

ನವದೆಹಲಿ: ಭಾರತದ ಕಳಪೆ ಆಟದ ಪ್ರವೃತ್ತಿಯಿಂದಾಗಿ ಧೋನಿಯ ಜೀವನ ಚರಿತ್ರೆ ಆಧಾರಿತ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯ ನಿರ್ಧಾರವನ್ನು ಚಿತ್ರತಂಡ ರದ್ದು ಮಾಡಿದೆ.
ನೀರಜ್ ಪಾಂಡೆ ನಿರ್ದೇಶನದ ಭಾರತ ತಂಡದ ನಾಯಕ ಎಂ.ಎಸ್.ಧೋನಿ ಅವರ ಜೀವನ ಚರಿತ್ರೆ ಆಧಾರಿತ 'ದ ಅನ್‌ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್‌ನ್ನು ವಿಶ್ವಕಪ್ ಮೊದಲ ಪಂದ್ಯಾವಳಿ ದಿನದಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿತ್ತು. ಆದರೆ ಭಾರತ ತಂಡದ ಆಟಗಾರರು ಕಳಪೆ ಮಟ್ಟದ ಆಟವಾಡುತ್ತಿರುವುದರಿಂದ ಚಿತ್ರತಂಡ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಫೆ.14 ರಂದು ವಿಶ್ವಕಪ್ ಪ್ರಾರಂಭವಾಗುತ್ತಿದ್ದು, ಫೆ.15ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆಲುವಿನ ಬಗ್ಗೆ ಹಲವು ತಜ್ಞರು ಸಂದೇಹವನ್ನು ವ್ಯಕ್ತಪಡಿಸಿರುವುದರಿಂದ ಚಿತ್ರದ ತಂಡ ತಮ್ಮ ನಿರ್ಧಾರದಿಂದ ಹೊರಬಂದಿದೆ ಎಂದು ಹೇಳಲಾಗುತ್ತಿದೆ.
ನೀರಜ್ ಪಾಂಡೆ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಧೋನಿ ಪಾತ್ರವನ್ನು ನಟ ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು ಧೋನಿ ಸಹ ಮಾಲೀಕತ್ವದ ರಿತಿ ಸ್ಫೋರ್ಟ್ಸ್ ಸಮೂಹದ ಭಾಗವಾಗಿರುವ ಇನ್ಸ್ ಪೈಯರ್ಡ್ ಎಂಟರ್‌ಟೇನ್‌ಮೆಂಟ್ ನಿರ್ಮಿಸಲಿದೆ. ಈ ಚಿತ್ರ ಧೋನಿ ರಾಂಚಿಯಿಂದ ಭಾರತ ಕ್ರಿಕೆಟ್ ತಂಡದ ನಾಯಕನಾದ ಹಾದಿಯನ್ನು ಚಿತ್ರಿಸಲಿದೆ. ಇನ್ನು ಚಿತ್ರದಲ್ಲಿ ಧೋನಿ ಖಾಸಗಿ ಜೀವನ ಅಂಶವೂ ಮೂಡಿಬರಲಿದ್ದು, ಖ್ಯಾತ ನಟಿ ದೀಪಿಕಾ ಪಡುಕೋಣೆ ಅಥವಾ ಶ್ರದ್ಧಾ ಕಪೂರ್ ಧೋನಿ ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತಿದೆಯಾದರೂ ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.