

ಮುಂಬೈ: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಸಲಹಾ ಸಮಿತಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಹುಲ್ ದ್ರಾವಿಡ್ ಯಾಕೆ ಈ ಸಮಿತಿಗೆ ಸೇರಲು ನಿರಾಕರಿಸಿದರು ಎಂಬುದಕ್ಕೆ ಉತ್ತರ ಸಿಕ್ಕಿದೆ.
ಸಲಹಾ ಸಮಿತಿಗೆ ಸೇರುವಂತೆ ಬಿಸಿಸಿಐ ರಾಹುಲ್ ದ್ರಾವಿಡ್‌ರನ್ನು ಕೇಳಿಕೊಂಡರೂ, ಈ ಬೇಡಿಕೆಯನ್ನು ರಾಹುಲ್ ತಿರಸ್ಕರಿಸಿದ್ದರು. ಇದಕ್ಕೆ ಕಾರಣವೇನೆಂಬುದನ್ನು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿರುವುದಾಗಿ ಸುದ್ದಿ ಮೂಲಗಳು ವರದಿ ಮಾಡಿವೆ.
ರಾಹುಲ್ ದ್ರಾವಿಡ್‌ಗೆ ಸೌರವ್ ಜತೆ ಕೆಲಸ ಮಾಡುವುದು ಇಷ್ಟವಿಲ್ಲ. ಆದ್ದರಿಂದಲೇ ಅವರು ಬಿಸಿಸಿಐ ಸಲಹಾ ಸಮಿತಿಯಲ್ಲಿ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿಂದೆ ಇದೇ ಸಮಿತಿಗೆ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್‌ನ್ನು ನೇಮಕ ಮಾಡುವುದಾಗಿ ವರದಿಯಾಗಿತ್ತು. ಆದರೆ ರಾಹುಲ್ ದ್ರಾವಿಡ್ ಆ ಆಫರ್‌ನ್ನು ತಿರಸ್ಕರಿಸಿರುವುದರಿಂದ ಅವರ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್‌ರನ್ನು ನೇಮಕ ಮಾಡಲಾಗಿತ್ತು.
ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಸಲಹೆಗಾರನ ಜವಾಬ್ದಾರಿ ಹೊತ್ತಿರುವುದರಿಂದ ರಾಹುಲ್ ಬಿಸಿಸಿಐ ಸಲಹಾ ಸಮಿತಿ ಆಫರ್‌ನ್ನು ನಿರಾಕರಿಸಿದ್ದರು ಎಂದು ಆವಾಗ ಹೇಳಲಾಗಿತ್ತು.
ಇದಲ್ಲದೆ, ಭಾರತ ತಂಡದ ಕೋಚ್ ಹುದ್ದೆಗೂ ರಾಹುಲ್ ಹೆಸರು ಸೂಚಿಸಲಾಗಿತ್ತು.
ರಾಹುಲ್ ಮತ್ತು ಸೌರವ್ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಸಚಿನ್ ತೆಂಡೂಲ್ಕರ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗಂಗೂಲಿ ರಾಹುಲ್ ಮತ್ತು ಗ್ರೆಗ್ ಚಾಪೆಲ್ ನಡುವಿನ ಸಂಬಂಧ ಹೇಗಿತ್ತು ಎಂಬುದರ ಬಗ್ಗೆ ಹೇಳಿದ್ದರು. ಆದರೆ ಇದ್ಯಾವುದಕ್ಕೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ರಾಹುಲ್ ಮರುತ್ತರ ನೀಡಿದ್ದರು.