ನಮ್ Ladyಸು

'ಏನ್ ಮೆಟಾಲಿಕ್ ಮಾತೇ ನಿನ್ದು?', 'ಏನ್ ಟೆರಿಬಲ್ಲೆ ನಿನ್ನ ಟಂಗೂ' ಆಫ್‌ಹೂಲಿ...
ನಮ್ Ladyಸು
Updated on: 

'ಏನ್ ಮೆಟಾಲಿಕ್ ಮಾತೇ ನಿನ್ದು?', 'ಏನ್ ಟೆರಿಬಲ್ಲೆ ನಿನ್ನ ಟಂಗೂ' ಆಫ್‌ಹೂಲಿ ಸಿಂಪಲ್ ಆಗಿದ್ದವಳು, ಮದುವೆಯಾದ ನಂತರ ಸಿಂಪ್ಲಿ ಆಫುಲ್ ಆಗುವ ಹೆಣ್ಣಿನ ಚಿತ್ರಣ ಕೈಲಾಸಂ ನಾಟಕಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಗಂಡನನ್ನು ಹೆಣ್‌ಪೆಕ್ಡ್‌ಆಗಿ ಮಾಡಿಕೊಳ್ಳುವ, 'ಹೋಂ'ನ 'ರೂಲ್‌' ಮಾಡುವ ಹೆಂಗಸಾಗಿ ಮನೆಯಾಕೆ ಕಾಣಿಸಿಕೊಳ್ತಾಳೆ. ಇವೆಲ್ಲದರ ಹಿಂದೆ ಕೈಲಾಸಂರವರು ಹೆಣ್ಣಿಗೆ ಕೊಡುತ್ತಿದ್ದ ಅಪಾರ ಗೌರವ, ಕಾಳಜಿಗಳಿತ್ತು ಎಂದರೆ ಅಚ್ಚರಿಯಾಗಬಹುದು. ಪುರುಷರ ದಬ್ಬಾಳಿಕೆಗೆ ಒಳಗಾದ ಆ ಕಾಲದ ಹೆಣ್ಣು ಎಲ್ಲವನ್ನೂ ಧಿಕ್ಕರಿಸಿ ನಿಲ್ಲಬೇಕೆಂಬುದೇ ಕೈಲಾಸಂ ಆಶಯ. ಬಂಡಾಯವೇಳಬೇಕೆಂಬುದು ಅವರ ಸಂಕಲ್ಪ. ಇಂಗ್ಲೆಂಡಿನಲ್ಲಿ ಬರ್ನಾಡ್ ಷಾ, ಜಾನ್ ಗಾಲ್ಸ್‌ವರ್ಥಿ, ಆಸ್ಕರ್‌ವೈಲ್ಡ್‌ರಿಂದ ಪ್ರಭಾವಿತರಾಗಿ ಭಾರತಕ್ಕೆ ವಾಪಸಾದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಶೋಷಣೆಗೆ ಸಿಕ್ಕ 'ವಿಧವೆ'ಯನ್ನು ವೇದಿಕೆ ಮೇಲೆ ಒಂದು ಮುಖ್ಯಪಾತ್ರವಾಗಿ ತಂದಿದ್ದು.

ಸಮಾನ ಹಕ್ಕುಗಳಿಗೆ ಹೆಣ್ಣಿನ ಹೋರಾಟದ ಪರಿಕಲ್ಪನೆ ಹುಟ್ಟಿದ್ದೇ ಕೈಲಾಸಂರ ನಾಟಕಗಳಲ್ಲಿ. 'ತೊಟ್ಟಿಲು ತೂಗುವ ಕೈ ರಾಜ್ಯವಾಳಬೇಕು' ಎಂಬುದನ್ನು 'ಅಮ್ಮಾವ್ರ ಗಂಡ' ನಾಟಕದಲ್ಲಿ ಮಗುವನ್ನು ತೊಟ್ಟಿಲಲ್ಲಿ ತೂಗುತ್ತಾ ಒಂದು ಸಣ್ಣ ಬ್ರೇಕ್‌ಗಾಗಿ ಗಂಡನಾದವನು ಹೆಂಡತಿಯನ್ನು ಕರೆದು 'ವಿಲ್ಯೂ ರೂಲ್ ದಿ ವರ್ಲ್ಡ್ ಫರ್ ಎ ಟ್ವಿಮೂ?' ಎಂದು ಕೇಳ್ತಾನೆ. ಗಂಡ ಮಕ್ಕಳ ಸಾಕುವಿಕೆಯಲ್ಲಿ ಕೈಜೋಡಿಸಬೇಕು, ತೊಟ್ಟಿಲು ತೂಗಬೇಕು ಎಂಬ ಸಂದೇಶವನ್ನು ರಿವರ್ಸ್‌ಗೇರ್‌ನಲ್ಲಿ ಸನ್ನಿವೇಶ ಸೃಷ್ಟಿಸಿ ಕೊಡುತ್ತಾರೆ.

ಜನರೇಶನ್‌ನಿಂದ್ಲೂ ಹೀಗೆ ನಮ್ಮನ್ನು brutalise ಮಾಡಿ ಮಾಡಿ ನಿಮ್ಮ thumb ಕೆಳಗೆ ಇಟ್ಕೊಂಡಿದ್ರಿ, but thank god. we, woman have work up ಅನ್ನೋ ಮಾತು ಬರುತ್ತೆ.

ಮಹಾಭಾರತದಲ್ಲಿ ಬರವು ದ್ರೌಪದಿ ವಸ್ತ್ರಾಪಹರಣ ಕೈಲಾಸಂಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. 'ಕರ್ಣ' ಬರೆದಾಗ ಅವನ ಪಾತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ತುಂಬು ಸಭೆಯಲ್ಲಿ ದುಶ್ಯಾಸನ ದ್ರೌಪದಿ ಸೆರಗಿಗೆ ಕೈ ಹಾಕಿದಾಗ ಕರ್ಣ ಆಕ್ರೋಶದಿಂದ 'ಪೂಜೆಗೆ ಅರ್ಹಳಾದ ಅಬಲೆಯನ್ನು ಅವಮಾನಿಸುವುದು ಕುರುಕುಲಲಲಾಸುನಿಗೆ ಸಲ್ಲ, ಮುಂದಡಿ ಇಟ್ಟರೆ ಸಾವನ್ನಪ್ಪುವಿ ಜೋಕೆ' ಎಂದು ಗರ್ಜಿಸುತ್ತಾನೆ. ಇಲ್ಲಿ ಕರ್ಣನಿಗೆ ಹೆಣ್ಣಿನ ಬಗ್ಗೆ ಇರುವ ಗೌರವ ಎಂದರೆ ಅದು ಕೈಲಾಸಂರವರಿಗೆ ಹೆಣ್ಣಿನ ಬಗ್ಗೆ ಇರುವ ದೃಷ್ಟಿ ಸ್ಪಷ್ಟವಾಗುವುದು. ಸ್ತ್ರೀ ಎಂದರೆ ಅಕ್ಕತಂಗಿ, ತಾಯಿಯಂತೆ ಕಾಣುವ ಮನಸ್ಸು ಅವರದು.

ಇಂಗ್ಲೆಂಡಿನಿಂದ ವಾಪಸಾಗುವುದರೊಳಗೆ ಅವರ ತಾಯಿ ಕಮಲಮ್ಮ ತೀರಿಕೊಂಡಿದ್ದರು. ಈ ಕೊರಗು ಅವರಲ್ಲಿ ಉಳಿದುಕೊಂಡಿತ್ತು. ತನ್ನ ಸ್ನೇಹಿತನ ತಾಯಿಯಯನ್ನು ಒಮ್ಮೆ ನೋಡಿದಾಗ ಆತನಿಗೆ 'You are a lucky bugger' ಅಂದಿದ್ದರಂತೆ. ಕಡೇ ದಿನಗಳಲ್ಲಿ ರಾಶಿಯವರ ಮನೆಯಲ್ಲಿದ್ದಾಗ ಒಂದು ದಿನ ತಾವು ಊಟ ಮಾಡುವುದಕ್ಕಿಂತ ಮುಂಚೆ ರಾಶಿ ದಂಪತಿ ಊಟಕ್ಕೆ ಕೂರಬೇಕೆಂದು ಒತ್ತಾಯಿಸಿ, ಅವರಿಗೆ ನಮಸ್ಕರಿಸಿ 'ಇಂದು ನಮ್ಮಮ್ಮ ಸತ್ತ ದಿನ' ಎಂದು ಹೇಳಿದರಂತೆ. ಶ್ರಾದ್ಧಕ್ಕೆ ಶ್ರದ್ಧೆ ಮುಖ್ಯ, ಆಚರಣೆ ಹೇಗಾದರೇನು? ಎಂಬುದು ಅವರ ದೃಢ ನಿಲುವು.

ಕೇವಲ ಬರವಣಿಗೆಗೆ ಮಾತ್ರ ಅವರ ಸ್ತ್ರೀಪರ ಧೋರಣೆ ಸೀಮಿತವಾಗಿರಲಿಲ್ಲವೆನ್ನುವುದಕ್ಕೆ ಒಂದು ಉದಾಹರಣೆ ಎಂದರೆ, ಒಮ್ಮೆ ತೀ.ತಾ. ಶರ್ಮರ ಪತ್ನಿ ಭಾರತಿಯವರ ಮನೆಗೆ ಒಬ್ಬ ವಿಲಾಯಿತಿ ಪೋಷಾಕಿನಲ್ಲಿ ಆತುರದಿಂದ ನುಗ್ಗಿ, 'ಶಾಮಣ್ಣ ಕಳಿಸಿದ್ದಾರಮ್ಮ. ಕುರ್ಚಿ ತೆಗೆದುಕೊಂಡ್ ಹೋಗ್ತೀನಿ' ಎಂದು ಮಹಡಿಯಲ್ಲಿದ್ದ ಬೆಂಚನ್ನು ಭುಜದ ಮೇಲಿಟ್ಟುಕೊಂಡು ಅದರೊಂದಿಗೆ ಕಟ್ಟಿಕೊಂಡ ಇನ್ನೊಂದು ಸಣ್ಣ ಬೆಂಚು, ಮೂರು ಕುರ್ಚಿಗಳನ್ನು ಕೈಯಲ್ಲಿ ಹಿಡಿದು ಬೀದಿಗಿಳಿದು ಹೊರಟುಹೋದನಂತೆ! ರಾತ್ರಿ ಅಣ್ಣ ಬಂದಾಗ ಭಾರತಿ 'ಯಾರಪ್ಪ ಆ ಯಮ? ನಮ್ಮನೆಯಿಂದ ಬೆಂಚು, ಕುರ್ಚಿಗಳನ್ನು ಹೊತ್ತುಕೊಂಡು ಹೋದ ಭೂಪ?' ಎಂದು ಕೇಳಿದಾಗ, 'ಅವನು ಇಂಗ್ಲೆಂಡಿನಿಂದ ಈಚೆಗಷ್ಟೇ ವಾಪಸಾದ ಒಬ್ಬ ಶ್ರೀಮಂತ ಯುವಕ. ಹೆಸರು ಕೈಲಾಸಂ. ಹರಿಶ್ಚಂದ್ರ ನಾಟಕಕ್ಕೆ ಬಹಳ ಮಂದಿ ಹೆಂಗಸರು ಬಂದಿದ್ದು ಕೂರಲು ಜಾಗವಿಲ್ಲದೆ ನಿಂತು ನಾಟಕ ನೋಡುತ್ತಿದ್ದರು. ಅದನ್ನು ನೋಡಿ ಅವನು ಈ ಕುರ್ಚಿಗಳನ್ನೆಲ್ಲ ತೆಗೆದುಕೊಂಡು ಹೋಗಿದ್ದಾನೆ' ಎಂದರಂತೆ ಕಂದಾಡೆ.

ಒಮ್ಮೆ ರಾಶಿಯವರು ಕೈಲಾಸಂ ಜೊತೆ ಹೋಗುತ್ತಿದ್ದಾಗ ಅಲ್ಲೇ ಗಾಡಿಯೊಂದರಲ್ಲಿ ಒಬ್ಬಳು ಸ್ಫುರದ್ರೂಪಿ ಮಹಿಳೆ ಮತ್ತು ಅವಳ ಮಗಳು ಹೋಗುತ್ತಿದ್ದರಂತೆ. ಶಿವರಾಂರ ದೃಷ್ಟಿ ಎಲ್ಲಿ ನೆಟ್ಟಿತ್ತು ಎಂದು ಗಮನಿಸಿ, 'ಅಲ್ಲಿ ಗಾಡಿಲಿ ಹೋಗುತ್ತಿರುವವರು ಯಾರು ಗೊತ್ತಾ?' ಎಂದು ಕೇಳಿದರಂತೆ. ರಾಶಿ 'ಗೊತ್ತಿಲ್ಲ' ಎಂದರು. 'ಗಾಡಿಲಿ ಹೋಗುತ್ತಿದ್ದವಳು ನನ್ನ ಹೆಂಡತಿ ಮತ್ತು ನನ್ನ ಮಗಳು' ಎಂದರಂತೆ ಕೈಲಾಸಂ. ಎಷ್ಟೋ ದಿನಗಳಾದ ಮೇಲೆ ಕೈಲಾಸಂರ ಪತ್ನಿಯನ್ನು ನೋಡಿದ ನಂತರವೇ ರಾಶಿಯವರಿಗೆ ತಿಳಿದಿದ್ದು ಅಂದು ಕೈಲಾಸಂ ಸುಳ್ಳು ಹೇಳಿದ್ದರೆಂದು. ಪರಸ್ತ್ರೀಯನ್ನು ಯಾವ ರೀತಿ ನೋಡಬೇಕೆಂಬ ವಿಚಾರವನ್ನು ಕೈಲಾಸಂ, ರಾಶಿ ಅವರಿಗೆ ಏನೂ ಹೇಳದೆ ಎಲ್ಲವನ್ನೂ ತಿಳಿಸಿಬಿಟ್ಟಿದ್ದರು.

'ಹಲ್ಬಿದ್ದ ಹದ್ದು' ಅಂತ ಸೊಸೆ ಅತ್ತೆಯನ್ನು ಬಯ್ಯುವುದು, ಸೊಸೆಯನ್ನು 'ಚಿತ್ರಾಂಗಿ' ಎಂದು ಬಯ್ಯುವುದನ್ನು ನೋಡಿದ್ದೇನೆ. ಅವರಿಬ್ಬರ ಜಗಳದಲ್ಲಿ ನಮ್ಮ ಅನುಕಂಪ ಯಾರಿಗೆ ಎನ್ನುವುದೇ ಪ್ರೇಕ್ಷಕನಿಗೆ ಸಮಸ್ಯೆಯಾಗುವಂತೆ ಕೈಲಾಸಂ ಬ್ಯಾಲೆನ್ಸು ಮಾಡುತ್ತಾರೆ. ಒಮ್ಮೆ ಇಬ್ಬರೂ ಸರಿ, ಇನ್ನೊಮ್ಮೆ ಇಬ್ಬರೂ ಸರಿಯಲ್ಲ ಎಂಬ ಭಾವನೆ ಬರುವ ಹಾಗೆ ಚಿತ್ರಿಸುತ್ತಾರೆ. 'ಮನೆಯಲ್ಲಿದ್ಕೊಂಡು equal rights with husbandsನೂ assert ಮಾಡ್ಕೊಂಡು woman's responsibilities a wifehood and motherhood shirk- ಸೊಸೆ ವಹಿಸಿಕೊಳ್ಳೆನು ನನ್ನ ambitionD' ಎಂದು ಹೇಳುವ ಹೆಣ್ಣು ಇಡೀ ಮಹಿಳಾ ವ್ಯಕ್ತಿತ್ವವನ್ನು ಕಣ್ಮುಂದೆ ಇಡುತ್ತಾರೆ.

ಒಮ್ಮೆ ಮಾಸ್ತಿಯವರ ಹೆಂಡತಿ ಕೈಲಾಸಂ ನಾಟಕಕ್ಕೆ ಹೋಗುತ್ತಾರೆ. ಆದರೆ, ಅಂದು ಪ್ರೇಕ್ಷಕರ ಬರದಿಂದಾಗಿ ನಾಟಕವಾಡೋದು ಬೇಡ ಎಂದು ಮಾಸ್ತಿಯವರೇ ಹೇಳುತ್ತಾರೆ. ಆಗ ಕೈಲಾಸಂ 'ನನ್ನ ಸಹೋದರಿ ಮತ್ತು ಮಕ್ಕಳು ನನ್ನ ನಾಟಕ ನೋಡಲು ಬಂದಿದ್ದಾರೆ. ಅವರನ್ನು ನಾನು ನಿರಾಶೆಗೊಳಿಸಬೇಕಾ?' ಎಂದರಂತೆ. ಮತ್ತೊಂದು ದಿನ ಖಂಡಿತ ಹೆಂಡತಿ ಮಕ್ಕಳನ್ನು ಕರಕೊಂಡು ಬರುವುದಾಗಿ ಮಾಸ್ತಿ ಭರವಸೆ ಕೊಡುತ್ತಾರೆ. ಆಗ ಕೈಲಾಸಂ 'ಆಗಲಿ ಆದರೆ ಐದು ನಿಮಿಷ ಕೊಡಿ ಸಾಕು. ನಾನು ಮುಖ ತೊಳೆದುಬಂದು ನಿಮ್ಮ ಪತ್ನಿಯ ಕ್ಷಮೆ ಕೋರುತ್ತೇನೆ' ಎಂದು ಹೇಳಿ ಹಾಗೆ ನಡೆದುಕೊಂಡರಂತೆ.

'ಕೈಲಾಸಂ ವಾರ' ಎಂದು ಏಳುದಿನಗಳ ಅವರ ನಾಟಕ, ಉಪನ್ಯಾಸಗಳು ಒಮ್ಮೆ ಏರ್ಪಾಡಾದಾಗ ಕೈಲಾಸಂ ತಮ್ಮ ಸ್ನೇಹಿತರೊಬ್ಬರಿಗೆ ಕಾಗದ ಬರೆದು 'ನೀವೆಲ್ಲರೂ ಈ ರೀತಿ ತೊಡಗಿಕೊಳ್ಳುವುದರ ಬದಲು ನಿಮ್ಮ ನಿಮ್ಮ ಮನೆ ಸಾತು ಪಾತುಗಳನ್ನು ಸಂತೋಷಗೊಳಿಸುವುದರಲ್ಲಿ ಆಸಕ್ತಿ ವಹಿಸಬಾರದೆ?' ಎಂದು ಕೇಳಿದ್ದರಂತೆ.

- ಕೃಷ್ಣ ಸುಬ್ಬರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com