

ಆ ಶಾಸನದಲ್ಲಿ
ರಾಜನ ಹೆಸರು ಕಂಗೊಳಿಸುತ್ತಿತ್ತು;
ಹೋರಾಡಿ
ಮಡಿದ ಸೈನಿಕರ ರಕ್ತದ
ಕಲೆಗಳನು ಕಾಲ ಅಳಿಸಿ ಹಾಕಿತ್ತು !
ಹಲವರು ಹೋದರು ಮನೆ ಬಿಟ್ಟು
ಬುದ್ಧರಾಗಲೇ ಇಲ್ಲ;
ಬೋಧಿ ವೃಕ್ಷದ ಬೇರಿಗೂ ವೈರಾಗ್ಯ;
ನಡೆದಿದೆಯಂತೆ, ಮರವ ಬಿಟ್ಟು !
ರಾಜನ ಕೈಯಲ್ಲಿರುವ
ಮದಿರೆಗೆ
ದೂರದ ಗಡಿಯಲಿ ಸತ್ತ ಸೈನಿಕನ
ನೆತ್ತರಿಗಿಂತ ಜಾಸ್ತಿ ಬೆಲೆಯಿತ್ತು!
ಯುದ್ಧಕ್ಕಾಗಿ ಮನೆಯಿಂದ
ಹೊರಟ ಯೋಧ
ಹಿಡಿದಿದ್ದ ಫಳ ಫಳ ಹೊಳೆವ
ಖಡ್ಗದಲಿ ಕಾಣುತ್ತಿತ್ತು-
ಹೆಂಡತಿ ಮಕ್ಕಳ ಬಿಂಬ!
'ಜೀ ಹುಜೂರ್' ಎಂದು
ರಾಜನಾಸ್ಥಾನದಲ್ಲಿ
ಕುಣಿಯುತ್ತಿದ್ದ ನರ್ತಕಿಯ
ಕಣ್ಣಲ್ಲಿದ್ದ ನೋವನ್ನು
ಕಾಡಿಗೆ ಮುಚ್ಚಿತ್ತು!
ಹೆಂಡತಿಯನ್ನು ಸಮಾಧಿ
ಮಾಡಿದ್ದ ರಾಜ
ಮಹಾ ಪ್ರೇಮಿಯಾದ;
ಆ ಗೋರಿ ಈಗ ಸ್ಮಾರಕ!
- ಪರೇಶ ಸರಾಫ