

ಹಿರಿಯ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಬೆಳಗ್ಗೆಯಿಂದಲೇ ಆರ್ಭಟ ಶುರುವಾಗಿತ್ತು. 'ನಾಳೆ ಇಂಡಿಪೆಂಡೆನ್ಸ್ ಡೇ ಮಾಡ್ತಾ ಇದ್ದೀವಿ. ಈ ಸಲ ಸರ್ಕಾರಿ ಶಾಲೇಲಿ ಕಾರ್ಯಕ್ರಮ ಇದೆ. ಭರ್ಜರಿಯಾಗಿ ಮಾಡಬೇಕು ಅಂತ ಮೇಲಿಂದ ಆರ್ಡರ್ ಬಂದಿದೆ. ಧ್ವಜ ವಂದನೆ, ಸಿಹಿ ಹಂಚೋದು, ಹಾಡು ಹೀಗೆ ಏನೇನೋ ಇದೆ. ದೊಡ್ಡ ಸಾಹೇಬರು ಬೇರೆ ಬರ್ತಾರೆ. ಈಗ್ಲೇ ಹೇಳ್ತಾ ಇದ್ದೀನಿ, ನಾಳೆ ಬೇಗ ಹೋಗಬೇಕು. ಶರ್ಟು-ಪ್ಯಾಂಟು ಎಲ್ಲಾ ಇಸ್ತ್ರಿ ಆಗಿರಬೇಕು. ಬ್ಲಾಕ್ ಶೂಸ್ ಚೆನ್ನಾಗಿ ಪಾಲಿಶ್ ಮಾಡಿರಬೇಕು. ನಾಳೆ ಟಿವಿ, ಪೇಪರ್ನವರು ಬರ್ತಾರೆ. ಫೋಟೋ ತೆಗೀತಾರೆ, ಲೈವ್ ಕವರೇಜ್ ಮಾಡ್ತಾರೆ, ಎಲ್ಲಾ ಟಿಪ್ಟಾಪ್ ಆಗಿರಬೇಕು. ಹಾಗೆಯೇ ಸಂಜೆ ಸಾಹೇಬ್ರು ಮನೆಗೆ ಬರಬಹುದು. ಒಳ್ಳೇ ತಿಂಡಿ-ಕಾಫಿ ರೆಡಿ ಇರ್ಬೇಕು. ನಾಳೆ ಅದಿಲ್ಲ ಇದಿಲ್ಲ ಅಂತ ರಾಗ ಎಳೀಬೇಡಿ. ನಾನು ಹೇಳಿದ್ದು ಎಲ್ಲಾ ಅರ್ಥ ಆಯ್ತಾ?'.
ತಲೆಯಲ್ಲಾಡಿಸಿ ಎಲ್ಲಾ ಸಿದ್ಧ ಮಾಡಲು ಹೊರಟಳು ಹೆಂಡತಿ. ಅಷ್ಟರಲ್ಲಿ ಕೆಲಸದ ಲಿಂಗವ್ವ ಮೈಯೆಲ್ಲಾ ಹಿಡಿಯಾಗಿರಿಸಿಕೊಂಡು ಬಂದು ನಿಂತಳು. ನೋಡಿಯೂ ನೋಡದಂತಿದ್ದ ಸಾಹೇಬರನ್ನು ಮೆಲುವಾಗಿ ಕೆಮ್ಮಿ ತನ್ನತ್ತ ಸೆಳೆದಳು. ಲಿಂಗವ್ವನನ್ನು ಕಂಡು ಸಾಹೇಬರು ಪ್ರಶ್ನಾರ್ಥಕವಾಗಿ ಹುಬ್ಬೇರಿಸಿದರು. 'ಬುದ್ದಿ, ನಾಳೆ ನನ್ನ ಮಗಂಗೆ ಇಸ್ಕೂಲಲ್ಲಿ ಬಾವುಟಾ ಹಾರ್ಸಿ ಸಿಹಿ ಹಂಚ್ತಾರಂತೆ. ಇವ್ನು ಏನೋ ಹಾಡ್ತಾನಂತೆ. ದೊಡ್ಡೋರೆಲ್ಲಾ ಬರ್ತಾರಂತೆ. ಬಾಳಾ ಖುಸಿ. ಅದ್ಕೆ ನಾಳೆ ಒಂದಿನ ಕಾರು ಒರೆಸಾಕೆ ಬರಾಕಿಲ್ಲ, ನಿಮಗೆ ಹೇಳು ಅಂತ ಒಂದೇ ಕಿತ ಹಠ ಹಿಡದವ್ನೆ. ಏನ್ ಮಾಡೋದು? ನಾನೇ ಹೊತ್ತಾರೆ ಬಂದು ಮನೆ ಕೆಲ್ಸ ಮುಗ್ಸಿ ಕಾರೂ ಒರ್ಸಿಟ್ಟು ಹೋಗ್ತೀನಿ. ಹುಡ್ಗಾ ಬಾಳಾ ಆಸೆ ಮಾಡ್ಕಂಡೈತೆ' ಎಂದಳು ಸಣ್ಣ ದನಿಯಲ್ಲಿ.
ನಾಳಿನ ಕಾರ್ಯಕ್ರಮ, ಪ್ರೆಸ್ ಕವರೇಜ್, ಎಂದೆಲ್ಲಾ ದೊಡ್ಡ- ಮುಖ್ಯ ವಿಷಯಗಳ ಬಗೆಗೆ ಚಿಂತಿಸುತ್ತಿದ್ದ ಸಾಹೇಬರ ಸಿಟ್ಟು ನೆತ್ತಿಗೇರಿತು. 'ಏನು ಲಿಂಗವ್ವಾ, ಸ್ಕೂಲಲ್ಲಿ ಬಾವುಟಾ ಹಾರಿಸೋಕೆ ನಿನ್ನ ಮಗಾ ಏನು ಪ್ರಧಾನಿನಾ, ರಾಷ್ಟ್ರಪತೀನಾ? ಮಾಡೋರು ಅದೆಲ್ಲಾ ಮಾಡ್ತಾರೆ. ರಜಾ ಎಲ್ಲಾ ಕೊಡೋಕಾಗಲ್ಲ. ನಿನ್ನ ಮಗನ ಕೆಲಸ ನಿಂಗೆ ಮಾಡೋಕೆ ಬರಲ್ಲ. ನಾಳೆ ತುಂಬಾ ಕೆಲಸ ಇದೆ. ಕಾರು ಒಂದಿಷ್ಟೂ ಕೊಳೆ ಇಲ್ಲದೇ ಕ್ಲೀನಾಗಿರಬೇಕು. ಅಷ್ಟೇ ಅಲ್ಲ, ಬೂಟು ಪಾಲಿಶ್ ಮಾಡಬೇಕು. ಆಮೇಲೆ ಇಡೀ ಮನೆ ಕ್ಲೀನ್ ಮಾಡಬೇಕು. ಸ್ಕೂಲಿಗೆ ಹೋಗೋದು ಇದ್ದೇ ಇದೆ. ಸುಮ್ನೇ ಬರಲಿಕ್ಕೆ ಹೇಳು. ಏನಾದ್ರೂ ತಪ್ಪಿಸಿದ್ರೆ ನಿಮ್ಮಿಬ್ರನ್ನೂ ಕೆಲಸದಿಂದ ತೆಗೆದು ಹಾಕ್ತೀನಿ' ಎಂದು ಗರ್ಜಿಸಿದರು. ಅಲ್ಲಿಗೆ ಮಾತುಕತೆ ಮುಗಿಯಿತು.
ಮರುದಿನ, ಸ್ವಾತಂತ್ರ್ಯ ದಿನಾಚರಣೆಯಂದು ಕಿಟಕಿಯ ಗಾಜು ಒರೆಸುತ್ತಿದ್ದ ಪುಟ್ಟ ಹುಡುಗನ ಕಣ್ಣ ನೀರಲ್ಲಿ ದೂರದ ಬಾವುಟದ ಹಾರಾಟ ಪ್ರತಿಫಲಿಸುತ್ತಿತ್ತು.
- ಡಾ. ಕೆ.ಎಸ್. ಚೈತ್ರಾ