

ಮುಂಬೈ: ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟ ಕಾರಣದಿಂದಾಗಿ ಉದಯೋನ್ಮುಖ ಕತ್ತಿವರಸೆ ಪಟು ಮಹಾರಾಷ್ಟ್ರದ ಹೋಶಿಯಾರ್ ಸಿಂಗ್ ದಾರುಣ ಅಂತ್ಯ ಕಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಥುರಾಗೆ ಸಾಗುತ್ತಿದ್ದ ರೈಲಿನಲ್ಲಿ ಹೋಶಿಯಾರ್ ಸಿಂಗ್ ತಮ್ಮ ಕುಟುಂಬದ ಜೊತೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಇಬ್ಬರು ಪೊಲೀಸರೊಂದಿಗೆ ಜಗಳ ಶುರುವಾಗಿತ್ತು. ಆಗ, ಸಿಟ್ಟಿಗೆದ್ದ ಪೊಲೀಸರು ಹೋಶಿಯಾರ್‍ರನ್ನು ಬೋಗಿಯಿಂದ ಹೊರತಳ್ಳಿದ್ದರಿಂದ ಆತ ಮೃತ ಪಟ್ಟರೆಂದು `ದ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.
ಏನಾಗಿತ್ತು?: ಬುಧವಾರ-ದಂದು 27 ವರ್ಷದ ಹೋಶಿಯಾರ್ ಅವರು ತಮ್ಮ ತಾಯಿ, ಹೆಂಡತಿ ಹಾಗೂ 10 ತಿಂಗಳ ಮಗುವಿನೊಂದಿಗೆ ಕಾಸ್ಗಂಜ್ -ಮಥುರಾ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಅವರ ಹೆಂಡತಿ ಮಹಿಳೆಯರ ಬೋಗಿಯಲ್ಲಿ ಕುಳಿತಿದ್ದರು. ರೈಲು ಹರ್ಯಾಣ ಜಿಲ್ಲೆಯ ಸಿಕಂದ್ರಾರಾವ್ ನಿಲ್ದಾಣಕ್ಕೆ ಹತ್ತಿರವಾಗುತ್ತಿದ್ದಂತೆ ತಮ್ಮ ಹೆಂಡತಿ ಯನ್ನು ಭೇಟಿ ಮಾಡಲು ಹೋಶಿಯಾರ್ ಮಹಿಳೆಯರ ಬೋಗಿಯತ್ತ ತೆರಳಿದರು. ಆಗ, ಮಹಿಳೆಯರ ಬೋಗಿಯ ಬಾಗಿಲಲ್ಲಿ ನಿಂತಿದ್ದ ಇಬ್ಬರು ರೇಲ್ವೆ ಪೊಲೀಸ್ ಪೇದೆಗಳು ಅವರನ್ನು ತಡೆದರು. ತಮ್ಮ ಪತ್ನಿಯನ್ನು ಕಾಣಲು ಹೋಗುತ್ತಿರುವುದಾಗಿ ಹೋಶಿಯಾರ್ ತಿಳಿಸಿದಾಗ, ಬೋಗಿಯ ಒಳಗೆ ಬಿಡಲು ಪೊಲೀಸರು ರೂ. 200 ಲಂಚ ಕೇಳಿದರು. ಈ ಸಂಬಂಧ ಪೊಲೀಸರು ಹಾಗೂ ಹೋಶಿಯಾರ್ ಅವರ ನಡುವೆ ಜಗಳ ಶುರುವಾಗಿ ಕೊನೆಗೆ ಕೊಲೆಯಲ್ಲಿ ಮುಕ್ತಾಯ ಕಂಡಿತು.
ತನಿಖೆಗೆ ಆದೇಶ: ಹೋಶಿಯಾರ್ ಸಾವಿಗೆ ಕಾರಣರೆನ್ನಲಾದ ಇಬ್ಬರೂ ಪೇದೆಗಳ ವಿರುದ್ಧ ದೂರು ದಾಖಲಿಸಿರುವ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಅಖಿಲ ಭಾರತ ಕತ್ತಿವರಸೆ ಸಂಸ್ಥೆಯು ಪ್ರಧಾನಿ ಮೋದಿಗೆ ಪತ್ರ ಬರೆದು ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದೆ.