

ದುಬೈ: ಮೂರು ಬಾರಿ ಕಿರಿಯರ ವಿಶ್ವಕಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡ ಇದೇ 27 ರಿಂದ ಆರಂಭವಾಗಲಿರುವ 19 ವರ್ಷದೊಳಗಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಭಾರತ ತಂಡ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಐರ್ಲೆಂಡ್ ಜತೆಗೆ ನ್ಯೂಜಿಲೆಂಡ್ ಮತ್ತು ನೇಪಾಳ ವಿರುದ್ಧ ಸೆಣಸಲಿದೆ. ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹೊರತಾಗಿ 9 ಟೆಸ್ಟ್ ಆಡುವ ರಾಷ್ಟ್ರಗಳು ಮತ್ತು 7 ಐಸಿಸಿ ಸದಸ್ಯ ರಾಷ್ಟ್ರಗಳು ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿದ್ದು ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯಲಿರುವ ತಂಡಗಳು ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಲಿವೆ. ಭಾರತ ತಂಡ ಬುಧವಾರ ಬಾಂಗ್ಲಾದೇಶ ತಲುಪಿದೆ.
ಡಿ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ನಾಕೌಟ್ ಪ್ರವೇಶಿಸುವ ಫೇವರಿಟ್ ತಂಡಗಳೆನಿಸಿವೆ. ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿರುವ ಭಾರತ ಯುವ ಪಡೆ ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.