

ಬೆಂಗಳೂರು: ಹಿಂದೂ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಗಸ್ಟ್ 10 ರಂದು ಖುದ್ದು ಹಾಜರಾಗುವಂತೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 8ರಂದು ಧೋನಿ ಖುದ್ದು ಹಾಜರಾಗುವಂತೆ 9ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಖುದ್ದು ಹಾಜರಿಗೆ ವಿನಾಯ್ತಿ ನೀಡುವಂತೆ ಕೋರಿ ಧೋನಿ ಪರ ವಕೀಲರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಧೋನಿಗೆ ಹಾಜರಾಗಲು ಆ. 10ರವರೆಗೂ ಕಾಲವಾಕಾಶ ನೀಡಿದೆ.
ವಿವಾದವೇನು? 2013ರ ಏ. 14 ರಂದು ಪ್ರಕಟಗೊಂಡಿದ್ದ ಬ್ಯುಸಿನೆಸ್ ಟುಡೆ ನಿಯತಕಾಲಿಕದ ಮುಖಪುಟದಲ್ಲಿ ವಿಷ್ಣು ಭಗವಾನ್ ವೇಷಧಾರಿ ಧೋನಿಯ ಫೋಟೋ ಪ್ರಕಟವಾಗಿತ್ತು. ಆ ಫೋಟೋದಲ್ಲಿ ಧೋನಿ ಕೈಗಳಲ್ಲಿ ರಿಬಾಕ್ ಶೂ ಸೇರಿ ಹಲವು ವಸ್ತುಗಳಿದ್ದವು. ಹಿಂದುಗಳು ಆರಾಧಿಸುವ ವಿಷ್ಣುವನ್ನು ಜಾಹೀರಾತಿನಲ್ಲಿ ಬಳಸಿಕೊಂಡಿದ್ದರಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಯಕುಮಾರ್ ಹೀರೆಮಠ್ ಎಂಬುವವರು ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.