

ಕ್ಯಾನ್ ಬೆರಾ: ಕ್ಯಾನ್ ಬೆರಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ತಂಡಗಳ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.
ವಿಶ್ವಕಪ್ ಕ್ರಿಕೆಟ್ ನಲ್ಲಿ ಸತತ ದಾಖಲೆಗಳನ್ನು ಬರೆಯುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿಯೂ ಇದನ್ನು ಮುಂದುವರೆಸಿದ್ದು, ವಿಶ್ವಕಪ್ ನಲ್ಲಿ ಸತತ 2ನೇ ಬಾರಿಗೆ 400 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಆ ಮೂಲಕ ವಿಶ್ವಕಪ್ ನಲ್ಲಿ ಸತತ 2ನೇ ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡವೆಂಬ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬರೆಯಿತು.
ಅಲ್ಲದೆ ಇದು ದಕ್ಷಿಣ ಆಫ್ರಿಕಾದ 5ನೇ 400 ರನ್ ಗಳಿಕೆಯಾಗಿದ್ದು, ಏಕದಿನದಲ್ಲಿ 5 ಬಾರಿ 400ಕ್ಕೂ ಅಧಿಕ ರನ್ ಗಳಿಸಿದ ಭಾರತದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಸರಿಗಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಹಶೀಂ ಆಮ್ಲಾ (159ರನ್), ಡುಪ್ಲೆಸಿಸ್ (108 ರನ್) ಮತ್ತು ರಾಸ್ಸೋವ್ (61 ರನ್) ಅವರ ಭರ್ಜರಿ ಆಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 411 ರನ್ ಗಳಿಸಿದರು.
ಪ್ರಸಕ್ತ ವಿಶ್ವಕಪ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸತತ 2ನೇ ಬಾರಿ 400ಕ್ಕೂ ಅಧಿಕ ರನ್ ಗಳಿಸಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 408 ರನ್ ಗಳಿಸಿತ್ತು. ಇನ್ನು ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶೀಂ ಆಮ್ಲಾ ಅವರು ಮತ್ತೊಂದು ದಾಖಲೆ ಬರೆದಿದ್ದು, ತಮ್ಮ ವೃತ್ತಿ ಜೀವನದ 20ನೇ ಶತಕ ಸಿಡಿಸಿದರು. ಆ ಮೂಲಕ ವೇಗವಾಗಿ 20 ಶತಕ ಗಳಿಸಿದ್ದ ಭಾರತ ವಿರಾಟ್ ಕೊಹ್ಲಿ ಅವರ ದಾಖಲೆ ಮೆಟ್ಟಿನಿಂತರು. ವಿರಾಟ್ ಕೊಹ್ಲಿ 20 ಶತಕಗಳನ್ನು ಗಳಿಸಲು 133 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು, ಆಮ್ಲಾ ಅವರು ಕೇವಲ 108 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡುವ ಮೂಲಕ ಈ ದಾಖಲೆಯನ್ನು ಮುರಿದರು.
ಉಳಿದಂತೆ 40 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ 400 ಪ್ಲಸ್ ರನ್ ಒಂದೇ ಆವೃತ್ತಿಯಲ್ಲಿ ಬಾರಿಸಿಲ್ಲ. ಇದಕ್ಕೂ ಮುನ್ನ 2007ರಲ್ಲಿ ಭಾರತ 400ರನ್ ಗಡಿ ದಾಟಿತ್ತು. ಹಾಗೂ ದಕ್ಷಿಣ ಆಫ್ರಿಕಾ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಗುರಿ ದಾಟಿತ್ತು. ಇದೀಗ ಇಂದು ಮತ್ತೆ ದಕ್ಷಿಣ ಆಫ್ರಿಕಾ ತಂಡ 400ಕ್ಕೂ ಅಧಿಕ ರನ್ ಗಳಿಸಿದೆ. ದಕ್ಷಿಣ ಆಫ್ರಿಕಾದ 414/4 ವಿಶ್ವಕಪ್ ನಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ಹಾಗೂ ಒಟ್ಟಾರೆ ಏಕದಿನ ಪಂದ್ಯದಲ್ಲಿ 9ನೇ ಶ್ರೇಷ್ಠ ಪ್ರದರ್ಶನವಾಗಿದೆ. ಇದೇ ಪಂದ್ಯದಲ್ಲಿ ಹಶೀಂ ಆಮ್ಲಾ 159 ಹಾಗೂ ಫಾಫ್ ಡು ಫ್ಲೆಸಿಸ್109. ಇಬ್ಬರ 200 ರನ್ ಜೊತೆಯಾಟ ದಕ್ಷಿಣ ಆಫ್ರಿಕಾ ಪರ ಎರಡನೇ ವಿಕೆಟ್ ಗೆ ಅತಿ ಹೆಚ್ಚು ಜೊತೆಯಾಟದ ದಾಖಲೆಯಾಗಿದೆ.
ಒಟ್ಟಾರೆ ಈ ಬಾರಿ ಶತಾಯಗತಾಯ ವಿಶ್ವಕಪ್ ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾದ ಆಟಗಾರರು, ವಿಶ್ವಕಪ್ ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ.