

ಕಾಂಟ್ರಾಕ್ಟಿಂಗ್ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಶಿವ ಇದ್ದಕ್ಕಿದ್ದಂತೆ ತನ್ನ ಹೆಂಡತಿಗೆ ತುರ್ತು ಚಿಕಿತ್ಸೆ ಕೊಡಿಸಬೇಕಾಗಿದ್ದ ಕಾರಣ ಭಾರತಕ್ಕೆ ತೆರಳಿದ್ದ. ತನ್ನೆಲ್ಲಾ ಕೆಲಸ ಮುಗಿಸಿ ಊರಿನಿಂದ ಮೊನ್ನೆರಾತ್ರಿ ಕುವೈತ್ಗೆ ಬಂದು, ಮಾರನೆಯ ದಿನವೇ ಕೆಲಸಕ್ಕೆ ಹಾಜರಾಗಿ ಎಲ್ಲರಿಗೂ ಸಿಹಿ ಹಂಚಿ ಸಂತೋಷದಲ್ಲಿದ್ದ. ನಂತರ ತನ್ನ ಕಂಪನಿಯ ಬಾಸ್ ಜೊತೆ ಮಾತನಾಡುತ್ತ ತನ್ನ ಖುಷಿ ಹಂಚಿಕೊಂಡ.
'ಸಾರ್ ನಮಸ್ಕಾರ, ಹೇಗಿದ್ದೀರಿ? ನಿನ್ನೆ ರಾತ್ರಿ ಊರಿಂದ ಬಂದೆ ಸಾರ್.'
'ತಗೊಳ್ಳಿ ಇದು ನಮ್ಮ ಊರಿನ ತಿಂಡಿ. ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ.'
'ಓಹ್! ಥ್ಯಾಂಕ್ಸ್ ಶಿವ. ಏನಕ್ಕೆ ಇದೆಲ್ಲಾ ತರೋಕೆ ಹೋದೆ? ಮತ್ತೆ ನಿನ್ನ ಹೆಂಡತಿಗೆ ಅಪರೇಷನ್ ಆಯ್ತಾ...? ಹೇಗಿದ್ದಾರೆ ಈಗ...?'
'ಹ್ಞೂಂ ಸರ್ ಚೆನ್ನಾಗಿದ್ದಾರೆ. ನೀವು ದೇವರಿದ್ದಂಗೆ, ನಾನು ಇದ್ದಕ್ಕಿದ್ದಂತೆ ಊರಿಗೆ ಹೋಗ್ಬೇಕಾದ್ರೆ ನನಗೆ ಹಣದ ಸಹಾಯ ಮಾಡಿದ್ರಿ. ನಿಮ್ಮನ್ನ ಮರೆಯೋಕ್ಕೆ ಆಗೋಲ್ಲ. ಈ ತಿಂಗಳ ಸಂಬಳ ಬಂದಾಗ ಖಂಡಿತಾ ದುಡ್ಡು ಕೊಟ್ಟುಬಿಡ್ತೀನಿ...'
'ಇರ್ಲಿ ಬಿಡು. ಅರ್ಜೆಂಟ್ ಇಲ್ಲಾ... ಸದ್ಯಕ್ಕೆ ಆರೋಗ್ಯವಾಗಿದ್ದಾರಲ್ಲ, ಅದು ಮುಖ್ಯ. ಇವತ್ತೇ ಆಫೀಸಿಗೆ ಬಂದಿದ್ದೀಯಾ... ಎಲ್ಲಾ ಕೆಲಸಗಳು ನಿನಗೇ ಕಾದಿದೆಯೇನೋ. ಎಲ್ಲಾ ನೋಡು ಹೇಗೆ ನಡೀತಾ ಇದೆಯೆಂದು.'
'ಸರಿ ಸರ್...'
ಈ ಮಾತುಕತೆ ನಡೆದದ್ದು ಬೆಳಗಿನ 11 ಗಂಟೆಯಲ್ಲಿ. ರಮ್ಜಾನ್ ಕಾರಣಕ್ಕೆ ಕುವೈತ್ನಲ್ಲಿ ಈಗ ಅರ್ಧ ದಿನವಷ್ಟೇ ಕೆಲಸ. ಶಿವ, ಕೆಲಸ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಮನೆ (ಕಂಪನಿ ಕ್ಯಾಂಪ್) ಕಡೆ ಹೊರಟ. ಇತ್ತ ಬಾಸ್ ತಮ್ಮ ಮನೆಕಡೆ ಹೊರಟರು ಮಧ್ಯದಲ್ಲಿ ಅಂಗಡಿಯೊಂದಕ್ಕೆ ತೆರಳಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ತೆಗೆದುಕೊಂಡು ತನ್ನ ಹೆಂಡತಿಯನ್ನ ಕರೆದೊಯ್ಯಲು ಬಂದರೆ... ಆತನಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತು ಮೌನವಾಗಿತ್ತು. ನಿಟ್ಟುಸಿರಿನ ಶಬ್ದ ಕೇಳುತ್ತಿತ್ತು. ಏಕೆ ಏನಾಯಿತು ಎಂದು ಆತನ ಪತ್ನಿ ಕೇಳುತ್ತಿದ್ದಂತೆ ಆತ ಹೇಳಿದ:
'ಊರಿಗೆ ತೆರಳಿದ್ದ ಒಬ್ಬ ಆಫೀಸಿನವ ಇವತ್ತು ನನಗೆ ಪೆನ್ ಗಿಫ್ಟ್ ಕೊಟ್ಟ ಆದರೆ... ಆದರೆ...
1 ಗಂಟೆಗೆ ಕಂಪನಿಯ ಕ್ಯಾಂಪ್ನಿಂದ ಕರೆ ಬಂತು. ನನಗೆ ಪೆನ್ ಗಿಫ್ಟ್ ನೀಡಿದ್ದ ವ್ಯಕ್ತಿ ಊಟ ಮುಗಿಸಿ ಹೊರಗಡೆ ಕೈ ತೊಳೆಯಲು ಬಂದವನು ಕುಸಿದು ಬಿದ್ದನಂತೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೆ ಇಲ್ಲ... ಸತ್ತು ಹೋಗಿದ್ದಾರೆ ಎಂದರಂತೆ...!'
ಇಷ್ಟು ಹೇಳಿ ಮೌನವಹಿಸಿದವನ ಕಣ್ಣಲ್ಲಿ ಸ್ತಬ್ಧ ಚಿತ್ರಣ ಎದ್ದು ಕಾಣುತ್ತಿತ್ತು... ತಡೆಯಲಾರದ ಸಂಕಟವೊಂದು ಮನಸಿನಿಂದಾಚೆ ಇಣುಕುತ್ತಿತ್ತು.
- ಇದು ನಡೆದದ್ದು ನನ್ನವರ ಕಚೇರಿಯಲ್ಲಿ. ಎಲ್ಲಾ ತಿಳಿದ ಮೇಲೆ ನನಗೂ ಮಾತು ಹೊರಡಲಿಲ್ಲ. ನನಗೇ ಅರಿವಿಲ್ಲದೆ ಕಣ್ಣಂಚು ಒದ್ದೆಯಾಗಿತ್ತು. ಅಪರೇಷನ್ ಆಗಿ ಹಾಸಿಗೆ ಹಿಡಿದಿರುವ ಹೆಂಡತಿ ಜೊತೆಗೆ ಮಕ್ಕಳು ಹೇಗಿದ್ದಾರೋ ಏನೋ ಎಂದೆನಿಸುತ್ತಿತ್ತು... ಇತ್ತ ನೋಡಿದರೆ ಮನೆಯ ಯಜಮಾನನ ಸಾವು.
ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು ಈ ಮರುಭೂಮಿಯಲ್ಲಿ ಕಾದಿತ್ತೇ? ಸಾವು ಬಂದರೂ ಯಮರಾಯ ಇಲ್ಲಿಗೇ ಯಾಕೆ ಕರೆತಂದ? ಇಷ್ಟು ದಿನ ಊರಲ್ಲೇ ಇದ್ದಾಗ ಏಕೆ ಏನೂ ಆಗಲಿಲ್ಲ..? ದೇವರೇ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಸಾಯುವ ವಯಸ್ಸಲ್ಲದಾಗ ಸಾವು ಬರುವುದು ಎಷ್ಟು ನ್ಯಾಯವೋ ಅರಿವಿಲ್ಲ!
ಜೀವವಿಲ್ಲದಾಗ ಆ ಆತ್ಮಕ್ಕೆ ಶಾಂತಿ ಕೋರುವುದೊಂದೇ ದಾರಿ... ಇನ್ನು ಆತನ ದೇಹ ಊರು ಮುಟ್ಟಲು ಎಷ್ಟು ದಿನಗಳೋ... ಈ ವೇಳೆಗೆ ಎಲ್ಲ ವಿಷಯ ತಿಳಿದಿರುವ ಕುಟುಂಬದವರ ಮನಸ್ಸಿನ ಪರಿಸ್ಥಿತಿ ಹೇಗೋ...?
ಎಲ್ಲಿ ಯಾವಾಗ... ಏನು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ... ಬದುಕು ಮಾಯೆಯ ಆಟ ಎನ್ನುವುದು ಇದಕ್ಕೇ ತಾನೆ?
- ಸುಗುಣಾ ಮಹೇಶ್, ಕುವೈತ್
sugunamahesh@gmail.com