

ಹರಾರೆ: ಒಂದರ ಹಿಂದೊಂದರಂತೆ ಎರಡು ಪಂದ್ಯಗಳಲ್ಲಿಯೂ ಸೋಲನುಭವಿಸಿ ತಲ್ಲಣಿಸಿರುವ ಆತಿಥೇಯ ಜಿಂಬಾಬ್ವೆ ಇದೀಗ ಮಂಗಳವಾರ ನಡೆಯಲಿರುವ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಭೀತಿಗೆ ಗುರಿಯಾಗಿದೆ. ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೂದಲೆಳೆಯ ಅಂತರದಿಂದ ಗೆಲುವು ತಪ್ಪಿಸಿಕೊಂಡ ಜಿಂಬಾಬ್ವೆ, ಭಾನುವಾರ ನಡೆದ ಎರಡನೇ ನಿರ್ಣಾಯಕ ಪಂದ್ಯದಲ್ಲಿ 62 ರನ್‍ಗಳಿಂದ ಸೋಲನುಭವಿಸಿತ್ತು. ಮೂರನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಆ ಮೂಲಕ ಕ್ಲೀನ್‍ಸ್ವೀಪ್‍ಗಾಗಿ ಹಾತೊರೆಯುತ್ತಿರುವ ಯುವ ಟೀಂ ಇಂಡಿಯಾ ಎದುರು ಅದು ಒತ್ತಡಕ್ಕೆ ಸಿಲುಕಿದೆ.
ಮೊದಲ ಪಂದ್ಯದಲ್ಲಿ ಶತಕದ ಹೋರಾಟ ನಡೆಸಿದ್ದ ನಾಯಕ ಎಲ್ಟೋನ್ ಚಿಗುಂಬುರಾ ಎರಡನೇ ಪಂದ್ಯದಲ್ಲಿ ಕೇವಲ 9 ರನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆಗೊಳಿಸಿದರು. ಆದರೆ ಚಾಮು ಚಿಬಾಬ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಜಿಂಬಾಬ್ವೆಗೆ ಬೌಲಿಂಗ್‍ನಲ್ಲಿಯೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇದು ಆ ತಂಡದ ವೈಪಲ್ಯಕ್ಕೆ ಕಾರಣವಾಗಿದೆ. ಆದಾಗ್ಯೂ ಭಾನುವಾರ ನಡೆದ ಪಂದ್ಯದಲ್ಲಿ ಮಧ್ಯಮ ವೇಗಿ ನೆವಿಲಿ ಮಾಡ್ಜಿವಾ 49ಕ್ಕೆ 4 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಕೊನೆಯ ಪಂದ್ಯದಲ್ಲಾದರೂ, ಸಂಘಟಿತ ಹೋರಾಟದೊಂದಿಗೆ ಕ್ಲೀನ್‍ಸ್ವೀಪ್‍ನಿಂದ ಪಾರಾಗಲು ಜಿಂಬಾಬ್ವೆ ಕಾರ್ಯತಂತ್ರ ರೂಪಿಸಿದೆ. ಇನ್ನು ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವಂತೂ ಮೂರನೇ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಗುರಿ ಇರಿಸಿಕೊಂಡಿದೆ. ಸರಣಿಯ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ನಾಯಕ ಅಜಿಂಕ್ಯ ರಹಾನೆ ಮತ್ತು ಮುರಳಿ ವಿಜಯ್ ಎರಡನೇ ಪಂದ್ಯದಲ್ಲಿ ಮೊದಲ ವಿಕೆಟ್‍ಗೆ 112 ರನ್ ಕಲೆಹಾಕಿ ಗಮನ ಸೆಳೆದರು. ಅಂತೆಯೇ ಆಲ್‍ರೌಂಡ್ ಪ್ರದರ್ಶನ ನೀಡುತ್ತಿರುವ ಸ್ಟುವರ್ಟ್ ಬಿನ್ನಿ ಕೂಡ ಪ್ರವಾಸಿ ತಂಡದ ಬಲವಾಗಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಭಾರತದ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ರಹಾನೆಗೆ ತಲೆನೋವಾಗಿ ಪರಿಣಮಿಸಿದೆ.
ಮುಖ್ಯವಾಗಿ ಕರ್ನಾಟಕದ ರಾಬಿನ್ ಉತ್ತಪ್ಪ ಎರಡೂ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದರೆ, ಕೇದಾರ್ ಜಾಧವ್, ಮನೋಜ್ ತಿವಾರಿಯಂಥವರಿಂದಲೂ ಪರಿಣಾಮಕಾರಿ ಪ್ರದರ್ಶನ ಹೊರಹೊಮ್ಮಿಲ್ಲ. ಏತನ್ಮಧ್ಯೆ ಬೌಲಿಂಗ್‍ನಲ್ಲಿ ಭಾರತ ದಿಟ್ಟ ಪ್ರದರ್ಶನ ನೀಡುತ್ತಾ ಬಂದಿರುವುದು ಸಮಾಧಾನಕರ ಸಂಗತಿ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಕೊನೆಯ ಓವರ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಭುವನೇಶ್ವರ್ ಕುಮಾರ್ ಎರಡನೇ ಪಂದ್ಯದಲ್ಲಂತೂ 4 ವಿಕೆಟ್ ಪಡೆದು ಜಿಂಬಾಬ್ವೆಯ ಬ್ಯಾಟಿಂಗ್‍ಗೆ ಪೆಟ್ಟುನೀಡಿದ್ದರು. ಅವರೊಂದಿಗೆ ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಹರ್ಭಜನ್ ಸಿಂಗ್ ಸಾಥ್ ನೀಡುತ್ತಿರುವುದು ಆತಿಥೇಯರನ್ನು ಕಟ್ಟಿಹಾಕಲು
ನೆರವಾಗುತ್ತಿದೆ. ಅಂದಹಾಗೆ ಮಂಗಳವಾರ ಮುಕ್ತಾಯ ಕಾಣಲಿರುವ ಪಂದ್ಯದೊಂದಿಗೆ ಏಕದಿನ ಸರಣಿಗೂ ತೆರವು ಬೀಳಲಿದ್ದು, ನಂತರ ಜು. 17 ಮತ್ತು ಜು.19ರಂದು ಎರಡು ಟಿ20 ಪಂದ್ಯಗಳು ನಡೆಯಲಿವೆ.