

ಬರ್ಲಿನ್: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಪ್ರತಿಷ್ಠಿತ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧಾವಳಿಯಲ್ಲಿ ಮತ್ತೆ ಸೋಲನುಭವಿಸಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲಿಗೆ ಅಜರ್‍ಬೈಜಾನ್‍ನ ರಾವ್ ಮಮೆಡೋವ್ ವಿರುದ್ಧ ಸೋತ ಆನಂದ್, ಬಳಿಕ ರಷ್ಯಾದ ಡೆನಿಸ್ ಖಿಸ್ಮಾಟುಲಿನ್ ವಿರುದ್ಧವೂ ಪರಾಭವಗೊಂಡರು.
ಇದು ಅವರನ್ನು ತೀವ್ರವಾಗಿ ಬಾಧಿಸಿದ್ದು, ಪಂದ್ಯಾವಳಿಯಲ್ಲಿ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಪವಾಡವನ್ನೇ ನಿರೀಕ್ಷಿಸಬೇಕಿದೆ. ಮೊದಲ ದಿನದಂದು 5 ಪಾಯಿಂಟ್ಸ್‍ಗೆ ಪ್ರತಿಯಾಗಿ 2.5 ಅಂಕಗಳೊಂದಿಗೆ ಹೋರಾಟ ಮುಗಿಸಿದ್ದ ಆನಂದ್, ರಷ್ಯಾದ ವ್ಲಾಡಿಮಿರ್ ಬೆಲೊವ್ ಹಾಗೂ ಉಕ್ರೇನ್‍ನ ಆಂಡ್ರೆ ವೊಲೊಕಿಟಿನ್ ವಿರುದ್ಧ ಗೆಲುವು ಸಾಧಿಸಿದರಾದರೂ, ಪಂದ್ಯದ 8ನೇ ಸುತ್ತಿನಲ್ಲಿ ಮೆಮೆಡೋವ್ ವಿರುದ್ಧ ಸೋಲಿನಿಂದ ಹಿನ್ನಡೆ ಅನುಭವಿಸಿದರು. ಆದಾಗ್ಯೂ 9ನೇ ಸುತ್ತಿನಲ್ಲಿ ತಿರುಗಿಬಿದ್ದ ಆನಂದ್, ಮಾಲ್ಡೋವಾದ ವಿಕ್ಟರ್ ಬೊಲೊಗನ್ ವಿರುದ್ಧ ಗೆದ್ದರೂ, ಮುಂದಿನ ಪಂದ್ಯದಲ್ಲಿ ಡೆನಿಸ್ ಎದುರು ಸೋಲನುಭವಿಸಿದ್ದು ಮತ್ತೆ ಪೆಟ್ಟು ನೀಡಿತು. ಇನ್ನು 5 ಸುತ್ತಿನ ಪಂದ್ಯ ಬಾಕಿ ಉಳಿದಿದ್ದು, ಪ್ರಸಕ್ತ 5.5 ಅಂಕ ಗಳಿಸಿರುವ ಆನಂದ್, ಕೊನೆಯ ದಿನ ಅಂಕ ಗಳಿಸದೆ ಹೋದರೆ ಪೊಡಿಯಂ ಫಿನಿಶ್‍ನಿಂದ ವಂಚಿತರಾಗಲಿದ್ದಾರೆ