ಒಂದೇ ಗಿಡದ ಮೇಲೆ ಬೆಳೆದ
ಮಲ್ಲಿಗೆಗಳು ಕೂಡಿ ಹಾರವಾಗಿವೆ
ಅರ್ಧ ಹೆಣದ ಮೇಲಿದ್ದರೆ
ಇನ್ನರ್ಧ ದೇವರೊಂದಿಗೆ ನಲಿದಿವೆ
-------
ಹುಟ್ಟಿನೊಂದಿಗೇ ಹುಟ್ಟುವುದು ಸಾವು
ಒಂಟಿಯಲ್ಲ ನಾವು ನೀವು
ಹುಟ್ಟೆಂದರೆ ಜೀವ ತಳೆವ ಹುಟ್ಟು
ಜೊತೆಗೆ ಜೀವ ತೆಗೆವ ಸಾವು
-----
ನೀನೇ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆ
ಈಗ ನಿನಗೂ ಮುತ್ತಿಡಲಾಗದಂತೆ
ತುಟಿ ಸುಕ್ಕುಗಟ್ಟಿದೆ
--------
ಜಿಟಿ ಜಿಟಿ ಮಳೆ ಸ್ನಾನದೊಂದಿಗೆ
ಇಂದು ಮರ ಮೈ ತುಂಬಿ ತೊನೆವಾಗ
ನಿನ್ನ ನೆನಪಾಯಿತು ಕಣೆ
ಹೃದಯಾಕಾರದ ಮಾವನ್ನು ನೋಡಿ
ಯಾಕೋ ಬೆಚ್ಚಿಬಿಟ್ಟೆ !
---------
ಎಂದೋ ಮಾಡಿಟ್ಟಿದ್ದ ಗುಲಾಬ್ ಜಾಮೂನ್
ಬೂಸ್ಟ್ ಹಿಡಿದಿದ್ದು ಕಂಡು
ಮತ್ತೆ ಅವಳ ಹೃದಯ ನೆನಪಿಗೆ ಬಂತು
ಕೂಡಲೇ ಚರಂಡಿಗೆ ಸುರಿದುಬಿಟ್ಟೆ !
-------
ನಿನ್ನನ್ನು ನೆನಪಿಸಿಕೊಂಡು
ಪೆಟ್ರೋಲ್ ಖಾಲಿಯಾದ ಗಾಡಿಗೆ
ಸಮಾಧಾನವಾಗುವವರೆವಿಗೂ ಒದ್ದೆ!
-ಮೋಹನ್ ಕೊಳ್ಳೇಗಾಲ