

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟ(ಸ್ಯಾಗ್ )ದಲ್ಲಿ ಭಾಗವಹಿಸಲಿರುವ 19 ಮಂದಿ ಆಟಗಾರರಿರುವ ಭಾರತ ಬ್ಯಾಡ್ಮಿಂಟನ್ ತಂಡವನ್ನು ಪ್ರಕಟಿಸಲಾಗಿದ್ದು, ಅಗ್ರ ಶಟ್ಲರ್ ಸೈನಾ ನೆಹ್ವಾಲ್ ತಂಡದ ನೇತೃತ್ವ ಹೊತ್ತಿದ್ದಾರೆ. ಟೂರ್ನಿಗಾಗಿ ಪ್ರಕಟಗೊಂಡಿರುವ ಭಾರತ ತಂಡವು, ಫೆಬ್ರವರಿ 5ರಂದು ರಾಷ್ಟ್ರೀಯ ತರಬೇತುದಾರ ಪುಲ್ಲೇಲ ಗೋಪಿಚಂದ್ ಜತೆಗೆ ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿರುವ ಶಿಲ್ಲಾಂಗ್ ಗೆ ಆಗಮಿಸುವ ಸಾಧ್ಯತೆಗಳಿವೆ.
ಸೈನಾ ಹೊರತುಪಡಿಸಿದಂತೆ, ವಿಶ್ವ ಚಾಂಪಿಯನ್ ಶಿಪ್ ಕಂಚಿನ ವಿಜೇತೆ ಪಿ.ಎ.ಸಿಂಧು, 2014ರ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಪರುಪಳ್ಳಿ ಕಷ್ಯಪ್, ಎಚ್.ಎಸ್.ಪ್ರಣಯ್, ಅಜಯ್ ಜಯರಾಮ್, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಭಾರತ ತಂಡದಲ್ಲಿದ್ದಾರೆಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ತಿಳಿಸಿದ್ದಾರೆ.
ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಪಂದ್ಯಾವಳಿಯ ಎರಡು ದಿನಗಳ ಕಾಲ ತಂಡಗಳ ಹಣಾಹಣಿ ನಡೆಯಲಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 8ರಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಜರುಗಲಿವೆ.
ಇನ್ನು ವೈಯಕ್ತಿಕ ವಿಭಾಗದಲ್ಲಿ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದ ಪಂದ್ಯಗಳು ಫೆಬ್ರವರಿ 9 ಹಾಗೂ 10ರಂದು ನಡೆಯಲಿದ್ದು, ಫೆಬ್ರವರಿ 10ರಂದೇ ಪದಕ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ದಾಸ್ ತಿಳಿಸಿದ್ದಾರೆ.
ಟೂರ್ನಿಯ ಪುರುಷರ ವಿಭಾಗದಲ್ಲಿ ವಿವಿಧ ದೇಶಗಳ ಒಟ್ಟು 8 ತಂಡಗಳು, ಮಹಿಳೆಯರ ವಿಭಾಗದಲ್ಲಿ 7 ತಂಡಗಳು ಭಾಗವಹಿಸಲಿದ್ದು ಇದೇ ಮೊದಲ ಬಾರಿಗೆ ಸ್ಯಾಗ್ ನ ಸದಸ್ಯ ರಾಷ್ಟ್ರಗಳೆಲ್ಲವೂ ಭಾಗವಹಿಸುತ್ತಿರುವುದು ವಿಶೇಷ.