ನನ್ನ ಆಳದ ಮಾತು

ನನ್ನ ಆಳದ ಮಾತು
Updated on: 

ಮಾಯಾ ಏಂಜೆಲೋ, ಅಮೆರಿಕದ ಕವಯಿತ್ರಿ. ಕರಿಯಳಾದ ಈಕೆ, ಮೈಬಣ್ಣದ ಕಾರಣದಿಂದ ಅವಮಾನ ಉಂಡು, ಅದನ್ನೇ ಸಾಹಿತ್ಯದ ವಸ್ತುವಾಗಿಸಿಕೊಂಡು, ಪ್ರಸಿದ್ಧಿಯ ಉತ್ತುಂಗಕ್ಕೇರಿದಳು. 'ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ' ಈಕೆಯ ಆತ್ಮಕಥನ. ಕಥನಗಾರಿಕೆಯ ಬಗ್ಗೆ ಈಕೆಯ ಅಭಿಪ್ರಾಯಗಳು:

ಬರೆಯುತ್ತಿರುವಾಗ ನಾನು ಇವುಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯತ್ನಿಸುತ್ತಿರುತ್ತೇನೆ: ನಾನ್ಯಾರು, ನಾವ್ಯಾರು, ನಮಗೇನು ಸಾಧ್ಯ, ಹೇಗೆ ಭಾವಿಸುತ್ತೇವೆ, ಹೇಗೆ ಕುಸಿಯುತ್ತೇವೆ ಮತ್ತು ಎದ್ದು ನಿಲ್ಲುತ್ತೇವೆ, ಕತ್ತಲಿನಿಂದ ಕತ್ತಲಿಗೆ ಸರಿಯುತ್ತೇವೆ. ಜತೆಗೆ ನಾನು ಭಾಷೆಯನ್ನೂ ಪ್ರಯೋಗಿಸುತ್ತಿರುತ್ತೇನೆ. ಅದರ ನಿಜವಾದ ಧ್ವನಿ ಪಡೆಯುವಂತೆ. ನಾನದನ್ನು ಪ್ರೀತಿಸುತ್ತೇನೆ. ಭಾಷೆ ನಮಗೇನು ಮಾಡುತ್ತದೆ, ಅದು ನಮ್ಮ ಯಾತನೆ ಮತ್ತು ವೈಭವಗಳನ್ನು, ಸ್ವಾದ ಮತ್ತು ಭಿನ್ನತೆಗಳನ್ನು ಹೇಗೆ ಹೇಳಬಲ್ಲದು ಇತ್ಯಾದಿ. ಹಾಗೇ ಅದು ನಮ್ಮನ್ನು ನಗುವಂತೆ, ವಿವೇಕ ತೋರಿಸುವಂತೆ ಮಾಡುತ್ತದೆ.

ಬರಹ ನಿರ್ದಿಷ್ಟ ವಿಷಯದಿಂದ ಆರಂಭವಾಗಬಹುದು, ಆದರೆ ಅದು ಕೊನೆಯಾಗುವುದು ಮಾತ್ರ ಸಂಪೂರ್ಣ ಭಿನ್ನ ವಿಚಾರದಿಂದಲೇ. ಯಾವುದರ ಬಗ್ಗೆ ಬರೆಯಬೇಕೆನಿಸಿದರೂ, ಮೊದಲಿಗೆ ನನಗೆ ಗೊತ್ತಿರುವುದನ್ನೆಲ್ಲ ಬರೆದುಬಿಡುತ್ತೇನೆ. ಕೆಲ ದಿನ ಬಿಟ್ಟು ಓದಿದಾಗ ಅದರ ಲಯ ಏನೆಂದು ನನಗೆ ಗೊತ್ತಾಗುತ್ತದೆ. ವಿಶ್ವದಲ್ಲಿ ಎಲ್ಲಕ್ಕೂ ಲಯವಿದೆ. ಲಯ ನನಗೆ ಗೊತ್ತಾಗುತ್ತಲೇ, ನಾನು ಇದಕ್ಕೆ ಏನನ್ನು ಸೇರಿಸಬೇಕು ಅಥವಾ ಏನನ್ನು ಕಳೆಯಬೇದು ಎಂಬುದು ಗೊತ್ತಾಗುತ್ತದೆ. ನಂತರ ಅಂತಿಮ ರೂಪ.

ನಾನು ಓದುಗರಿಗಾಗಿ ಬರೆಯುವುದಿಲ್ಲ ಎಂಬುದು ಸುಳ್ಳು. ಆದರೆ ನನ್ನ ಓದುಗ, ನಾನು ಏನು ಹೇಳುತ್ತಿದ್ದಾನೋ ಅದರಿಂದ ಆಚೆಗೆ ಯೋಚಿಸುವವನಾಗಿರುತ್ತಾನೆ. ಹಾಗಾಗಿ ನಾನು ಬರೆಯುವುದು ನನಗಾಗಿ ಮತ್ತು ನನ್ನಂಥವರಿಗಾಗಿ. ಅದು ಘಾನಾದ ನಾಣ್ಣುಡಿಯಂತೆ 'ಆಳದ ಮಾತು'. ನನ್ನ ಬರಹ ಸೊಗಸಾಗಿದೆ, ಮೆಚ್ಚುವಂತಿದೆ ಅನ್ನಿಸಿದರೆ ಇನ್ನೊಮ್ಮೆ ಓದುವುದೇ ಅದನ್ನರಿಯಲು ಇರುವ ಮಾರ್ಗ. 

ಕೆಲವೊಮ್ಮೆ ನಾವು ಬಲ್ಲ ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಚಿತ್ರಿಸಲು ಸಾಕೆಂಬಷ್ಟು ಇರುವುದಿಲ್ಲ. ಆಗ ನಾಲ್ಕಾರು ವ್ಯಕ್ತಿಗಳನ್ನು ಸೇರಿಸಿದ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಬೇಕಾಗುತ್ತದೆ. ಹೀಗೇ, ನಾವು ವಾಸ್ತವದ ಜತೆಗೆ ಗುದ್ದಾಡಿ, ಎಲ್ಲವನ್ನೂ ಸೇರಿಸಿಹೊಸತೊಂದನ್ನು ಸೃಷ್ಟಿಸಬೇಕಾಗುತ್ತದೆ.

ಕಾದಂಬರಿಕಾರರು ಸುಳ್ಳು ಹೇಳುತ್ತಾರಾ? ನನಗೆ ಗೊತ್ತಿಲ್ಲ. ಆದರೆ ನಾವು ಕಲ್ಪಿತ ಪಾತ್ರ, ಸ್ಥಳ, ಕಾಲ, ಸಂಗತಿಗಳನ್ನು ಉಪಯೋಗಿಸಿಕೊಂಡು ನಿಜವನ್ನು ಹೇಳಬೇಕಾಗುತ್ತದೆ- ಮನುಷ್ಯ ಸ್ವಭಾವದ ಬಗ್ಗೆ.

- ಹರೀಶ್ ಕೇರ
harishkera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com