

ಹುಬ್ಬಳ್ಳಿ: ತಮ್ಮ ಹಿಂದಿನ ಮುಖಾಮುಖಿಯಲ್ಲಿ ಒಡಿಶಾ ವಿರುದ್ಧ ಗೆಲ್ಲುವ ಮೂಲಕ ಪ್ರಸಕ್ತ ರಣಜಿ ಟೂರ್ನಿಯಲ್ಲಿ 2 ನೇ ನೇರ ಜಯ ಸಾಧಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ನ.23 ರಂದು ಆರಂಭಗೊಳ್ಳಲಿರುವ ದೆಹಲಿ ತಂಡವನ್ನು ಎದುರಿಸಲಿದೆ.
ದೆಹಲಿ ತಂಡ ಎ ಗುಂಪಿನ ಅಗ್ರಸ್ಥಾನದಲ್ಲಿರುವ ತಂಡವಾಗಿದ್ದು, ಸದ್ಯಕ್ಕೆ ರಣಜಿ ಅಂಕಪಟ್ಟಿಯಲ್ಲಿ, ಕರ್ನಾಟಕ ತಂಡ 4 ನೇ ಸ್ಥಾನದಲ್ಲಿದೆ. ಕಳೆದ ಆರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿರುವ ಕರ್ನಾಟಕ, ನಾಲ್ಕು ಪಂದ್ಯಗಳಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ, ಅದು ಈವರೆಗಿನ ಸಾಧನೆಯಂತೆ ಒಟ್ಟು 21 ಅಂಕಗಳನ್ನು ಪಡೆದಿದೆ. ಅತ್ತ ದೆಹಲಿ ತಂಡ, ಈ ವರೆಗೆ ಏಳು ಪಂದ್ಯಗಳನ್ನಾಡಿದ್ದು, ಅವುಗಳಲ್ಲಿ ಮೂರು ಗೆಲುವು ಕಂಡಿದ್ದು, ಒಟ್ಟು 24 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಈ ಲೆಕ್ಕಾಚಾರದಲ್ಲಿ ಹೇಳುವುದಾದರೆ, ದೆಹಲಿ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಜಯಶಾಲಿಯಾದರೆ, ಅದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಲಿದೆ.
ಕಳೆದೆರಡು ಪಂದ್ಯಗಳಲ್ಲಿ ರಾಜಸ್ಥಾನ ಹಾಗೂ ಒಡಿಶಾ ತಂಡಗಳ ವಿರುದ್ಧ ಜಯ ಸಾಧಿಸಿರುವ ಕರ್ನಾಟಕ ತಂಡ ದೆಹಲಿ ವಿರುದ್ಧದ ಪಂದ್ಯದಲ್ಲಿ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಆದರೆ ದೆಹಲಿ ಮಾತ್ರ ತನ್ನ ಹಿಂದಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧದ ಸೋತ ಕಹಿಯನ್ನು ಇನ್ನೂ ಮರೆತಿಲ್ಲವಾದ್ದರಿಂದ ಸ್ವಲ್ಪ ಆತ್ಮವಿಶ್ವಾಸದ ಕೊರತೆಯಿಂದಲೆ ಕಣಾಕ್ಕಿಳಿಯಬಹುದು. ಅಲ್ಲದೇ ಕರ್ನಾಟಕದ ತವರಿನಲ್ಲಿ ಈ ಪಂದ್ಯವನ್ನಾಡುತ್ತಿರುವುದರಿಂದ ಸಹಜವಾಗಿಯೇ ದೆಹಲಿ ತಂಡ ಆತ್ಮವಿಶ್ವಾಸದ ಕೊರತೆಯನ್ನೆದುರಿಸುತ್ತದೆ.