರಣಜಿ ತಂಡದ ಆಟಗಾರ ಹಿಕೇನ್ ಶಾ ವಿರುದ್ಧ ಇದೇ ವರ್ಷ ಫಿಕ್ಸಿಂಗ್ ಆರೋಪ ಕೇಳಿಬಂದಿವೆ. ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದ ಸಮಿತಿ ಸಭೆಗೆ, ಕ್ರಿಕೆಟಿಗರ ಮೇಲಿನ ಆಜೀವ ನಿಷೇಧದಂಥ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವಿದೆಯಾದರೂ, ಅಂತಿಮ ನಿರ್ಧಾರ ಸಮಿತಿಗೆ ಬಿಟ್ಟಿದೆ.