ಧರ್ಮಶಾಲ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದ ಅನುರಾಗ್ ಠಾಕೂರ್ ಅವರು ಶನಿವಾರ ಹಿಮಾಚಲ ಪ್ರದೇಶ ಒಲಿಂಪಿಕ್ ಸಂಸ್ಥೆ(ಎಚ್ ಪಿ ಒಎ)ಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲೋಧಾ ಸಮಿತಿ ಶಿಫಾರಸು ಪಾಲನೆ ಮಾಡದಿದ್ದುದಕ್ಕೆ ಮತ್ತು ಬಿಸಿಸಿಐ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಠಾಕೂರ್ ಅವರನ್ನು ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿತ್ತು.
ಇದೀಗ ನಾಲ್ಕು ವರ್ಷದ ಅವಧಿಗಾಗಿ ಎಚ್ ಪಿ ಒಎ ಅಧ್ಯಕ್ಷರಾಗಿ ಠಾಕೂರ್ ಆಯ್ಕೆಯಾಗಿದ್ದು, ಹಿರಿಯ ಉಪಾಧ್ಯಕ್ಷರಾಗಿ ವೀರೇಂದ್ರ ಕನ್ನವರ್ ಮತ್ತು ಬಾಂಕ್ಸಿಂಗ್ ಒಕ್ಕೂಟದ ಉಪಾಧ್ಯಕ್ಷ ರಾಜೇಶ್ ಭಂಡಾರಿಯಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಒಲಿಂಪಿಕ್ ಸಂಸ್ಥೆಯ ಹೊಸ ಸದಸ್ಯರು ರಾಜ್ಯದಲ್ಲಿ ಕ್ರೀಡೆಗಳ ಗುಣಮಟ್ಟ ಹಾಗೂ ಮೂಲ ಸೌಕರ್ಯ ಸುಧಾರಿಸುವ ಭರವಸೆ ನೀಡಿದ್ದಾರೆ.